ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಒತ್ತಾಯ; ಸದಸ್ಯ ಪ್ರೇಮಕುಮಾರ್ ಧರಣಿ

KannadaprabhaNewsNetwork |  
Published : Jul 31, 2025, 12:45 AM IST
30ಕೆಎಂಎನ್ ಡಿ28 | Kannada Prabha

ಸಾರಾಂಶ

ನೀವೊಬ್ಬರು ಅಸಮರ್ಥ ಅಧ್ಯಕ್ಷರಾಗಿದ್ದೀರಿ. ಪುರಸಭೆ ಇತಿಹಾಸದಲ್ಲಿಯೆ ಇಂತಹ ಘಟನೆ ನಡೆದಿಲ್ಲ. ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಇರುವಾಗ ನಿಮ್ಮ ಸ್ವಾರ್ಥ ಸಾಧನೆಗೆ ಸಭೆಯನ್ನು ಮುಂದೂಡುತ್ತಿದ್ದೀರಿ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಆಯ್ಕೆ ವಿಚಾರವಾಗಿ ಉಂಟಾದ ಗೊಂದಲದಿಂದಾಗಿ ಪುರಸಭೆಯ ಸಾಮಾನ್ಯ ಸಭೆಯನ್ನು ಮುಂದೂಡಿದ ಘಟನೆ ಬುಧವಾರ ನಡೆಯಿತು.

ಪಟ್ಟಣದ ಶಹರಿ ರೋಜ್‌ಗಾರ್ ಯೋಜನಾ ಭವನದಲ್ಲಿ ಅಧ್ಯಕ್ಷೆ ಪಂಕಜಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯ ಆರಂಭದಲ್ಲಿ ಸಭೆ ನೋಟಿಸ್‌ನಲ್ಲಿರುವಂತೆ ಕಳೆದ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೆ.ಆರ್. ರವೀಂದ್ರಬಾಬು ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಖಾಲಿಯಿದ್ದ ಸ್ಥಾನಕ್ಕೆ ಚರ್ಚೆ ನಡೆಸಿ ತುಂಬುವ ವಿಚಾರ ಎಂದು ರೆವಿನ್ಯೂ ಇನ್ಸ್‌ಪೆಕ್ಟರ್ ನಾಗರಾಜು ಹೇಳಿದ ತಕ್ಷಣ ಆ ವಿಷಯವನ್ನು ಕಡೆಯಲ್ಲಿ ಚರ್ಚೆ ಮಾಡೋಣ. ಇನ್ನುಳಿದ ವಿಚಾರಗಳನ್ನು ಮಂಡಿಸಿ ಎಂದು ಅಧ್ಯಕ್ಷೆ ಪಂಕಜಾ ಪ್ರಕಾಶ್ ಸೂಚಿಸಿದರು.

ಇದರಿಂದ ರೊಚ್ಚಿಗೆದ್ದ ಆಡಳಿತ ಪಕ್ಷದ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್ ಯಾವುದೇ ಕಾರಣಕ್ಕೂ ಸ್ಥಾಯಿ ಸಮಿತಿ ವಿಷಯವನ್ನು ಚರ್ಚಿಸಿ ಅಂತಿಮಗೊಳಿಸದೆ ಬೇರೆ ವಿಷಯಗಳ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಆಗ ಅಧ್ಯಕ್ಷೆ ಪಂಕಜಾ ಅವರು, ಈ ವಿಷಯವನ್ನು ನನ್ನ ಗಮನಕ್ಕೆ ತಾರದೆ ಸೇರಿಸಲಾಗಿದೆ. ಇದನ್ನು ನಾನು ಬೆಂಬಲಿಸುವುದಿಲ್ಲ. ಸಭೆಯಲ್ಲಿ ಉಳಿದ ವಿಷಯಗಳ ಬಗೆ ಮೊದಲು ಚರ್ಚೆ ಮಾಡೋಣ. ನಂತರ ಕಡೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸೋಣ ಎಂದರು.

ಈ ವೇಳೆ ಅಧ್ಯಕ್ಷೆ ಪಂಕಾಜ ಹಾಗೂ ಸದಸ್ಯ ಡಿ.ಪ್ರೇಮಕುಮಾರ್ ಅವರ ನಡುವೆ ಜೋರಾದ ವಾಗ್ವಾದ ನಡೆಯಿತು. ಒಂದು ಹಂತದಲ್ಲಿ ಪ್ರೇಮಕುಮಾರ್ ಅವರು ದಲಿತ ವಿರೋಧಿ ಅಧ್ಯಕ್ಷರಿಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ಸಭಾಂಗಣದಲ್ಲಿಯೆ ಧರಣಿ ಕುಳಿತರು. ಇದರಿಂದ ಕೆಲಕಾಲ ಸಭೆ ಸ್ತಬ್ಧವಾಯಿತು.

