ಕನ್ನಡಪ್ರಭ ವಾರ್ತೆ ಮಳವಳ್ಳಿ
ನೈಸರ್ಗಿಕವಾಗಿ ಬೆಳೆದ ರಾಗಿಯಿಂದ ಪುಡಿ ಮಾಡಿ ನಿಪ್ಪಟ್ಟು, ಚಕ್ಕುಲಿ, ಸೇರಿದಂತೆ 28ಕ್ಕೂ ಹೆಚ್ಚು ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಉತ್ತಮ ಲಾಭ ಗಳಿಸುವ ಮೂಲಕ ಸ್ವಾವಲಂಬಿ ಬದುಕು ಸಾಗಿಸಬಹುದು ಎಂದು ಸಂಪೂರ್ಣ ಸಾವಯವ ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ತಿಳಿಸಿದರು.ಪಟ್ಟಣದ ಗಾಯತ್ರಿ ಭವನದಲ್ಲಿ ತಾಲೂಕು ಸಂಪೂರ್ಣ ಸಾವಯವ ಕೃಷಿಕರ ಸಂಘದಿಂದ ರಾಗಿ ಮೌಲ್ಯವರ್ಧನೆ ಮಾಡಿ ವಿವಿಧ ಆಹಾರ ಪದಾರ್ಥಗಳನ್ನು ತಯಾರು ಮಾಡುವ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ರಾಗಿಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳಿಂದ ವಿಷಕಾರಕ ವಸ್ತುಗಳ ಬಳಕೆ ಮಾಡದ ಹಿನ್ನೆಲೆಯಲ್ಲಿ ಆರೋಗ್ಯಕರ ಆಹಾರ ಪದಾರ್ಥಗಳಾಗಿವೆ ಎಂದರು.
ಸಂಪನ್ಮೂಲ ವ್ಯಕ್ತಿ ತಿಪಟೂರಿನ ಮೋಹನ್ ಕುಮಾರ್ ಮಾತನಾಡಿ, ಸುಮಾರು 28 ವಿಧದ ಪೌಷ್ಟಿಕ ಯುಕ್ತ ತಿಂಡಿ ತಿನಿಸುಗಳ ಆಹಾರ ಪದಾರ್ಥಗಳ ತಯಾರಿಕೆ ಮಾಡಬಹುದು. 40 ರು. ಬೆಲೆಯ ಒಂದು ಕೆ.ಜಿ. ರಾಗಿಯಿಂದ 800 ರು. ಮೌಲ್ಯದ ತಿಂಡಿ ತಿನಿಸುಗಳನ್ನು ತಯಾರಿಸಬಹುದು. ಇದರಿಂದ ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕು ಸಾಧಿಸಬಹುದು ಎಂದರು.ಈಗಾಗಲೇ ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಮಾಜಕ್ಕೆ ಉತ್ತಮ ಆರೋಗ್ಯ ನೀಡುವ ಜೊತೆಗೆ ಜೀವನ ರೂಪಿಸಿಕೊಳ್ಳಲು ಉಪ ಕಸುಬಾಗಿ ಬಳಸಿಕೊಳ್ಳಬಹುದು ಎಂದರು.
ಈ ವೇಳೆ ಸಂಘದ ಮುಖಂಡರಾದ ಶಿವಕುಮಾರ್, ಗಜೇಂದ್ರ, ದೊಡ್ಡಣ್ಣ, ಸುರೇಶ್, ಸುವರ್ಣ ಕೇಶವಮೂರ್ತಿ ಮತ್ತಿತರರು ಇದ್ದರು.ಬದರೀನಾರಾಯಣಸ್ವಾಮಿ ಜಯಂತ್ಯುತ್ಸವದ ವೈಭವ
ಮೇಲುಕೋಟೆ:ಬದರೀನಾರಾಯಣಸ್ವಾಮಿ ಜಯಂತ್ಯುತ್ಸವ ಹಸ್ತ ನಕ್ಷತ್ರದ ಶುಭ ದಿನ ಬುಧವಾರ ವೈಭವದಿಂದ ನೆರವೇರಿತು.ಚೆಲುವನಾರಾಯಣಸ್ವಾಮಿ ದೇವಾಲಯಕ್ಕಿಂತ ಪುರಾತನವಾದ ಬೃಹತ್ ಎಲಚಿ ವೃಕ್ಷದ ಕೆಳಭಾಗದಲ್ಲಿ ಅರವಿಂದವಲ್ಲೀ ಸಮೇತನಾಗಿ ವಿರಾಜಮಾನನಾದ ಬದರೀನಾರಾಯಣನಿಗೆ ಬೆಳಗ್ಗೆ ವೇದಮಂತ್ರ ಹಾಗೂ ಮಂಗಳವಾದ್ಯದೊಂದಿಗೆ ಅಭಿಷೇಕ ನೆರವೇರಿಸಲಾಯಿತು.
ಮಧ್ಯಾಹ್ನ ದಿವ್ಯಪ್ರಬಂಧಪಾರಾಯಣದೊಂದಿಗೆ ಶಾತ್ತುಮೊರೈ ನೆರವೇರಿಸಿ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು. ಅರ್ಚಕ ಹಾಗೂ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಪರಿಶ್ರಮದಲ್ಲಿ ಜಯಂತ್ಯುತ್ಸವದ ಕಾರ್ಯಕ್ರಮಗಳು ನಡೆದವು. ನೂರಾರು ಭಕ್ತರು ಬದರೀಜಯಂತಿಯಲ್ಲಿ ಪಾಲ್ಗೊಂಡಿದ್ದರು.ಮೂರು ವರ್ಷದ ಹಿಂದೆಯೇ ದೇಗುಲದ ಬೃಹತ್ ಕಲ್ಲಿನತೊಲೆ ಕುಸಿದು ವಾಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ದೇವಾಲಯದ ಕಟ್ಟಡಸಹ ಮಳೆ ನೀರು ಕುಡಿದು ಶಿಥಿಲವಾಗುತ್ತಿದ್ದರೂ ಪ್ರಾಚ್ಯವಸ್ತು ಇಲಾಖೆ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಮುಂದಾಗಿಲ್ಲ. ಮೂರು ವರ್ಷದ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಯೋಜನಾವರದಿ ಸಲ್ಲಿಸಿದ್ದರಾದರೂ ಸರ್ಕಾರ ಭವ್ಯ ಪರಂಪರೆ ಸಾರುವ ಬದರೀನಾರಾಯಣಸ್ವಾಮಿ ದೇಗುಲದ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆಮಾಡಿಲ್ಲ ಎಂಬ ಮಾಹಿತಿ ನೀಡುತ್ತಾರೆ. ಈ ಐತಿಹಾಸಿಕ ಮಹತ್ವದ ದೇಗುಲವನ್ನು ಶೀಘ್ರಜೀರ್ಣೋದ್ಧಾರ ಮಾಡಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.