27 ಮತದಾನ ಕೇಂದ್ರಗಳಲ್ಲಿ 20 ಸಾವಿರಕ್ಕೂ ಅಧಿಕ ಪದವೀಧರ ಮತದಾರರು
ವಿಧಾನಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಗದಗ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಅ.23ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸ್ಥಾಪಿಸಿರುವ ಮತದಾನ ಕೇಂದ್ರಗಳಲ್ಲಿ ಪದವೀಧರ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಗದಗ, ಗದಗ ಗ್ರಾಮೀಣ, ಮುಂಡರಗಿ, ನರಗುಂದ, ಗಜೇಂದ್ರಗಡ, ರೋಣ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ ಮತದಾನ ವ್ಯವಸ್ಥೆ ಮಾಡಲಾಗಿದೆ. ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಚುನಾವಣಾ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದ್ದು, ಮತಗಟ್ಟೆಗಳಿಗೆ ಅಗತ್ಯ ಚುನಾವಣಾ ಸಾಮಗ್ರಿಗಳು ರವಾನೆಯಾಗಿವೆ.ಈ ಚುನಾವಣೆಯಲ್ಲಿ ಸಾಮಾನ್ಯ ವಿಧಾನಸಭಾ ಚುನಾವಣೆಯಂತೆ ಇವಿಎಂ ಬಳಸಲಾಗುವುದಿಲ್ಲ. ಮತಪತ್ರ ಹಾಗೂ ಮತಪೆಟ್ಟಿಗೆ ಮೂಲಕ ಮತದಾನ ನಡೆಯಲಿದೆ. ಪ್ರಾಶಸ್ತ್ಯ ಮತ ಪದ್ಧತಿ ಇರುವುದರಿಂದ ಮತದಾರರು ಚುನಾವಣಾ ಸಿಬ್ಬಂದಿ ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿಂದಲೇ ತಮ್ಮ ಪ್ರಾಶಸ್ತ್ಯವನ್ನು ನಮೂದಿಸಬೇಕು. ಮೊದಲ ಪ್ರಾಶಸ್ತ್ಯ ನಮೂದಿಸುವುದು ಕಡ್ಡಾಯವಾಗಿದ್ದು, ಮತಪತ್ರದಲ್ಲಿ ತಪ್ಪಾದ ರೀತಿಯಲ್ಲಿ ಗುರುತು ಮಾಡಿದರೆ ಮತ ಅಸಿಂಧುವಾಗಲಿದೆ ಎಂದು ಚುನಾವಣಾ ವಿಭಾಗ ಈಗಾಗಲೇ ಹಲವಾರು ಬಾರಿ ಸೂಚಿಸಿದೆ.
ಗದಗ ಬೆಟಗೇರಿ ನಗರ ಪ್ರದೇಶದಲ್ಲಿ ನಗರಸಭೆ ಪದವಿ ಪೂರ್ವ ಕಾಲೇಜಿನ ನೂತನ ಮತ್ತು ಹಳೆಯ ಕಟ್ಟಡ, ಜೇಸಿ ಪ್ರೌಢಶಾಲೆ ಹಾಗೂ ನಗರಸಭೆ ಕಚೇರಿಯಲ್ಲಿ ಒಟ್ಟು 10 ಮತದಾನ ವ್ಯವಸ್ಥೆ ಮಾಡಲಾಗಿದೆ. 55ರಿಂದ 62ಎರವರೆಗೆ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ನಗರಸಭೆ ಪದವಿಪೂರ್ವ ಕಾಲೇಜಿನ ವಿವಿಧ ಕೊಠಡಿಗಳು, ಜೇಸಿ ಪ್ರೌಢಶಾಲೆಯ ಕೊಠಡಿಗಳು ಮತ್ತು ನಗರಸಭೆ ಕಚೇರಿಯ ಕೊಠಡಿಗಳು ಮತದಾನ ಕೇಂದ್ರಗಳಾಗಿವೆ.
