ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೈಲಾರಲಿಂಗೇಶ್ವರ ಜಾತ್ರೆ ಅಂಗವಾಗಿ ಕೈಗೊಳ್ಳಬೇಕಾದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಈ ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವುದರಿಂದ, ಈ ಬಾರಿ ಅಚ್ಚುಕಟ್ಟಾದ ಸುರಕ್ಷತಾ ಕ್ರಮಗಳನ್ನು ಪೊಲೀಸ್ ಇಲಾಖೆ ವತಿಯಿಂದ ಕೈಗೊಳ್ಳಬೇಕು. ದೇವಸ್ಥಾನದ ಪಲ್ಲಕ್ಕಿ ಉತ್ಸವ ಮೇಲಿನವರೆಗೂ ಹೋಗಿಬರಲು ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಕುರಿಮರಿಗಳ ಹಾರಾಟ ನಿಷೇಧ:ಜಾತ್ರೆಯ ಅಂಗವಾಗಿ ದೇವರಿಗೆ ಹರಕೆಯ ನೆಪದಲ್ಲಿ ಕುರಿ-ಮರಿಗಳನ್ನು ಹಾರಿಸುವುದನ್ನು ಪ್ರಾಣಿ ಪ್ರತಿಬಂಧಕ ಕಾಯ್ದೆ ಅನ್ವಯ ನಿಷೇಧಿಸಲಾಗಿದೆ. ಇದರ ನಿಯಂತ್ರಣಕ್ಕಾಗಿ ಆರು ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.
ಜಾತ್ರೆ ನಿಮಿತ್ತ ಅಗ್ನಿ ಅವಘಡ ಸಂಭವಿಸದಂತೆ ಅವಶ್ಯಕ ಮುನ್ನೆಚ್ಚರಿಕೆ ವಹಿಸಬೇಕು. ನುರಿತ ಈಜುಗಾರರು ಇರಬೇಕು. ಲೈಫ್ ಜಾಕೇಟ್, ಬೋಟಿಂಗ್ ವ್ಯವಸ್ಥೆ, ಜಾತ್ರೆ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ, ಪ್ರತಿ ಅಮಾವಾಸ್ಯೆ ಸಂದರ್ಭದಲ್ಲಿ ಸ್ವಚ್ಛತೆ ಕೈಗೊಳ್ಳಬೇಕು. ಭಕ್ತಾದಿಗಳ ಅನುಕೂಲಕ್ಕಾಗಿ ಬಸ್‌ಗಳ ವ್ಯವಸ್ಥೆ, ಹೆಚ್ಚುವರಿಯಾಗಿ 100 ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕೆಂದರು.
ಯಾವುದೇ ಪರಿಸ್ಥಿತಿಯಲ್ಲಿ ಕೆರೆ ನೀರು ಕಲುಷಿತವಾಗದಂತೆ ನಿಗಾವಹಿಸಬೇಕು. ಸಾರ್ವಜನಿಕರೂ ಕೂಡ ಇದಕ್ಕೆ ಸಹಕರಿಸಬೇಕು. ಬಟ್ಟೆ, ಕಸವನ್ನು ಕೆರೆಯಲ್ಲಿ ಚೆಲ್ಲದಂತೆ ಎಚ್ಚರಿಕೆ ವಹಿಸಬೇಕು. ಅರಕೇರಾ ಮತ್ತು ರಾಮಸಮುದ್ರ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿ ತೆರೆದಿಡಲು ನಿಷೇಧಿಸಲಾಗುವುದು. ಜಾತ್ರೆಯ ಸಂದರ್ಭದಲ್ಲಿ ಯಾವುದೇ ರೋಗ ರುಜಿನುಗಳು ಹರಡದಂತೆ ಅವಶ್ಯಕ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಿದರು.ಜಾತ್ರೆಯ ನಿಮಿತ್ತ ಅವಶ್ಯಕ ಕಡೆಗಳಲ್ಲಿ ಸೈನ್ ಬೋರ್ಡ್ ಹಾಕಿಸಬೇಕು. ಕಲ್ಯಾಣ ಮಂಟಪದ ಸ್ವಚ್ಛತೆಗೆ ವಿಶೇಷ ಗಮನ, ಪೊಲೀಸ್ ಸಿಬ್ಬಂದಿಗೆ ಸೂಕ್ತ ವಾಸ್ತವ್ಯಕ್ಕಾಗಿ ಕಲ್ಯಾಣ ಮಂಟಪ, ವಸತಿಗೃಹಗಳ ವ್ಯವಸ್ಥೆ, ದೇವಸ್ಥಾನದ ಜಾಗ ಮತ್ತು ರಸ್ತೆ ಬದಿಯಲ್ಲಿನ ಅನಧಿಕೃತ ಅಂಗಡಿ-ಮುಂಗಟ್ಟುಗಳ ತೆರವು ಮಾಡಬೇಕು ಎಂದು ಸೂಚಿಸಿದ ಅವರು, ಒಟ್ಟಾರೆ ದೇವಸ್ಥಾನದ ಕಾರ್ಯಕ್ರಮ ಗಳು ಅಚ್ಚುಕಟ್ಟಾಗಿ, ಯಾವುದೇ ಲೋಪವಿಲ್ಲದೆ ನಡೆಯುವಂತೆ ನೋಡಿಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್, ಡಿವೈಎಸ್ಪಿ ಅರುಣ್ ಕುಮಾರ್, ಮುಜರಾಯಿ ತಹಸೀಲ್ದಾರ್ ಪಿ. ಶಾಂತಮ್ಮ, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.