ಗೋಪಾಲ್ ಯಡಗೆರೆ
ಭದ್ರಾ ಜಲಾಶಯದಿಂದ ನೀರು ಸೋರಿಕೆಯಾದ ಬೆನ್ನಲ್ಲೇ ಭದ್ರಾ ಜಲಾಶಯದ ಬಲ್ಕ್ ಹೆಡ್ ಕಾಮಗಾರಿ ನಡೆಸುವ ಸಂಬಂಧ ಅಧಿಕಾರಿಗಳು ಯೋಜನೆಯೊಂದನ್ನು ರೂಪಿಸಿದ್ದು, ಇದಕ್ಕಾಗಿ ಕರೆಯಲಾದ ಟೆಂಡರ್ ಮತ್ತು ಇಡೀ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರದ ಸಂಶಯ ಹೆಡೆಯಾಡುತ್ತಿದೆ.
ಟೆಂಡರ್ ಕರೆಯುವ ಮುನ್ನ ಬಲ್ಕ್ ಹೆಡ್ ದುರಸ್ತಿಗೆ ಕರ್ನಾಟಕ ನೀರಾವರಿ ನಿಗಮದ ಭದ್ರಾ ಯೋಜನಾ ಅಧಿಕಾರಿಗಳು ಅಸ್ತಿತ್ವದಲ್ಲಿಯೇ ಇಲ್ಲದ ಎರಡು ಕಂಪನಿಗಳಿಂದ ಕೊಟೇಶನ್ ಪಡೆದಿದ್ದು, ಇದನ್ನು ಮುಂದಿಟ್ಟುಕೊಂಡು ಟೆಂಡರ್ ಕರೆದಿದ್ದಾರೆ.ಇದೇ ರೀತಿಯ ಕಾಮಗಾರಿಯೊಂದನ್ನು ಕಾವೇರಿ ನೀರಾವರಿ ನಿಗಮಕ್ಕೆ ಒಳಪಡುವ ಹೇಮಾವತಿ ಜಲಾಶಯದಲ್ಲಿನ ಬಲ್ಕ್ ಹೆಡ್ ಕಾಮಗಾರಿಯನ್ನು ಸರಿ ಸುಮಾರು ₹70 ಲಕ್ಷದಲ್ಲಿ ಮುಗಿದಿರುವ ಇತಿಹಾಸ ಎದುರಿಗೆ ಇರುವಾಗಲೇ ಇದೇ ರೀತಿಯ ಕಾಮಗಾರಿಗೆ ₹6.38 ಕೋಟಿ ವೆಚ್ಚದ ಟೆಂಡರ್ ಅಂತಿಮಗೊಳಿಸಿರುವುದು ಈ ಸಂಶಯಕ್ಕೆಕಾರಣವಾಗಿದೆ.
ಅಸ್ತಿತ್ವದಲ್ಲಿಯೇ ಇಲ್ಲದ ಕಂಪನಿಯಿಂದ ಕೋಟೇಶನ್: ಯೋಜನೆಯ ವೆಚ್ಚ ಲೆಕ್ಕ ಹಾಕಲು ಮೂರು ಕಂಪನಿಗಳಿಂದ ಕೋಟೇಶನ್ ತರಿಸಲಾಗಿದ್ದು, ಇದರಲ್ಲಿ ಎರಡು ಕಂಪನಿಗಳು ಸದ್ಯ ಅಸ್ತಿತ್ವದಲ್ಲಿಯೇ ಇರಲಿಲ್ಲ ಎಂಬುದು ಬಳಿಕ ಬಯಲಾಗಿದೆ. ಜೊತೆಗೆ ಚುನಾವಣೆ ಸಂದರ್ಭ ಬಳಸಿಕೊಂಡ ಅಧಿಕಾರಿಗಳು ತುರ್ತು ಕಾಮಗಾರಿಗೆ ಇರುವ ನಿಯಮ ಬಳಸಿಕೊಂಡು ಯಾವುದೇ ಎಸ್‌ಆರ್ ದರ ಇಲ್ಲದೆಯೇ ಟೆಂಡರ್ ಕರೆದಿದ್ದು, ಇದರಲ್ಲಿ ಅವ್ಯವಹಾರದ ಸಂಶಯ ವ್ಯಕ್ತವಾಯಿತು. ಕೆಲವರು ಈ ಅವ್ಯಹಾರದ ಕುರಿತು ಸಂಶಯ ವ್ಯಕ್ತಪಡಿಸಿ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದರು. ಈ ದೂರಿನಲ್ಲಿ ಮೇಲ್ನೋಟಕ್ಕೆ ಸತ್ಯ ಕಂಡು ಬಂದಿದ್ದರಿಂದ ಇದಕ್ಕೆ ತಡೆ ನೀಡಲಾಯಿತು. ಆದರೂ ತುರ್ತು ಕಾಮಗಾರಿಯನ್ನು ಮುಂದಿಟ್ಟುಕೊಂಡು