ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಿಲ್ಲಾದ್ಯಂತ ಆಯುಧ ಪೂಜೆ- ವಿಜಯದಶಮಿ ಸಂಭ್ರಮಕ್ಕೆ ಬರದ ಗರ ಬಡಿದಿರುವ ಮಧ್ಯೆಯೇ, ಹಬ್ಬ ಆಚರಣೆಗೆ ಮುಖ್ಯವಾದ ಹೂವುಗಳು, ಹಣ್ಣುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಜನತೆಯನ್ನು ತಟ್ಟಿದೆ. ನಗರದ ಮಾರುಕಟ್ಟೆ, ಪ್ರಮುಖ ರಸ್ತೆ ಬದಿಗಳಲ್ಲಿ ಬಾಳೆಕಂಬ ಹಾಗೂ ಬೂದುಗುಂಬಳವನ್ನು ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ, ಬೆಲೆ ಏರಿಕೆಯ ಬಿಸಿಯಿಂದ ಜನರು ಅಳೆದು ತೂಗಿ ವಸ್ತುಗಳ ಖರೀದಿ ಮಾಡುವಂತಾಗಿದೆ. ನಾಡಹಬ್ಬ ದಸರಾಕ್ಕೆ ಕಳೆ ಕಟ್ಟಿದೆ. ಈಗಾಗಲೇ ಅಂತಿಮ ಸಿದ್ಧತೆಗಳು ನಡೆದಿದ್ದು, ಆಯುಧ ಪೂಜೆ ಹಾಗೂ ವಿಜಯದಶಮಿ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಮತ್ತು ಇತರೆ ವಸ್ತುಗಳ ಮಾರಾಟ ಜೋರಾಗಿತ್ತು. ಒಂದೆಡೆ ನವರಾತ್ರಿ ಆಚರಣೆಯ ಸಂಭ್ರಮವಾದರೆ, ಇನ್ನೊಂದೆಡೆ ಅ.23ರಂದು ಆಯುಧ ಪೂಜೆಗೆ ಕೈಗಾರಿಕಾ ಸ್ಥಾವರಗಳಲ್ಲಿ, ವಾಹನ ಮಾಲೀಕರು ಎಲ್ಲ ರೀತಿಯ ಸಿದ್ಧತೆ ನಡೆಸಿದ್ದಾರೆ. ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಆಯುಧ ಪೂಜೆಗಾಗಿ ಹೂವು, ಹಣ್ಣುಗಳ ಖರೀದಿ ಭರಾಟೆ ನಡೆಯುತ್ತಿದೆ. ಈ ಬಾರಿ ಸೇವಂತಿಗೆ, ಚೆಂಡು ಹೂವು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿವೆ. ನಗರದ ದುರ್ಗಿಗುಡಿ, ಪ್ರವಾಸಿ ಮಂದಿರ, ಕುವೆಂಪು ರಸ್ತೆ, ಗೋಪಿ ಸರ್ಕಲ್, ಗಾಂಧಿ ಬಜಾರ್, ವಿನೋಬ ನಗರ, ವಿದ್ಯಾನಗರ, ಬಿ.ಎಚ್. ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಹೂವಿನ ಮಾರಾಟ ಭರದಿಂದ ಸಾಗಿದೆ. ಸಂಭ್ರಮದಲ್ಲಿ ಅದ್ಧೂರಿಯಾಗಿ ವಿಜಯದಶಮಿ ಆಯುಧ ಪೂಜೆ ತಯಾರಿಯಲ್ಲಿದ್ದ ಸಾರ್ವಜನಿಕರಿಗೆ ಬೆಲೆ ಏರಿಕೆ ಬಿಸಿ ಜೋರಾಗಿಯೇ ತಟ್ಟಿದೆ. ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು ಸೇರಿದಂತೆ ಹೂವುಗಳ ಬೆಲೆ ಮೊದಲೇ ಗಗನಕ್ಕೇರಿದೆ. ಜನರು ಬೆಲೆ ಏರಿಕೆ ನಡುವೆಯೂ ಅಲ್ಪಸ್ವಲ್ಪ ಖರೀದಿಸಿದ್ದಾರೆ. ಬರಗಾಲದ ಹಿನ್ನೆಲೆ ಈಗ ಹೂವುಗಳಿಗೆ ಉತ್ತಮ ಬೆಲೆ ಬಂದಿದೆ. ಆಯುಧ ಪೂಜೆ ಮತ್ತು ವಿಜಯದಶಮಿ ಪ್ರತಿಯೊಬ್ಬರೂ ಆಚರಣೆ ಮಾಡುವ ಹಬ್ಬ. ಎಲ್ಲ ಅಂಗಡಿಗಳು, ಮನೆ, ದೇಗುಲ ಹೀಗೆ ಎಲ್ಲೆಡೆ ಸಡಗರ ಮನೆ ಮಾಡಿರುತ್ತದೆ. ವಾಹನ, ಆಯುಧಗಳು, ಯಂತ್ರೋಪಕರಣ, ದೇವರ ಉತ್ಸವಗಳು ನಡೆಯುತ್ತವೆ. ಹೂವಿನ ಅಲಂಕಾರವೇ ಈ ಹಬ್ಬದ ವಿಶೇಷ. ಹೀಗಾಗಿ ಕಳೆದ ಕೆಲವು ದಿನಗಳಿಂದ ಪಾತಾಳಕ್ಕೆ ಕುಸಿದಿದ್ದ ಹೂವಿನ ಬೆಲೆ, ಈಗ ಗಗನಕ್ಕೇರಿದೆ. ಇನ್ನೊಂದೆಡೆ ಹಣ್ಣು ಮತ್ತು ತರಕಾರಿಗಳ ಬೆಲೆಯೂ ದುಬಾರಿಯಾಗಿದೆ. ದುಬಾರಿಯಾದ ಹೂವುಗಳು: ಪ್ರತಿ ಮಾರು ಚೆಂಡು ಹೂ ₹150 ರಿಂದ ₹200 ವರೆಗೆ ಮಾರಾಟವಾಗಿವೆ. ಕೆಲವರೆ 4 ಮಾರು ಹಾರದ ಕುಚ್ಚಿಗೆ ₹200ರಿಂದ ₹250 ವರೆಗೆ ಮಾರಾಟ ಮಾಡಲಾಗುತ್ತಿದೆ. ಸೇವಂತಿಗೆ ಕೆ.ಜಿ.ಗೆ ₹400, ಸುಗಂಧರಾಜ ಕೆಜಿಗೆ ₹500, ಮಲ್ಲಿಗೆ ಪ್ರತಿ ಕೆಜಿಗೆ ₹1000- ₹1400, ಗುಲಾಬಿ ಕೆಜಿಗೆ ₹400 ದಾಟಿದ್ದರೆ ಇತ್ತ, ಕಾಕಡ, ಕನಕಾಂಬರ ಸೇರಿದಂತೆ ಇತರೆ ಹೂವುಗಳ ಧಾರಣೆಯಲ್ಲಿ ಬಾರಿ ಏರಿಕೆ ಕಂಡಿದೆ. ಅ.24ರಂದು ವಿಜಯದಶಮಿ ಅಂಬುಛೇದನದೊಂದಿಗೆ ದಸರಾ ಸಮಾಪ್ತಿಗೊಳ್ಳಲಿದೆ. ನವರಾತ್ರಿ ಆರಂಭದಿಂದ ನಗರದ ಬಹುತೇಕ ದೇವಸ್ಥಾನಗಳಲ್ಲಿ ವಿವಿಧ ಅಲಂಕಾರದಲ್ಲಿ ದುರ್ಗೆಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಯುತ್ತಿದೆ. ನಗರ ಪಾಲಿಕೆಯಿಂದ ಕಳೆದ ಒಂದು ವಾರದಿಂದಲೂ ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ಈ ಬಾರಿ ಪಾಲಿಕೆ ವಿಶೇಷವಾಗಿ ದಸರಾವನ್ನು ಆಚರಿಸುತ್ತಿದ್ದು, ಸಾಂಸ್ಕೃತಿಕ ಲೋಕವೇ ಅನಾವರಣಗೊಂಡಿದೆ. ಮೆರವಣಿಗೆಯಲ್ಲಿ ಅಂಬಾರಿ ಹೊರಲು ಗಜಪಡೆ ಸಿದ್ಧವಾಗಿರುವುದು ಕೂಡ ವಿಶೇಷವಾಗಿದೆ. ಹಣ್ಣುಗಳೂ ದುಬಾರಿ: ಸೇಬು, ಮೂಸಂಬೆ, ಕಿತ್ತಲೆ, ಬಾಳೆಹಣ್ಣು ಹೀಗೆ ವಿವಿಧ ಹಣ್ಣುಗಳ ಬೆಲೆಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಸೇಬು ₹180 ರಿಂದ ₹250, ಮೂಸಂಬೆ ₹100 ರಿಂದ ₹130 ರವರೆಗೆ, ಸಪೋಟ ₹90ರಂತೆ ಪ್ರತಿ ಕೆಜಿಗೆ ಮಾರಾಟವಾಗುತ್ತಿವೆ. ಬೂದುಗುಂಬಳಕ್ಕೆ ಹೆಚ್ಚಿದ ಬೇಡಿಕೆ: ಆಯುಧ ಪೂಜೆಗೆ ಬೂದುಗುಂಬಳ ಶ್ರೇಷ್ಠವಾಗಿದ್ದು, ಇದಕ್ಕಾಗಿ ಭಾರೀ ಬೇಡಿಕೆ ಕಂಡುಬಂದಿದೆ. ಈ ಬಾರಿ ಬೂದುಗುಂಬಳಕಾಯಿ ಕೂಡ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಲಗ್ಗೆ ಇಟ್ಟಿದೆ. ಬೆಲೆಯೂ ಗಗನಕ್ಕೇರಿದೆ. ಒಂದು ಸಾಧಾರಣ ಬೂದುಗುಂಬಳಕಾಯಿ ಕನಿಷ್ಠ ₹100 ರಿಂದ ₹150 ವರೆಗೆ ಮಾರಾಟವಾಗುತ್ತಿದೆ. ಇವುಗಳೊಂದಿಗೆ ಮಾವಿನ ಸೊಪ್ಪು ಮತ್ತು ಬಾಳೆಗಿಡಗಳು ಮಾರುಕಟ್ಟೆಗೆ ರಾಶಿ ರಾಶಿ ಬಂದಿದೆ. ವಾಹನಗಳು, ಅಂಗಡಿ ಮಂಗಟ್ಟುಗಳು ಅಲಂಕಾರ: ಆಯುಧ ಪೂಜೆ ಹಿನ್ನೆಲೆ ಗ್ಯಾರೇಜ್, ವರ್ಕ್ ಶಾಪ್, ಸಲೂನ್ ಶಾಪ್, ವಾಹನಗಳ ಶೋರೂಮ್, ಟ್ರಾವೆಲ್ಸ್, ಪ್ರಿಂಟಿಂಗ್ ಪ್ರೆಸ್ ಮುಂತಾದ ಅಂಗಡಿ ಮುಂಗಟ್ಟುಗಳಲ್ಲಿ ಪೂಜೆಗೆ ಸಿದ್ಧತೆ ನಡೆಸಲಾಗಿದೆ. ವಾಹನಗಳನ್ನು ತೊಳೆದು ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರೈತರು ದಸರಾ ಸಂಭ್ರಮಕ್ಕೆ ತಮ್ಮದೇ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಗಾಡಿ, ಎತ್ತು, ಬೇಸಾಯ ಪರಿಕರ, ಕೃಷಿ ಸಲಕರಣೆ, ಟಿಲ್ಲರ್, ಟ್ರ್ಯಾಕ್ಟರ್, ಯಂತ್ರೋಪಕರಣ ಗಳನ್ನು ಸ್ವಚ್ಛಗೊಳಿಸಿ ಸಿದ್ಧ ಮಾಡಿಕೊಂಡಿದ್ದಾರೆ. ಒಟ್ಟಾರೆ ಬರದ ನಡುವೆ, ಬೆಲೆ ಏರಿಕೆ ಬಿಸಿ ಮಧ್ಯೆಯೂ ಜನತೆ ಉತ್ಸಾಹದಿಂದ ಸಕಲ ರೀತಿಯ ಸಿದ್ಧತೆಯಲ್ಲಿ ಭರದ ತೊಡಗಿರುವುದು ವಿಶೇಷ. - - - - -22ಎಸ್ಎಂಜಿಕೆಪಿ01: ಶಿವಮೊಗ್ಗ ಮಹಾನಗರ ಪಾಲಿಕೆ ಎದುರು ರಸ್ತೆಯಲ್ಲಿ ದಸರಾ ಅಂಗವಾಗಿ ರಸ್ತೆ ಬದಿಯಲ್ಲಿ ಭರದಿಂದ ನಡೆದಿರುವ ಚೆಂಡು ಹೂಗಳ ಮಾರಾಟ. -22ಎಸ್ಎಂಜಿಕೆಪಿ02: ಶಿವಮೊಗ್ಗ ಗಾಂಧಿಬಜಾರ್‌ಬಲ್ಲಿ ದಸರಾ ಹಬ್ಬಕ್ಕಾಗಿ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿ, ಮಳಿಗೆಗಳಿಗೆ ಮುಗಿಬಿದ್ದ ಜನ. -22ಎಸ್ಎಂಜಿಕೆಪಿ03: ಶಿವಮೊಗ್ಗ ನಗರದಲ್ಲಿ ಆಯುಧ ಪೂಜೆಗೆ ಬೂದುಗುಂಬಳಕಾಯಿ ಖರೀದಿಸುತ್ತಿರುವ ಜನ.