ವಿಶೇಷ ವರದಿ ಗದಗ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಹಾಗೂ ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಹಲವು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ‍್ಯಾಂಕ್ ಪಡೆಯುತ್ತಿದ್ದು, ಅವರಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲಾಖೆಯು ಕ್ರಮ ಕೈಗೊಂಡಿದೆ. ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೆಲವು ವಸತಿ ನಿಲಯಗಳಲ್ಲಿ ಗ್ರಂಥಾಲಯ ವ್ಯವಸ್ಥೆಯಿದ್ದು, ಜಿಲ್ಲಾ ಪಂಚಾಯಿತಿಯ ಅನಿರ್ಬಂಧಿತ ಅನುದಾನವನ್ನು ಬಳಸಿಕೊಂಡು ಇಲಾಖೆಯ ಎಲ್ಲ ವಸತಿ ನಿಲಯಗಳಲ್ಲಿ ಗ್ರಂಥಾಲಯ ಸ್ಥಾಪನೆ ಮಾಡುವ ಚಿಂತನೆ ಇಲಾಖೆಯದ್ದಾಗಿದೆ.
18 ವಸತಿ ನಿಲಯಗಳಲ್ಲಿ ಸ್ಥಾಪನೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಮೆಟ್ರಿಕ್ ನಂತರದ 18 ವಸತಿ ನಿಲಯಗಳಲ್ಲಿ ₹1.16 ಕೋಟಿ ವೆಚ್ಚವನ್ನು ಜಿಲ್ಲಾ ಪಂಚಾಯಿತಿಯ ಅನಿರ್ಬಂಧಿತ ಅನುದಾನವನ್ನು ಬಳಸಿಕೊಂಡು ಕನಿಷ್ಠ 15/15 ಅಳತೆಯ ಕೊಠಡಿಯಲ್ಲಿ ಗ್ರಂಥಾಲಯ ಸ್ಥಾಪನೆಯ ಗುರಿ ಹೊಂದಲಾಗಿದ್ದು, ಇದರ ತಯಾರಿ ಕೂಡಾ ಅಂತಿಮ ಹಂತದಲ್ಲಿದೆ. ಇಲಾಖೆಯು ಸ್ವಂತ ಕಟ್ಟಡ ಹೊಂದಿರುವ ಹಾಗೂ ಗ್ರಂಥಾಲಯ ತೆರೆಯಲು ಸೂಕ್ತ ಸ್ಥಳಾವಕಾಶ ಹೊಂದಿರುವ 18 ವಸತಿ ನಿಲಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಗ್ರಂಥಾಲಯ ತೆರೆಯಲು ಅವಶ್ಯಕವಾಗಿ ಬೇಕಿರುವ ವಸ್ತುಗಳು ಪುಸ್ತಕ ಖರೀದಿಗೂ ಸಿದ್ಧತೆ ಪೂರ್ಣಗೊಂಡಿದೆ.ತಂತ್ರಜ್ಞಾನ ಅಳವಡಿಕೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಓದಲು ಅನುಕೂಲವಾಗುವ ದೃಷ್ಟಿಯಿಂದ ಇ-ಲೈಬ್ರರಿ ತೆರೆಯುವ ಗುರಿ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ಬೇಕಿರುವ ಕಂಪ್ಯೂಟರ್, ಇಂಟರ್‌ನೆಟ್ ಸಂಪರ್ಕಕ್ಕಾಗಿ ಬ್ರಾಡ್‌ಬ್ಯಾಂಡ್, ಕಂಪ್ಯೂಟರ್ ಟೇಬಲ್, ಕುರ್ಚಿ ವ್ಯವಸ್ಥೆ. ಅದಲ್ಲದೆ ಮೆಟ್ರಿಕ್ ಪೂರ್ವ ಹಾಗೂ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ವಾಷಿಂಗ್ ಮಶಿನ್ ನೀಡುವ ಚಿಂತನೆಯೂ ನಡೆದಿದೆ.