ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆ ಸಿದ್ಧತೆ

KannadaprabhaNewsNetwork |  
Published : Apr 28, 2025, 11:51 PM IST
ಬೆಂ.ಗ್ರಾ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ಒಳಮೀಸಲಾತಿ ಗಣತಿ ಸಂಬಂಧ ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸಿದ್ದರು. | Kannada Prabha

ಸಾರಾಂಶ

ಗಣತಿದಾರರು ಮನೆ ಮನೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲಿದ್ದಾರೆ. ದತ್ತಾಂಶ ಸಂಗ್ರಹದಲ್ಲಿ ಲೋಪವಾಗದಂತೆ ಸರಿಯಾದ ಕ್ರಮದಲ್ಲಿ ಸಮೀಕ್ಷೆ ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಸಾಮಾಜಿಕ ನ್ಯಾಯವನ್ನು ಎಲ್ಲಾ ವರ್ಗದವರಿಗೂ ಒದಗಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಯನ್ನು ಬರುವ ಮೇ 5 ರಿಂದ ಜಿಲ್ಲಾದ್ಯಂತ ಕೈಗೊಳ್ಳಲಾಗಿದೆ ಎಂದು ಬೆಂ.ಗ್ರಾ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ತಿಳಿಸಿದರು.ಸೋಮವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಚ್.ಎನ್. ನಾಗಮೋಹನ್ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ಕುರಿತ ತಾಲೂಕುಗಳ ಮಟ್ಟದ ಮಾಸ್ಟರ್ ಟ್ರೈನರ್‌ಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಣತಿದಾರರು ಮನೆ ಮನೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲಿದ್ದಾರೆ. ದತ್ತಾಂಶ ಸಂಗ್ರಹದಲ್ಲಿ ಲೋಪವಾಗದಂತೆ ಸರಿಯಾದ ಕ್ರಮದಲ್ಲಿ ಸಮೀಕ್ಷೆ ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸಮೀಕ್ಷೆ ನಡೆಸಲು ಸರ್ಕಾರದಿಂದ ಅಪ್ಲಿಕೇಶನ್ ಸಿದ್ದಪಡಿಸಲಾಗಿದ್ದು, ಸಮೀಕ್ಷೆಯಲ್ಲಿ ಬರುವ ತಾಂತ್ರಿಕ ತೊಂದರೆ ಹಾಗೂ ಅದಕ್ಕೆ ಪೂರಕ ಪರಿಹಾರವನ್ನು ಪಡೆದುಕೊಳ್ಳಲು ತಿಳಿಸಿದರು. ಈ ತರಬೇತಿಯಲ್ಲಿ ಅಪ್ಲೀಕೇಶನ್ ನಿರ್ವಹಣೆ, ಹೇಗೆ ದತ್ತಾಂಶ ಸಂಗ್ರಹಿಸಿ ನಮೂದಿಸಬೇಕು ಎಂಬ ಸಂಪೂರ್ಣ ಮಾಹಿತಿ ಇದೆ. ದತ್ತಾಂಶದಲ್ಲಿ ಏರುಪೇರಾದರೆ ಸರ್ಕಾರದಿಂದ ಸಿಗುವ ರಾಜಕೀಯ, ಶಿಕ್ಷಣ, ಉದ್ಯೋಗ, ಸೇರಿದಂತೆ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಹಾಗಾಗಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ದತ್ತಾಂಶ ಸರಿಯಾದ ಕ್ರಮದಲ್ಲಿ ಸಂಗ್ರಹಿಸಬೇಕು. ಸುಭದ್ರ ಪ್ರಜಾಪ್ರಭುತ್ವಕ್ಕೆ ನೀವೆಲ್ಲರೂ ನೀಡುವ ದತ್ತಾಂಶ ಮುಖ್ಯವಾಗಿದೆ ಎಂದರು.

ಸಮೀಕ್ಷೆಯ ವಿಧಾನ, ವೇಳಾಪಟ್ಟಿ ವಿವರ:

ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗುವುದು. ಮೊದಲ ಹಂತದಲ್ಲಿ ಮೇ 5 ರಿಂದ 17 ವರೆಗೆ ಗಣತಿದಾರರು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವರು. ಎರಡನೇ ಹಂತದಲ್ಲಿ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವರು. ಮೂರನೇ ಹಂತದಲ್ಲಿ ಮೇ 19 ರಿಂದ 23 ರ ವರೆಗೆ ಆನ್ಲೈನ್ ಮೂಲಕ ಸ್ವಯಂಘೋಷಣೆ ಮಾಡಬಹುದಾಗಿದೆ.

ಕಾರ್ಯಾಗಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಪ್ರೇಮ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬೈಲಾಂಜಿನಪ್ಪ, ದತ್ತಾಂಶ ಸಂಗ್ರಹ ಜಿಲ್ಲಾ, ತಾಲೂಕು ಮಟ್ಟದ ಮಾಸ್ಟರ್ ಟ್ರೇನರ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಫೋಟೋ-28ಕೆಡಿಬಿಪಿ1- ಬೆಂ.ಗ್ರಾ ಜಿಪಂ ಸಭಾಂಗಣದಲ್ಲಿ ಸೋಮವಾರ ಒಳಮೀಸಲಾತಿ ಗಣತಿ ಸಂಬಂಧ ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