ನೈಸರ್ಗಿಕ ರಕ್ಷಣಾ ಗೋಡೆ ಪಶ್ಚಿಮ ಘಟ್ಟಕ್ಕೆ ಅವಧಿ ಪೂರ್ವದಲ್ಲೇ ಕಾಡ್ಗಿಚ್ಚು ಕಂಟಕ !

KannadaprabhaNewsNetwork | Updated : Mar 03 2025, 09:11 AM IST

ಸಾರಾಂಶ

ಕರಾವಳಿಯಲ್ಲಿ ಹೀಟ್‌ ವೇವ್‌ ಅವಧಿ ಪೂರ್ವದಲ್ಲೇ ಕಾಣಿಸಿಕೊಂಡು ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ಈಗಾಗಲೇ ದಾಖಲಾಗಿದೆ. ಇದರೊಂದಿಗೆ  , ನಾಡಿಗೆ ನೀರಿನ ಮೂಲದ ಅಕ್ಷಯ ಪಾತ್ರೆಯಾಗಿರುವ ಪಶ್ಚಿಮ ಘಟ್ಟದಲ್ಲಿ ಈ ವರ್ಷ ಅವಧಿ ಪೂರ್ವದಲ್ಲೇ ಕಾಡ್ಗಿಚ್ಚು ಕಾಣಿಸಿಕೊಂಡಿದೆ. 

ಸಂದೀಪ್‌ ವಾಗ್ಲೆ

 ಮಂಗಳೂರು : ಕರಾವಳಿಯಲ್ಲಿ ಹೀಟ್‌ ವೇವ್‌ ಅವಧಿ ಪೂರ್ವದಲ್ಲೇ ಕಾಣಿಸಿಕೊಂಡು ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ಈಗಾಗಲೇ ದಾಖಲಾಗಿದೆ. ಇದರೊಂದಿಗೆ ಕರಾವಳಿಯುದ್ದಕ್ಕೂ ನೈಸರ್ಗಿಕ ರಕ್ಷಣಾ ಗೋಡೆಯಾಗಿ, ನಾಡಿಗೆ ನೀರಿನ ಮೂಲದ ಅಕ್ಷಯ ಪಾತ್ರೆಯಾಗಿರುವ ಪಶ್ಚಿಮ ಘಟ್ಟದಲ್ಲಿ ಈ ವರ್ಷ ಅವಧಿ ಪೂರ್ವದಲ್ಲೇ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಮುಂದಿನ 3 ತಿಂಗಳ ಕಡು ಬೇಸಗೆಯುದ್ದಕ್ಕೂ ನಿತ್ಯ ಹರಿದ್ವರ್ಣದ ಅರಣ್ಯಕ್ಕೆ ಕಾಡ್ಗಿಚ್ಚು ಭಾರೀ ಅಪಾಯ ತಂದೊಡ್ಡುವ ಎಲ್ಲ ಸಾಧ್ಯತೆಗಳಿವೆ.

ಪಶ್ಚಿಮ ಘಟ್ಟದಲ್ಲಿ ಕಳೆದ ಆರೇಳು ವರ್ಷಗಳಿಂದ ಹಿಂದೆಂದೂ ಕಾಣದಂಥ ಭೂಕುಸಿತಗಳು, ಮೇಘಸ್ಫೋಟಗಳು ಸಂಭವಿಸಿ ಜನರು, ಪ್ರಾಣಿ, ಸಸ್ಯಸಂಕುಲಕ್ಕೆ ಅಪಾರ ಹಾನಿ ಆಗುತ್ತಲೇ ಇವೆ. ಮಳೆಗಾಲದ ಭೂಕುಸಿತಕ್ಕೂ ಬೇಸಗೆಯ ಕಾಡ್ಗಿಚ್ಚಿಗೂ ನೇರ ಸಂಬಂಧ ಇದೆ ಎಂದು ಪರಿಸರ ತಜ್ಞರು ಹೇಳುತ್ತಾರೆ. ನಾಡಿನ ನೆಲ- ಜಲ- ಜೀವಸಂಕುಲಕ್ಕೆ ಇಷ್ಟುದೊಡ್ಡ ಕಂಟಕ ಎದುರಾಗಿರುವಾಗ ಕಾಡ್ಗಿಚ್ಚನ್ನು ನಿಯಂತ್ರಿಸಲು ಹೆಲಿಕಾಪ್ಟರ್‌ನಂತಹ ಅತ್ಯಾಧುನಿಕ ವ್ಯವಸ್ಥೆ ಜಾರಿಗೊಳಿಸುವ ದಶಕದ ಬೇಡಿಕೆ ಮಾತ್ರ ಈಡೇರಿಲ್ಲ.