ಮುಖ್ಯಾಧಿಕಾರಿ ನಟರಾಜ್ ಈ ಬಗ್ಗೆ ಯಾವುದೇ ಮಾತನಾಡಲಿಲ್ಲ. ಅಧ್ಯಕ್ಷೆ ಪಂಕಜಾ ಪ್ರೇಮಕುಮಾರ್ ವರ್ತನೆಯಿಂದ ಬೇಸತ್ತು ಸಭೆಯಿಂದ ನಿರ್ಗಮಿಸಿದರು. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ಮತ್ತು ಹಿರಿಯ ಸದಸ್ಯ ಕೆ.ಸಿ.ಮಂಜುನಾಥ್ ಅಧ್ಯಕ್ಷರನ್ನು ಮನವೊಲಿಸಿ ಕರೆತಂದರು. ಆದರೂ ಕೂಡಾ ಅಧ್ಯಕ್ಷರು ಸಭೆಗೆ ಅಧ್ಯಕ್ಷರ ಅನುಮತಿಯಿಲ್ಲದೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯ ವಿಷಯವನ್ನು ಅಜೆಂಡಾಗೆ ತಂದಿದ್ದಾರೆ. ಇದಕ್ಕೆ ನನ್ನ ಸಹಮತವಿಲ್ಲ ಎಂದರು.

ಸಭೆಯಲ್ಲಿ ಹಾಜರಿದ್ದ ಸದಸ್ಯರ ಒತ್ತಾಯದ ಮೇರೆಗೆ ಪುರಸಭೆ ನಿಯಮಾವಳಿಗಳ ಪುಸ್ತಕವನ್ನು ಸಭೆಗೆ ತರಿಸಿ ಸ್ಥಾಯಿ ಸಮಿತಿ ಅಧ್ಯಕ್ಷರ ಪ್ರಕ್ರಿಯೆ ಬಗ್ಗೆ ತಿಳಿಸಿಕೊಡಲಾಯಿತು. ಬಹುತೇಕ ಸದಸ್ಯರು ಸ್ಥಾಯಿ ಸಮಿತಿ ಆಯ್ಕೆಯನ್ನು ಪೂರ್ಣಗೊಳಿಸಿ ಎಂದು ಒತ್ತಾಯ ಮಾಡಿದರು. ಆದರೂ ಕೂಡಾ ಅಧ್ಯಕ್ಷರು ನನ್ನ ಅನುಮತಿಯಿಲ್ಲದೆ ಸೇರಿಸಿರುವ ವಿಷಯದ ಚರ್ಚೆಯನ್ನು ನಾನು ಮಾಡುವುದಿಲ್ಲ. ಎಲ್ಲವನ್ನೂ ಅಧಿಕಾರಿಗಳೇ ಮಾಡುವುದಾದರೆ ಅಧ್ಯಕ್ಷರಾಗಿ ನಾವು ಏತಕ್ಕೆ ಇರಬೇಕು ಎಂದು ಸಿಡಿಮಿಡಿಗೊಂಡರು.

ಸದಸ್ಯ ಪ್ರೇಮಕುಮಾರ್ ಅವರು, ನೀವೊಬ್ಬರು ಅಸಮರ್ಥ ಅಧ್ಯಕ್ಷರಾಗಿದ್ದೀರಿ. ಪುರಸಭೆ ಇತಿಹಾಸದಲ್ಲಿಯೆ ಇಂತಹ ಘಟನೆ ನಡೆದಿಲ್ಲ. ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಇರುವಾಗ ನಿಮ್ಮ ಸ್ವಾರ್ಥ ಸಾಧನೆಗೆ ಸಭೆಯನ್ನು ಮುಂದೂಡುತ್ತಿದ್ದೀರಿ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಸಭೆಯಿಂದ ನಿರ್ಗಮಿಸಿದರು.

ಕಳೆದ ತಿಂಗಳ ಸಭೆಯಲ್ಲಿ ಚರ್ಚಿಸಿದ ವಿಷಯಗಳಿಗೆ ಅನುಮೋದನೆಯನ್ನು ಕೂಡಾ ಪಡೆಯದೆ ಸಭೆಯನ್ನು ಮುಗಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಸೌಭಾಗ್ಯ ಸೇರಿದಂತೆ 23 ಸದಸ್ಯರು ಸೇರಿ ನಾಮ ನಿರ್ದೇಶಿತ ಸದಸ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