ಬಸವರಾಜ ನಂದಿಹಾಳ
ಪಟ್ಟಣದ ಆರಾಧದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವ ಆ.೨೬ ರಿಂದ ೩೦ ರವರೆಗೆ ಐದು ದಿನಗಳ ಕಾಲ ಜರುಗಲಿದ್ದು, ಸಿದ್ಧತೆ ಭರದಿಂದ ಸಾಗಿದೆ. ಜಾತ್ರೆಗೆ ಬರುವವರನ್ನು ಸ್ವಾಗತಿಸಲು ಪ್ಲೆಕ್ಸ್ ರಾರಾಜಿಸುತ್ತಿವೆ. ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದಲ್ಲಿ ಪ್ರತಿನಿತ್ಯ ಬೆಳಗ್ಗೆ ರುದ್ರಾಭಿಷೇಕ ಜರುಗುತ್ತಿದೆ. ಈಗಾಗಲೇ ಪ್ರತಿದಿನ ಸಂಜೆ ೬.೩೦ ಗಂಟೆಗೆ ಬಳೂಟಗಿಯ ಶಿವಕುಮಾರ ಸ್ವಾಮೀಜಿಯವರಿಂದ ಬಸವಾದಿ ಪ್ರಮಥರ ವಚನ ಕೂಡ ಶುರವಾಗಿದೆ.
ಬಸವೇಶ್ವರರ ಜನ್ಮಸ್ಥಳಕ್ಕೆ ಜಿಲ್ಲಾ ಕೇಂದ್ರ ವಿಜಯಪುರ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟಿ, ಕೊಲ್ಹಾರ, ದೇವರಹಿಪ್ಪರಗಿ ಮಾರ್ಗವಾಗಿ ಜನರು ಬರಲಿದ್ದಾರೆ. ಮಾತ್ರವಲ್ಲ, ಬಾಗಲಕೋಟೆ, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಈ ವರ್ಷ ಸರ್ಕಾರ ಶಕ್ತಿ ಯೋಜನೆ ಜಾರಿಗೆ ಗೊಳಿಸಿದ್ದರಿಂದ ದೇವಸ್ಥಾನಕ್ಕೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಬರಬಹುದು. ಬಂದ ಭಕ್ತರಿಗೆ ಉಳಿದುಕೊಳ್ಳಲು, ಸ್ನಾನ-ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕಿದೆ. ಜಾತ್ರೆಗೆ ಎರಡು ದಿನಗಳು ಬಾಕಿ ಇರುವುದರಿಂದ ದೇವಸ್ಥಾನಕ್ಕೆ, ದ್ವಾರಬಾಗಿಲು, ಕಟ್ಟಡಕ್ಕೆ ವಿದ್ಯುದ್ದೀಪ ಅಲಂಕಾರ ಮಾಡಲಾಗಿದೆ. ಬಸವೇಶ್ವರ ವೃತ್ತವನ್ನು ಸಹ ದುರಸ್ತಿಗೊಳಿಸಿ ಕಂಗೊಳಿಸುತ್ತಿದೆ.ಬಾಕ್ಸ್..
ದೇವಾಲಯದ ಅಂತಾರಾಷ್ಟ್ರೀಯ ಶಾಲೆಯ ಪಕ್ಕದಲ್ಲಿರುವ ಅನಿಲ ಅಗರವಾಲ ಅವರ ಜಮೀನಿನಲ್ಲಿ ಬಳೆ, ಸ್ಟೇಶನರಿ, ಗೊಂಬೆ, ವಿವಿಧ ಮಳಿಗೆಗಳು, ತೂಗುತೊಟ್ಟಿಲು ಸೇರಿದಂತೆ ಜಾತ್ರೆಯ ಎಲ್ಲ ಮಳಿಗೆಗಳು ಬಂದು ನೆಲೆಸಿವೆ. ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಉತ್ಸವ ಸಮಿತಿ ಪದಾಧಿಕಾರಿಗಳು ಮಳಿಗೆ ಹಾಕುವವರಿಗೆ ಹಂಚಿಕೆ ಮಾಡಿದ್ದಾರೆ. ಮಳಿಗೆಗಳನ್ನು ಹಾಕಲು ಸ್ಥಳೀಯ ವ್ಯಾಪಾರಸ್ಥರು ಸೇರಿದಂತೆ ಜಿಲ್ಲೆ, ವಿವಿಧ ಜಿಲ್ಲೆ, ಆಂಧ್ರಪ್ರದೇಶ, ಬಾಂಬೆ, ಉತ್ತರಪ್ರದೇಶ, ದೆಹಲಿ ಸೇರಿದಂತೆ ವಿವಿಧೆಡೆ ವ್ಯಾಪಾರಸ್ಥರು ಬಂದಿದ್ದಾರೆ.
-------------ಜಾತ್ರಾ ಕಾರ್ಯಕ್ರಮಗಳು ಏನೇನಿವೆ?