ಅವಧಿಪೂರ್ವ ಕಾಡ್ಗಿಚ್ಚು:

ಪಶ್ಚಿಮ ಘಟ್ಟದಲ್ಲಿ ಸಾಮಾನ್ಯವಾಗಿ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡ್ಗಿಚ್ಚು ಈ ವರ್ಷ ಜನವರಿಯಲ್ಲೇ ಕಾಣಿಸಿಕೊಂಡಿದ್ದು, ಎಕರೆಗಟ್ಟಲೆ ಸೂಕ್ಷ್ಮ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಜನವರಿಯಲ್ಲೇ ಕಾಡ್ಗಿಚ್ಚು ಬಿದ್ದಿದ್ದರೆ, ಕಳೆದ ಎರಡೇ ತಿಂಗಳಲ್ಲಿ ದ.ಕ. ಜಿಲ್ಲೆಯೊಂದರಲ್ಲೇ 15 ಅರಣ್ಯ ಪ್ರದೇಶಗಳಲ್ಲಿನ 224 ಗುಡ್ಡಗಳಿಗೆ ಬೆಂಕಿ ಬಿದ್ದ ಪ್ರಕರಣಗಳು ನಡೆದಿವೆ. ಈ ಪೈಕಿ ಫೆಬ್ರವರಿ ಕೊನೆಯ ವಾರವೊಂದರಲ್ಲೇ ಆರೇಳು ಪ್ರಕರಣಗಳು ನಡೆದಿವೆ. ಬೇಸಗೆಯ ಆರಂಭದಲ್ಲೇ ಹೀಗಾದರೆ ಇನ್ನುಳಿದ ಮೂರು ತಿಂಗಳ ಪರಿಸ್ಥಿತಿ ಏನು ಎಂಬ ಆತಂಕ ಎದುರಾಗಿದೆ.

ಅತ್ಯಾಧುನಿಕ ಉಪಕರಣಗಳೇ ಇಲ್ಲ!:

ಪಶ್ಚಿಮ ಘಟ್ಟದ ದುರ್ಗಮ ಪ್ರದೇಶಗಳಲ್ಲಿ ಬೆಂಕಿ ಬಿದ್ದಾಗ ನಂದಿಸಲು ಅರಣ್ಯ ಇಲಾಖೆ ಬಳಿ ಯಾವುದೇ ಆಧುನಿಕ ವ್ಯವಸ್ಥೆಗಳಿಲ್ಲ. ರಸ್ತೆ ವ್ಯವಸ್ಥೆ ಇರುವವರೆಗೂ ವಾಹನದಲ್ಲಿ ತೆರಳಿ ಬಳಿಕ ಕಾಲ್ನಡಿಗೆ ಮೂಲಕ ಹೋಗಿ ಅದೇ ಸಾಂಪ್ರದಾಯಿಕ ‘ಫೈರ್‌ ಲೈನ್‌’ ಮಾಡುತ್ತಾರೆ. ಗಾಳಿ ವೇಗವಾಗಿದ್ದರೆ ಫೈರ್‌ಲೈನ್‌ನಿಂದ ಯಾವುದೇ ಉಪಯೋಗ ಆಗುವುದಿಲ್ಲ. ಇಲಾಖೆ ಬಳಿ ನೀರು- ಅಗ್ನಿ ಶಾಮಕ ವಸ್ತುಗಳನ್ನು ಕೊಂಡೊಯ್ಯಲು ವ್ಯವಸ್ಥೆಯೇ ಇಲ್ಲ.

ವಿದೇಶಗಳಲ್ಲಾದರೆ ಅರಣ್ಯಕ್ಕೆ ಬೆಂಕಿ ಬಿದ್ದ ಕೂಡಲೆ ಹೆಲಿಕಾಪ್ಟರ್‌ ಮೂಲಕ ತಕ್ಷಣ ಸ್ಥಳಕ್ಕೆ ತೆರಳಿ ನಂದಿಸುವ ವ್ಯವಸ್ಥೆ ಇದೆ. ನಮ್ಮ ರಾಜ್ಯದಲ್ಲಿ ಪ್ರತಿವರ್ಷ ಇಷ್ಟು ದೊಡ್ಡ ಅನಾಹುತಗಳು ಕಣ್ಮುಂದೆಯೇ ನಡೆಯುತ್ತಿರುವಾಗ ಅತ್ಯಾಧುನಿಕ ವ್ಯವಸ್ಥೆಗಳನ್ನು ಕಲ್ಪಿಸುವ ಜರೂರತ್ತಿದೆ ಎಂದು ಪರಿಸರವಾದಿ ಹೋರಾಟಗಾರ ದಿನೇಶ್‌ ಹೊಳ್ಳ ಆಗ್ರಹಿಸುತ್ತಾರೆ.