ಕೆಲಸ ಕೈಗೊಳ್ಳಲು ಚುನಾವಣಾ ಆಯೋಗದಿಂದ ಅನುಮತಿ ಪಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು ಎಂಬುದು ಗಮನಾರ್ಹ. ಜೊತೆಗೆ ನೀತಿ ಸಂಹಿತೆ ನೆಪವಾಗಿಟ್ಟುಕೊಂಡು ಟೆಂಡರ್ ಕರೆದ ಅಧಿಕಾರಿಗಳು. ಇದು ಇಡೀ ಕಾಮಗಾರಿಯ ಹಿಂದಿನ ಲಾಭದ ಲೆಕ್ಕಾಚಾರವನ್ನು ಬಯಲುಗೊಳಿಸಿದೆ.ಟೆಂಡರ್‌ನಲ್ಲಿ ಭಾಗಿಯಾದ ಕಂಪನಿಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಿ ಟೆಂಡರ್ ಕರೆಯಲಾಗಿದೆ ಎಂದು ಗಂಭೀರವಾದ ಆರೋಪ ಕೇಳಿ ಬಂದಿದೆ. ಜೊತೆಗೆ ಟೆಂಡರ್ ಕರೆದ 7 ದಿನದೊಳಗೆ ಟೆಂಡರ್ ಮುಕ್ತಾಯಗೊಳಿಸಿರುವುದು ಕೂಡ ಸಂಶಯಕ್ಕೆ ಕಾರಣವಾಗಿದೆ. ವಿಶೇಷವೆಂದರೆ ಯಾವುದೇ ರಜಾ ದಿನದಂದು ಟೆಂಡರ್ ಅಂತಿಮ ದಿನವಾಗಿರುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಚುನಾವಣೆ ನಡೆದ ಮೇ 7ರಂದು ಟೆಂಡರ್‌ಗೆ ಕೊನೆಯ ದಿನವಾಗಿದ್ದು, ಅಂದೇ ಟೆಂಡರ್ ಮುಕ್ತಾಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಅವ್ಯವಹಾರ?: ಭದ್ರಾ ಜಲಾಶಯದ ಸ್ಲುಯೀಸ್ ಗೇಟ್ ಮತ್ತು ನಾಲೆಯಲ್ಲಿ ಸಮಸ್ಯೆಯಿದ್ದು, ಜಲಾಶಯದ ಅತ್ಯಂತ ತಳಭಾಗದಲ್ಲಿನ ಈ ಸಮಸ್ಯೆ ಬಗೆಹರಿಸಲು ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರು ಕಡಿಮೆಯಾದಾಗ ಮಾತ್ರ ಮಾಡಬೇಕು ಅಥವಾ ಅನಿವಾರ್ಯವಾದಲ್ಲಿ ಜಲಾಶಯದ ನೀರಿನ ತಳಭಾಗಕ್ಕೆ ಹೋಗಿ ಮಾಡಬೇಕು. ಹೀಗೆ ದುರಸ್ತಿ ಮಾಡಬೇಕಾದರೆ ಬಲ್ಕ್ ಹೆಡ್ ಮುಚ್ಚಬೇಕು. ಈ ಬಲ್ಕ್ ಹೆಡ್ ಸೇರಿದಂತೆ ಹಲವು ಕೆಲಸಗಳ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸ್ಲೂಯೀಸ್ ಹಾಗೂ ರಿವರ್ಸ್ ಸ್ಲೂಯೀಸ್ ಗೇಟ್‌ನಿಂದ ನೀರು ಪೋಲಾಗಿದ್ದೆ ಅಧಿಕಾರಿಗಳಿಗೆ ವರದಾನವಾಗಿದ್ದು, ತರಾತುರಿಯಲ್ಲಿ ಬಲ್ಕ್ ಹೆಡ್ ಕಾಮಗಾರಿ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.