ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಐತಿಹಾಸಿಕವಾಗಿ ಸೆ. 15ರಂದು ನಡೆಯಲಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಸೆ. 15ರಂದು ಬೆಳಗ್ಗೆ 9.37ರಿಂದ 9.40ರ ವರೆಗೆ ನಾಡಗೀತೆ ನಡೆಯಲಿದೆ. ಬೆಳಗ್ಗೆ 9.40ರಿಂದ 9.55ರ ವರೆಗೆ ಮುಖ್ಯ ಅತಿಥಿಗಳಿಂದ ಭಾಷಣ ನಡೆಯಲಿದೆ. ಬೆಳಗ್ಗೆ 9.55ರಿಂದ 9.57ರ ವರೆಗೆ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9.57ರಿಂದ 9.59ರ ವರೆಗೆ ಮಾನವ ಸರಪಳಿಯಲ್ಲಿ ಕೈಕೈ ಹಿಡಿದು ನಿಲ್ಲಲಾಗುತ್ತದೆ. 10 ಗಂಟೆಗೆ ಮಾನವ ಸರಪಳಿಯಲ್ಲಿ ಎರಡು ಕೈಗಳನ್ನು ಮೇಲೆತ್ತಿ ಜೈಹಿಂದ್ ಜೈ ಕರ್ನಾಟಕ ಘೋಷಣೆ ಕೂಗಿ ಸರಪಳಿ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸ್ವಸಹಾಯ ಸಂಘದ ಪ್ರತಿನಿಧಿಗಳು, ಹಾಲು ಒಕ್ಕೂಟದ ಸದಸ್ಯರು ಸೇರಿದಂತೆ ಆಯಾ ಕಡೆಗಿನ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ. ಶಾಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.ಮಾನವ ಸರಪಳಿ ಹೊರಡುವ ಮಾರ್ಗಗಳ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಮತ್ತು ಪಿಡಿಒ ಅವರ ಸಹಭಾಗಿತ್ವದಲ್ಲಿ ಆಯಾ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಮಾನವ ಸರಪಳಿ ಆರಂಭವಾಗುವ ಸ್ಥಳದಿಂದ ಮುಕ್ತಾಯದ ಸ್ಥಳದ ವರೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹತ್ತಾರು ಬಾರಿ ಸಭೆ ನಡೆಸಿ, ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಧ್ವನಿವರ್ಧಕ ಮೂಲಕ ಪ್ರಚಾರ ಮಾಡಲಾಗಿದೆ. ಎಲ್ಲ ಆಕಡೆಗಳಲ್ಲಿ ಬ್ಯಾನರ್ ಅಳವಡಿಸಿ ವ್ಯಾಪಕ ಪ್ರಚಾರ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕು, ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಸಾರ್ವಜನಿಕರು ತಪ್ಪದೇ ಭಾಗವಹಿಸಿ ಕಾರ್ಯಕ್ರಮ ಯಶಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿಯ ಮೂಲಕ ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕಿನ ಸಾರ್ವಜನಿಕರಲ್ಲಿ ಮನವಿ ಮಾಡಿದರು.