ಎಲ್ಲವೂ ಮಾನವ ನಿರ್ಮಿತ ಬೆಂಕಿ:

ಪಶ್ಚಿಮ ಘಟ್ಟದಲ್ಲಿ ಕಾಣಿಸುವ ಬೆಂಕಿ ಅನಾಹುತಗಳೆಲ್ಲವೂ ಮಾನವ ನಿರ್ಮಿತ. ಘಟ್ಟ ಪ್ರದೇಶದುದ್ದಕ್ಕೂ ಅವ್ಯಾಹತವಾಗಿರುವ ರೆಸಾರ್ಟ್‌ಗಳು, ಬೃಹತ್‌ ಎಸ್ಟೇಟ್‌ನವರು, ಟ್ರಕ್ಕಿಂಗ್‌ ಹೋಗುವವರ ರಾತ್ರಿ ಕ್ಯಾಂಪ್‌ ಫೈರ್‌ ಇತ್ಯಾದಿಗಳಿಂದಲೇ ಹೆಚ್ಚು ಕಾಡ್ಗಿಚ್ಚು ಸೃಷ್ಟಿಯಾಗುತ್ತಿದೆ. ಇದನ್ನೆಲ್ಲ ತಡೆಗಟ್ಟಬೇಕಾದರೆ ಪಶ್ಚಿಮ ಘಟ್ಟದಲ್ಲಿ ಕನಿಷ್ಠ ಪಕ್ಷ ಬೇಸಗೆಯ ಅವಧಿಯಲ್ಲಾದರೂ ಮಾನವ ಹಸ್ತಕ್ಷೇಪ ಸಂಪೂರ್ಣ ನಿಲ್ಲಿಸಬೇಕು. ಮಾನವನಿಗೆ ಅರಣ್ಯ ಪ್ರವೇಶವನ್ನೇ ನಿಷೇಧಿಸಬೇಕು ಎಂದೂ ದಿನೇಶ್‌ ಹೊಳ್ಳ ಒತ್ತಾಯಿಸುತ್ತಾರೆ 

ಕಾಡ್ಗಿಚ್ಚಿನಿಂದಲೇ ಭೂಕುಸಿತ, ‘ಜಲಪ್ರಳಯ’!

ಆರೇಳು ವರ್ಷಗಳ ಹಿಂದೆ ಪಶ್ಚಿಮ ಘಟ್ಟವು ಉದ್ದಕ್ಕೂ ಬಾಯ್ದೆರೆದು, ದೊಡ್ಡ ಪರ್ವತ ಶ್ರೇಣಿಗಳೇ ಕುಸಿದು ಹೆದ್ದಾರಿಗಳಷ್ಟೇ ಅಲ್ಲ, ಮಂಗಳೂರು- ಬೆಂಗಳೂರು ರೈಲು ಮಾರ್ಗ ವಾರಗಳ ಕಾಲ ಬಂದ್‌ ಆಗಿತ್ತು. ಸುಳ್ಯ- ಮಡಿಕೇರಿ ಭಾಗದಲ್ಲಂತೂ ಪರ್ವತ ಶ್ರೇಣಿಗಳ ಭೂಕುಸಿತಕ್ಕೆ ಪ್ರಾಣಹಾನಿ ಸಂಭವಿಸಿತ್ತು. ಅದಾದ ಮರುವರ್ಷ ಘಟ್ಟ ಪ್ರದೇಶದಲ್ಲಿ ಭಾರೀ ಭೂಕುಸಿತ ಉಂಟಾಗಿ ಬೆಳ್ತಂಗಡಿ ಭಾಗದಲ್ಲಿ ಜಲಪ್ರಳಯ, ಅಪಾರ ನಷ್ಟ ಉಂಟಾಗಿತ್ತು. ಪ್ರತಿ ವರ್ಷವೂ ಒಂದಿಲ್ಲೊಂದು ಕಡೆ ಭೂಕುಸಿತ, ಮೇಘಸ್ಫೋಟ ನಡೆಯುತ್ತಲೇ ಇದೆ. ಬೇಸಗೆಯಲ್ಲಿ ಕಾಡ್ಗಿಚ್ಚಿನಿಂದ ಶೋಲಾರಣ್ಯದ ಮೇಲ್ಭಾಗದಲ್ಲಿರುವ ಅತಿ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಸುಟ್ಟು ಹೋಗುತ್ತದೆ. ಮಳೆ ಬಿದ್ದ ಕೂಡಲೆ ಹುಲ್ಲುಗಾವಲಿಗೆ ನೀರು ಹಿಡಿದಿಡುವ ಶಕ್ತಿ ಕುಂಠಿತಗೊಂಡು ಇಂಥ ಅನಾಹುತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಪರಿಸರವಾದಿ ದಿನೇಶ್‌ ಹೊಳ್ಳ.

Share this article