ಸತ್ತೇಗಾಲದಿಂದ ಕಣ್ವ ಮೂಲಕ ನೀರು ತುಂಬಿಸುವ ಯೋಜನೆ । 540 ಕೋಟಿ ರುಪಾಯಿ ವೆಚ್ಚದಲ್ಲಿ ಯೋಜನೆ ಜಾರಿ । ಸುಮಾರು 11.5 ಕಿ.ಮೀ. ದೂರದಷ್ಟು ಸುರಂಗ ಮಾರ್ಗ ನಿರ್ಮಾಣ
ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರ
ಶತಮಾನಗಳಿಂದ ರೈತರ ಕೃಷಿಗೆ ಜಲಮೂಲವಾಗಿದ್ದ ಕೆರೆಗಳು ಬತ್ತಿ ಹೋಗಿ ಬರಪೀಡಿತವಾಗಿರುವ ರೇಷ್ಮೆನಗರಿ ರಾಮನಗರ ಜಿಲ್ಲೆಗೆ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಸತ್ತೇಗಾಲ ನೀರಾವರಿ ಯೋಜನೆ ವರವಾಗಿ ಪರಿಣಮಿಸುವ ಆಶಾಭಾವನೆ ವ್ಯಕ್ತವಾಗಿದೆ.ಸತ್ತೇಗಾಲ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಆ ಯೋಜನೆಯ ಭಾಗವಾಗಿ ಕಣ್ವ ಜಲಾಶಯದಿಂದ ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯ ಮತ್ತು ವೈ.ಜಿ.ಗುಡ್ಡ ಜಲಾಶಯಕ್ಕೆ ಕಾವೇರಿ ನೀರು ತುಂಬಿಸುವ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲು ಸಿದ್ಧತೆಗಳು ನಡೆದಿವೆ.
ಕಳೆದ ಜನವರಿ ತಿಂಗಳಲ್ಲಿಯೇ ಸತ್ತೇಗಾಲದಿಂದ ಜಿಲ್ಲೆಯ ಜಲಾಶಯಗಳಿಗೆ ಕಾವೇರಿ ನದಿ ನೀರು ತುಂಬಿಸುವ ಯೋಜನೆ ಭಾಗವಾಗಿ ಮೊದಲ ಹಂತದಲ್ಲಿ ಕಣ್ವ ಜಲಾಶಯದಿಂದ ವೈ.ಜಿ.ಗುಡ್ಡ ಜಲಾಶಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿತ್ತು. ಇದು ಯಶಸ್ವಿ ಕೂಡ ಆಗಿದ್ದರಿಂದ ಅಧಿಕೃತವಾಗಿ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ.540 ಕೋಟಿ ರುಪಾಯಿ ವೆಚ್ಚದ ಯೋಜನೆ:
ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ 540 ಕೋಟಿ ರು. ವೆಚ್ಚದ ಸತ್ತೇಗಾಲ ನೀರಾವರಿ ಯೋಜನೆಗೆ ಅಡಿಗಲ್ಲು ಬಿದ್ದಿತು. ಈಗ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎರಡು ಜಲಾಶಯಗಳಿಗೆ ಕಾವೇರಿ ನೀರು ಹರಿಸಲಾಗುತ್ತಿದೆ. ಈ ಮೂಲಕ ಕುಡಿಯುವ ನೀರು ಒದಗಿಸುವುದು ಹಾಗೂ ಕೆರೆ-ಕಟ್ಟೆಗಳನ್ನು ತುಂಬಿಸುವ ಕೆಲಸವೂ ಆಗಲಿದೆ. ಚಾಮರಾಜನಗರ ಜಿಲ್ಲೆಯ ಸತ್ತೇಗಾಲ ಬಳಿಯ ಕಾವೇರಿ ನದಿಯಿಂದ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿರುವ ಇಗ್ಗಲೂರಿನ ಎಚ್ .ಡಿ.ದೇವೇಗೌಡ ಬ್ಯಾರೇಜ್, ಅಲ್ಲಿಂದ ಹಾಲಿ ಇರುವ ಏತ ನೀರಾವರಿ ಪೈಪ್ ಲೈನ್ ಮೂಲಕ ಕಣ್ವಕ್ಕೆ ನೀರೆತ್ತುವ ಯೋಜನೆ ಇದಾಗಿದೆ. ಕಣ್ವದಿಂದ ವೈ.ಜಿ.