- ಆ.೨೭ ರಂದು ಜಾತ್ರೆಯಂಗವಾಗಿ ಬೆಳಗ್ಗೆ ೯ ಗಂಟೆಯಿಂದ ಪ್ರಸಿದ್ಧ ಗೀಗೀ, ಚೌಡಕಿ, ಡೊಳ್ಳು, ಭಜನಾ ಪದಗಳು ಸುಪ್ರಸಿದ್ಧ ಕಲಾವಿದರಿಂದ ದೇವಸ್ಥಾನದ ಆವರಣದಲ್ಲಿ ಜರುಗುತ್ತವೆ. ಮಧ್ಯಾಹ್ನ ೩ ಗಂಟೆಗೆ ಗುರುಕೃಪಾ ಪ್ರಾಥಮಿಕ ಶಾಲೆಯ ಹತ್ತಿರ ಜಂಗೀ ಕುಸ್ತಿಗಳು ಜರುಗಲಿವೆ. ರಾತ್ರಿ ೧೦.೩೦ ಗಂಟೆಗೆ ಸ್ಥಳೀಯ ಬಸವೇಶ್ವರ ಬೈಲಾಟ ಸಂಘದಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿ ಪ್ರದಾನ ನಾಟಕ ಪ್ರದರ್ಶನವಾಗಲಿದೆ.
-ಆ.೨೯ ರಂದು ದೇವಾಲಯದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಇದೇ ಪ್ರಥಮ ಬಾರಿಗೆ ಜಾತ್ರೆಯಂಗವಾಗಿ ಎರಡು ದಿನಕಾಲ ಹಮ್ಮಿಕೊಂಡಿರುವ ಕೃಷಿ ಮೇಳದ ಉದ್ಘಾಟನೆ ನೆರವೇರಲಿದೆ. ಸಂಜೆ ೬.೩೦ ಗಂಟೆಗೆ ಕರ್ನಾಟಕ ಚಲನಚಿತ್ರ ಹಾಸ್ಯ ನಟರ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
----
-ಬಸಪ್ಪ ಪೂಜಾರಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತರು.
--ವಾಹನ ಸಂಚಾರ ಸುಗಮವಾಗಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಜಾತ್ರೆಗೆ ವಾಹನಗಳನ್ನು ತೆಗೆದುಕೊಂಡು ಬರುವ ಭಕ್ತರು ಆದಷ್ಟು ಪಟ್ಟಣದ ಹೊರವಲಯದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಬೇಕು. ಯಾವುದೇ ಕಾರಣಕ್ಕೂ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಪಾರ್ಕ್ ಮಾಡಬಾರದು. ಒಂದು ವೇಳೆ ಪಾರ್ಕ್ ಮಾಡಿದರೆ ವಾಹನ ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಸುಗಮ ಸಂಚಾರಕ್ಕೆ ಜನರು ಸಹಕಾರ ನೀಡಬೇಕು. ಶಾಂತಿ ಸುವ್ಯವಸ್ಥೆಗೆ ನಮ್ಮ ಸಿಬ್ಬಂದಿಯನ್ನು ನಿಯೋಜಿಲಾಗುತ್ತದೆ.
-ಬಲ್ಲಪ್ಪ ನಂದಗಾವಿ, ಡಿವೈಎಸ್ಪಿ.--
ಧಾರ್ಮಿಕ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ನಡೆಯಲಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪ್ರಥಮ ಬಾರಿಗೆ ರೈತರಿಗೆ ನೆರವಾಗುವ ಉದ್ದೇಶದಿಂದ ಎರಡು ದಿನಗಳ ಕಾಲ ಕೃಷಿಮೇಳ ಆಯೋಜಿಸಲಾಗಿದೆ. ಐದು ದಿನಗಳ ಕಾಲ ನಡೆಯುವ ಜಾತ್ರೆಗೆ ಎಲ್ಲರೂ ಸಹಾಯ, ಸಹಕಾರ ನೀಡಬೇಕು.-ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷರು.
--ಸ್ಥಳೀಯ ಪೂಜ್ಯರ ಹಾಗೂ ಗುರು-ಹಿರಿಯರ ಮಾರ್ಗದರ್ಶನದಲ್ಲಿ ಈ ವರ್ಷದ ಜಾತ್ರಾಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದೇ ಪ್ರಪ್ರಥಮ ಬಾರಿಗೆ ಎರಡು ದಿನಗಳ ಕಾಲ ಕೃಷಿಮೇಳ ಆಯೋಜಿಸುವ ಮೂಲಕ ರೈತ ಬಾಂಧವರಿಗೆ ಅನುಕೂಲ ಮಾಡಿಕೊಡಲಾಗಿದೆ. ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಮಾಡೋಣ.
-ಗುರುಲಿಂಗ ಬಸರಕೋಡ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷರು.