ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪಘಾತ ತಡೆ, ಸುಗಮ ರೈಲ್ವೆ ಸಂಚಾರಕ್ಕಾಗಿ ಬೆಂಗಳೂರು ಹಾಗೂ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಆರು ಯೋಜನೆಗಳ ಮೂಲಕ ಒಟ್ಟು 639.05 ಕಿ.ಮೀ. ರೈಲ್ವೆ ಮಾರ್ಗದಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂಅನ್ನು ರೂಪಿಸಿಕೊಳ್ಳಲು ರೈಲ್ವೆ ಮಂಡಳಿಯು ₹874.12 ಕೋಟಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ನೀಡಿದೆ.ಈ ಬಗ್ಗೆ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದು, ಬೆಂಗಳೂರು ಹಾಗೂ ಮೈಸೂರಿನ ಮಾರ್ಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳ ಸುಗಮ ಸಂಚಾರಕ್ಕಾಗಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂ ಅನುಷ್ಠಾನ ಮಾಡಲಾಗುವುದು. ಇದರಿಂದ ಚೆನ್ನೈ, ಮೈಸೂರು, ಹುಬ್ಬಳ್ಳಿ ಮತ್ತು ಹೈದರಾಬಾದ್ ಕಡೆಗೆ ರೈಲುಗಳ ಸಂಚಾರ ಇನ್ನಷ್ಟು ಸುಲಲಿತವಾಗಲಿದೆ. ರೈಲ್ವೆಯ ಮೂಲಸೌಕರ್ಯ ಹೆಚ್ಚಿಸುವ ಮತ್ತು ಆಧುನೀಕರಣಗೊಳಿಸುವ ಹೆಜ್ಜೆಯಾಗಿ ಇದನ್ನು ರೂಪಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಯಾವ್ಯಾವ ಮಾರ್ಗ: ಬೆಂಗಳೂರು ಸಿಟಿ- ಯಶವಂತಪುರ- ಯಲಹಂಕ (17.75 ಕಿಮೀ), ಯಶವಂತಪುರ- ಅರಸಿಕೆರೆ (160.65 ಕಿಮೀ), ಲೊಟ್ಟೆಗೊಲ್ಲನಹಳ್ಳಿ- ಹೊಸೂರು (63.6 ಕಿಮೀ), ವೈಟ್‌ಫೀಲ್ಡ್- ಜೋಲಾರಪೇಟೆ (119 ಕಿಮೀ), ಚನ್ನಸಂದ್ರ ಮಾರ್ಗವಾಗಿ ಬೈಯಪ್ಪನಹಳ್ಳಿ-ಪೆನುಕೊಂಡ (139.8 ಕಿಮೀ) ಹಾಗೂ ಬೆಂಗಳೂರು ಸಿಟಿ- ಮೈಸೂರು (138 .25 ಕಿಮೀ) ಮಾರ್ಗದಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂ ರೂಪಿಸಲಾಗುವುದು ಎಂದು ನೈಋತ್ಯ ರೈಲ್ವೇ ಮಾಹಿತಿ ನೀಡಿದೆ.ಪ್ರಯೋಜನವೇನು?: ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂನಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ರೈಲ್ವೆ ನಿಲ್ದಾಣ, ಟ್ರ್ಯಾಕ್‌ಗಳಲ್ಲಿ ರೈಲುಗಳು ನಿಂತಿರುವ, ತೆರಳಿರುವ ಪಕ್ಕಾ ಮಾಹಿತಿ ಕಮಾಂಡ್ ಸೆಂಟರ್‌ಗೆ ಸಿಗಲಿದೆ. ಪರಿಣಾಮ ರೈಲುಗಳ ವಿಳಂಬ ಸಂಚಾರ ನಿಯಂತ್ರಿಸಬಹುದು. ಮುಖ್ಯವಾಗಿ ಸುರಕ್ಷತೆ ದೃಷ್ಟಿಯಿಂದ ಇದು ಹೆಚ್ಚು ಪ್ರಯೋಜನಕಾರಿಯಾಗಿದ್ದು, ರೈಲ್ವೆ ಅಪಘಾತ ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ.