ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಗ್ರಾಮಸ್ಥರಿಗೆ ಪಿಡಿಒ ಕಾವ್ಯಾ ಸಲಹೆ

KannadaprabhaNewsNetwork |  
Published : Jun 10, 2025, 01:22 AM IST
ನರೇಗಾ ಸದುಪಯೋಗ ಪಡೆದುಕೊಳ್ಳಿ  | Kannada Prabha

ಸಾರಾಂಶ

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಶೇ. ೫೦ರ ಸಬ್ಸಿಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಖರೀದಿ, ಪವರ್ ಟಿಲ್ಲರ್ ಹಾಗೂ ಕೆಲವು ಬೆಳೆಗಳಿಗೆ ಸಬ್ಸಿಡಿ ಸೌಲಭ್ಯವಿದೆ.

ಕನ್ನಡಪ್ರಭ ವಾರ್ತೆ ಯಳಂದೂರು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಅನೇಕ ಕಾಮಗಾರಿಗಳಿವೆ. ಜೊತೆಗೆ ವೈಯಕ್ತಿಕವಾಗಿ ರೈತರಿಗೂ ಅನೇಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದ್ದು, ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅಂಬಳೆ ಗ್ರಾಪಂನ ಪಿಡಿಒ ಸಿ.ಎನ್. ಕಾವ್ಯಾ ಕರೆ ನೀಡಿದರು.

ಅವರು ಸೋಮವಾರ ತಾಲೂಕಿನ ಅಂಬಳೆ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಹಾಗೂ ೧೫ನೇ ಹಣಕಾಸು ಆಯೋಗದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅಂಬಳೆ ಗ್ರಾಪಂನಲ್ಲಿ ಈ ಸಾಲಿನಲ್ಲಿ ಒಟ್ಟು ೧೩೨ ಕಾಮಗಾರಿಗಳನ್ನು ಮಾಡಲಾಗಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ೧೨೭ ಕಾಮಗಾರಿಗಳು ಹಾಗೂ ತೋಟಗಾರಿಕಾ ಇಲಾಖೆಯ ವತಿಯಿಂದ ೫ ಕಾಮಗಾರಿಗಳು ನಡೆದಿವೆ. ಈ ಅವಧಿಯಲ್ಲಿ ಒಟ್ಟು ೪೯,೪೯ ಲಕ್ಷ ರು. ಕೂಲಿ ಮೊತ್ತ, ೩೭.೯೩ ಲಕ್ಷ ರು. ಸಾಮಗ್ರಿ ಮೊತ್ತವೂ ಸೇರಿದಂತೆ ಒಟ್ಟು ೮೭.೪೨ ಲಕ್ಷ ರು.ಗಳನ್ನು ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು, ಇಲ್ಲಿನ ಪೌರ ಕಾರ್ಮಿಕರು ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ. ಹಾಗಾಗಿ ಗ್ರಾಮದ ಬೀದಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿ ಹೂಳು ತೆಗೆಯುವುದಿಲ್ಲ. ರಸ್ತೆಯನ್ನು ಸ್ವಚ್ಛ ಮಾಡುತ್ತಿಲ್ಲ ಎಂದು ದೂರಿದರು.

ಇದಕ್ಕೆ ಪಿಡಿಒ ಸಿ.ಎನ್. ಕಾವ್ಯಾ ಮಾತನಾಡಿ, ಈ ಸಂಬಂಧ ನನಗೂ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಬಂಧಪಟ್ಟ ಪೌರ ಕಾರ್ಮಿಕರಿಗೆ ನೋಟಿಸ್ ನೀಡಲಾಗಿದ್ದು, ಕೂಡಲೇ ಕ್ರಮ ಜರುಗಿಸಲಾಗುವುದು, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಸಭೆಗೆ ತಿಳಿಸಿದರು.

ತೋಟಗಾರಿಕೆ ಇಲಾಖೆಯ ಅಧಿಕಾರಿ ಶಿವರಂಜಿನಿ ಮಾತನಾಡಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಶೇ. ೫೦ರ ಸಬ್ಸಿಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಖರೀದಿ, ಪವರ್ ಟಿಲ್ಲರ್ ಹಾಗೂ ಕೆಲವು ಬೆಳೆಗಳಿಗೆ ಸಬ್ಸಿಡಿ ಸೌಲಭ್ಯವಿದೆ. ಇದು ಎಲ್ಲಾ ವರ್ಗದ ರೈತರಿಗೂ ಇರುವುದರಿಂದ ಇದರ ಲಾಭವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಕೆಲ ರೈತರು ಇಲಾಖೆಯಲ್ಲಿ ಲಭಿಸುವ ಸೌಲಭ್ಯಗಳ ಮಾಹಿತಿಯನ್ನು ಗ್ರಾಪಂನ ಕಚೇರಿಯ ಮುಂಭಾಗದಲ್ಲೂ ಅಂಟಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂಧಿಸಿದ ಅಧಿಕಾರಿ ಈ ಬಗ್ಗೆಯೂ ಕ್ರಮ ವಹಿಸುವ ಭರವಸೆ ನೀಡಿದರು. ನೋಡಲ್ ಅಧಿಕಾರಿ ಸಕಲೇಶ್ವರ್ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಎಲ್ ನವೀನ್, ಸದಸ್ಯರಾದ ಸಿದ್ದನಾಯಕ, ರಾಣಿ, ರಾಜಣ್ಣ, ಮಹದೇವಸ್ವಾಮಿ, ನೋಡಲ್ ಅಧಿಕಾರಿ ಸಕಲೇಶ್ವರ್, ಪಿಡಿಒ ಸಿ.ಎನ್. ಕಾವ್ಯಾ ಕಾರ್ಯದರ್ಶಿ ಪುಟ್ಟರಾಜು ಸೇರಿದಂತೆ ಅನೇಕರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