ಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರದಲ್ಲಿ ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿಯನ್ನು ಮೇ ತಿಂಗಳಿನಲ್ಲಿ ಆಯೋಜಿಸಲಾಗುವುದು ಎಂದು ನೆಟ್‌ಬಾಲ್ ಅಸೋಸಿಯೇಷನ್‌ನ ಗೌರವಾಧ್ಯಕ್ಷೆ ನರ್ಗೀಸ್‌ಬಾನು ತಿಳಿಸಿದರು.
ಚಾಮರಾಜನಗರ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನ ವತಿಯಿಂದ ನ ಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೇ ತಿಂಗಳಿನಲ್ಲಿ ರಾಜ್ಯಮಟ್ಟದ ಪಂದ್ಯಾವಳಿಯನ್ನು ನಡೆಸುವಂತೆ ರಾಜ್ಯ ಮಟ್ಟದ ಅಸೋಸಿಯೇಷನ್ ನಿಂದ ಚಾಮರಾಜನಗರ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ಗೆ ಅವಕಾಶ ದೊರೆತಿದೆ. ಅದಕ್ಕೆ ತಕ್ಕಂತೆ ಎಲ್ಲಾ ರೀತಿಯಲ್ಲೂ ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದರು.ಚಾಮರಾಜನಗರದಲ್ಲಿ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಅಸ್ವಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ನೆಟ್‌ಬಾಲ್ ಪಂದ್ಯಾವಳಿಯನ್ನು ನಡೆಸುವ ಅವಕಾಶ ಸಿಕ್ಕಿರುವುದು ಸಂತಸದ ವಿಷಯ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಮ್ಮ ಸಂಘ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ನಮ್ಮ ಜಿಲ್ಲೆಯಲ್ಲಿ ಆಯೋಜಿಸಿರುವುದು ಹೆಮ್ಮೆಯ ವಿಚಾರ ಜೊತೆಗೆ ನಮ್ಮ ಸಂಘ ಬೆಳೆವಣಿಗೆಗೂ ಕೂಡಾ ಉತ್ತಮ ಅವಕಾಶ ಎಂದರು.
ಮಧ್ಯಪ್ರದೇಶದ ಇಂದೋರ್ ಕಾರ್ಗಲ್ ಜಿಲ್ಲೆಯ ಬೋರವ ಜವಾಹರ್‌ಲಾಲ್ ನೆಹರೂ ಇನ್ಸ್ಟಿಟ್ಯೂಟ್‌ನಲ್ಲಿ ಕಳೆದ ಎರಡು ತಿಂಗಳ ಹಿಂದೆ ನಡೆದ ರಾಷ್ಟ್ರಮಟ್ಟದ ನೆಟ್‌ಬಾಲ್ ಪಂದ್ಯಾವಳಿಯಲ್ಲಿ ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಪ್ರತಿನಿಧಿಸುವ ಮೂಲಕ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಈ ಬಾರಿ ರಾಜ್ಯಮಟ್ಟದ ಪಂದ್ಯಾವಳಿ ನಮ್ಮ ಜಿಲ್ಲೆಯಲ್ಲಿ ಆಯೋಜಿಸುವ ಮೂಲಕ ನಮ್ಮ ಜಿಲ್ಲೆಯ ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ದೊರಕಿದೆ. ಚಾಮರಾಜನಗರ ಜಿಲ್ಲೆಯಿಂದ ಉತ್ತಮ ಪಂದ್ಯಾವಳಿಯನ್ನು ಆಯೋಜಿಸಲು ಹಲವಾರು ಸದಸ್ಯರು ನೀಡಿರುವಂತಹ ಸಲಹೆಯೊಂದಿಗೆ ರೂಪುರೇಷೆಗಳನ್ನು ಮುಂದಿನ ಹಂತದಲ್ಲಿ ಸಿದ್ಧಪಡಿಸಲಾಗುವುದು ಎಂದರು.ಅಸೋಸಿಯೇಷನ್‌ನ ಅಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ರಾಜ್ಯಾದ್ಯಂತ ನಮ್ಮ ಜಿಲ್ಲೆಗೆ ಬರುವಂತಹ ಕ್ರೀಡಾಪಟುಗಳಿಗೆ ಯಾವುದೇ ಕೊರತೆಗಳು ಆಗದಂತೆ ಊಟ, ವಸತಿ, ಅಂಕಣದ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್.ಬಿ, ಮಾತನಾಡಿ, ರಾಜ್ಯಮಟ್ಟದ ನೆಟ್‌ಬಾಲ್ ಅಸೋಸಿಯೇಷನ್ ನಿಂದ ಇತ್ತೀಚೆಗೆ ನಡೆದ ಸಭೆಯಲ್ಲಿ ಅಂಡರ್ ೧೯ ಹಾಗೂ ಫಾಸ್ಟ್ 5 ನೆಟ್‌ಬಾಲ್ ಪಂದ್ಯಾವಳಿ ನಡೆಸುವ ಜವಾಬ್ದಾರಿಯನ್ನು ನಮ್ಮ ಜಿಲ್ಲೆಗೆ ನೀಡಿದೆ. ಈ ಸುವರ್ಣಾವಕಾಶವನ್ನು ಬಳಸಿಕೊಂಡು ಜವಾಬ್ದಾರಿಯುತವಾಗಿ ಉತ್ತಮ ರೀತಿಯಲ್ಲಿ ಪಂದ್ಯಾವಳಿಯನ್ನು ನಡೆಸುವ ಮೂಲಕ ಜಿಲ್ಲೆಗೆ ಕೀರ್ತಿ ತರುವುದು ಮುಖ್ಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಅವಕಾಶ ದೊರಕುವ ಸಾಧ್ಯತೆ ಇದೆ ಎಂದರು.ಈ ವೇಳೆ ಖಜಾಂಚಿ ಎಂ.ಸಿ.ಮಹದೇವಸ್ವಾಮಿ, ಸದಸ್ಯರಾದ ಶ್ರೀಧರ್, ಸಂತೋಷ್, ನಾಗೇಂದ್ರ ಸಿ., ರೂಪಾ.ಎಸ್., ಸುರೇಶ್, ಲೋಕೇಶ್, ಮಧುಕುಮಾರ್, ಮತ್ತಿತರರಿದ್ದರು.