ಗುಡ್ಡ ಮತ್ತು ಮಂಚನಬೆಲೆ ಜಲಾಶಯಗಳಿಗೂ ನೀರು ತುಂಬಿಸಲಾಗುತ್ತದೆ. ಇದರಿಂದ ಕಣ್ವ, ಅರ್ಕಾವತಿ ನದಿಗಳು ಮತ್ತೆ ಮೈದುಂಬಲಿವೆ. ಅಲ್ಲದೆ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಳವಾಗಲಿದೆ. ಸತ್ತೇಗಾಲ ಬಳಿಯಿಂದ ಕಾವೇರಿ ನೀರನ್ನು ಏತ ನೀರಾವರಿ ಮೂಲಕ ಪಂಪ್ ಮಾಡಿ , ನಂತರ ಗುರುತ್ವಾಕರ್ಷಣೆ ಮೂಲಕ ಇಗ್ಗಲೂರು ಜಲಾಶಯಕ್ಕೆ ಹರಿಸಲಾಗುತ್ತದೆ.11.5 ಕಿ.ಮೀ. ಸುರಂಗ ಮಾರ್ಗ:
ಈ ಯೋಜನೆಯು ಸುಮಾರು 11.5 ಕಿ.ಮೀ. ದೂರದ ಟನಲ್ (ಸುರಂಗ ಮಾರ್ಗ) ಹೊಂದಿದ್ದು, ಸತ್ತೇಗಾಲದಿಂದ ಇಗ್ಗಲೂರು ಬ್ಯಾರೇಜ್ ವರೆಗೆ ನೀರಿನ ಹರಿವಿಗೆ 58 ಕಿ.ಮೀ ದೂರದಷ್ಟು ಟನಲ್ ನಿರ್ಮಿಸಲಾಗಿದೆ. ಸುಮಾರು 26 ಕಿ.ಮೀ.ನಷ್ಟು ದೂರ ಗುರುತ್ವಾಕರ್ಷಣೆ ಮೂಲಕವೇ ನೀರು ಹರಿದು ಬರಲಿದೆ.ಇಗ್ಗಲೂರು - ಎಚ್ .ಮೊಗೇನಹಳ್ಳಿ - ಕಣ್ವ ನಡುವೆ ಹಾಲಿ ಇರುವ ಏತ ನೀರಾವರಿ ಯೋಜನೆ ವ್ಯವಸ್ಥೆಯನ್ನೇ ಉದ್ದೇಶಿತ ಸತ್ತೇಗಾಲ ಯೋಜನೆಗೂ ಬಳಕೆ
ಮಾಡಿಕೊಳ್ಳಲಾಗಿದೆ. ಕಣ್ವದಿಂದ ವೈ.ಜಿ.ಗುಡ್ಡ ಮತ್ತು ಮಂಚನಬೆಲೆ ಜಲಾಶಯಗಳಿಗೂ ನೀರು ಹರಿಸಿ ತುಂಬಿಸಲಾಗುತ್ತದೆ. ದಶಕಗಳಿಂದ ಕುಡಿಯುವ ನೀರಿನ ಬವಣೆ ಎದುರಿಸುತ್ತಿದ್ದ ರಾಮನಗರ ಜಿಲ್ಲೆಯು ಸತ್ತೇಗಾಲ ಯೋಜನೆಯಿಂದ ನದಿ, ನಾಲೆ, ಕಾಲುವೆಗಳು ಪುನಶ್ಚೇತನದೊಂದಿಗೆ ಜಿಲ್ಲೆಯಲ್ಲಿಅಂತರ್ಜಲ ಮಟ್ಟ ವೃದ್ಧಿಯಾಗಿ ಜಲವೈಭವ ಮರುಕಳಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಗಳಿವೆ.
------ಬಾಕ್ಸ್ ...
210 ಕ್ಯುಸೆಕ್ ನೀರು ಪೂರೈಕೆ ಸಾಮರ್ಥ್ಯ :ಸತ್ತೇಗಾಲ ನೀರಾವರಿ ಯೋಜನೆಯಿಂದ ಚನ್ನಪಟ್ಟಣ, ಮಾಗಡಿ, ರಾಮನಗರ ಮಾತ್ರವಲ್ಲದೆ ಕನಕಪುರ ತಾಲೂಕಿಗೂ ನೀರಾವರಿ ಸೌಲಭ್ಯ ಸಿಗಲಿದೆ. ಈಗ ನಿರ್ಮಿಸಿರುವ ಸುರಂಗ ಮತ್ತು ಕಾಲುವೆಯ ಮೂಲಕ ಸುಮಾರು 210 ಕ್ಯುಸೆಕ್ ನೀರು ಹರಿಸಬಹುದಾಗಿದೆ.
--ಬಾಕ್ಸ್ ...
ಕಣ್ವ ಜಲಾಶಯದಿಂದ ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯ ಮತ್ತು ವೈ.ಜಿ.ಗುಡ್ಡ ಜಲಾಶಯಕ್ಕೆ ಕಾವೇರಿ ನೀರು ತುಂಬಿಸುವ ಯೋಜನೆಗೆ ಡಿ.15ರಂದು ಬೆಳಗ್ಗೆ 10.30ಕ್ಕೆ ಮಂಚನಬೆಲೆ ಜಲಾಶಯದಲ್ಲಿ ಅಧಿಕೃತ ಚಾಲನೆ ಸಮಾರಂಭ ಆಯೋಜಿಸಲಾಗಿದೆ. ಸಂಸದ ಡಿ.ಕೆ.ಸುರೇಸ್ ಮತ್ತು ಮಾಗಡಿ ಕ್ಷೇತ್ರ ಶಾಸಕ ಎಚ್ .ಸಿ.ಬಾಲಕೃಷ್ಣರವರು ಯೋಜನೆಗೆ ಚಾಲನೆ ನೀಡಲಿದ್ದಾರೆ.--------
ಸತ್ತೇಗಾಲ ನೀರಾವರಿ ಯೋಜನೆ ಕಾಮಗಾರಿ ಚಿತ್ರಗಳು