ಗದಗ ಗ್ರಾಮೀಣ ವ್ಯಾಪ್ತಿಯಲ್ಲಿ 63ರಿಂದ 66 ರವರೆಗೆ ನಾಲ್ಕು ಮತದಾನ ಕೇಂದ್ರಗಳು ಇರಲಿವೆ. ಕೊಟುಮಚಗಿ ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆ, ಲಕ್ಕುಂಡಿ ಸರ್ಕಾರಿ ಕನ್ನಡ ಬಾಲಕರ ಶಾಲೆ, ಹುಲಕೋಟಿ ಸರ್ಕಾರಿ ಮಾದರಿ ಕನ್ನಡ ಬಾಲಕರ ಕೇಂದ್ರ ಶಾಲೆ ಹಾಗೂ ಮುಳಗುಂದ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮತದಾನ ನಡೆಯಲಿದೆ.
ಮುಂಡರಗಿ ತಾಲೂಕಿನಲ್ಲಿ ತಹಶೀಲ್ದಾರ್ ಕಚೇರಿ ಮಿನಿ ವಿಧಾನಸೌಧದ ಸಭಾಭವನ ಹಾಗೂ ಕೊಠಡಿ ಸಂಖ್ಯೆ 4ರಲ್ಲಿ 67 ಮತ್ತು 67ಎ ಮತಗಟ್ಟೆ ಸ್ಥಾಪಿಸಲಾಗಿದೆ. ನರಗುಂದದಲ್ಲಿ ಕೊಣ್ಣೂರು ಗ್ರಾಪಂ ಸಭಾಭವನ ಹಾಗೂ ನರಗುಂದ ಮಿನಿ ವಿಧಾನಸೌಧದ ಸಭಾಂಗಣ ಸಂಖ್ಯೆ 14ರಲ್ಲಿ 68 ಮತ್ತು 69 ಮತಗಟ್ಟೆಗಳು ಇರಲಿವೆ.
ಗಜೇಂದ್ರಗಡ ವ್ಯಾಪ್ತಿಯಲ್ಲಿ 70, 71 ಮತ್ತು 72 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಳವಣಕಿಯ ಎಸ್.ವಿ. ಸಂಯುಕ್ತ ಪದವಿಪೂರ್ವ ಕಾಲೇಜು, ಹೊಳೆಆಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಮಾರುಕಟ್ಟೆ ಹಾಗೂ ಎಪಿಎಂಸಿ ಮುಖ್ಯ ಕಚೇರಿ ಮತದಾನ ಕೇಂದ್ರಗಳಾಗಿವೆ.
ರೋಣ ತಾಲೂಕಿನಲ್ಲಿ ನರೇಗಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ಹಾಗೂ ರೋಣ ಪುರಸಭೆ ಕಚೇರಿಯ ಹಳೆಯ ಸಭಾಂಗಣದಲ್ಲಿ 73 ಮತ್ತು 74 ಮತಗಟ್ಟೆಗಳು ಇರಲಿವೆ. ಶಿರಹಟ್ಟಿ ತಾಲೂಕಿನಲ್ಲಿ ಬೆಳ್ಳಟ್ಟಿಯ ಉನ್ನತೀಕರಿಸಿದ ಸರ್ಕಾರಿ ಮಾದರಿ ಕನ್ನಡ ಬಾಲಕರ ಪ್ರಾಥಮಿಕ ಶಾಲೆ, ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷರ ಕೊಠಡಿ, ಪುರಸಭೆ ವ್ಯವಸ್ಥಾಪಕರ ಕೊಠಡಿ ಹಾಗೂ ಶಿರಹಟ್ಟಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ 75, 76, 76ಎ ಮತ್ತು 77 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
20079 ಪದವೀಧರ ಮತದಾರರು:
ಗದಗ ಜಿಲ್ಲೆಯಲ್ಲಿ 12726 ಪುರುಷರು ಹಾಗೂ 7353 ಮಹಿಳೆಯರು ಸೇರಿದಂತೆ ಒಟ್ಟು 20079 ಪದವೀಧರ ಮತದಾರರು ಮತದಾನ ಹಕ್ಕು ಹೊಂದಿದ್ದಾರೆ. ಅ. 23ರಂದು ಮತದಾನ ಮುಗಿದ ಬಳಿಕ ಮತಪೆಟ್ಟಿಗೆಗಳನ್ನು ನಿಗದಿತ ಭದ್ರತಾ ವ್ಯವಸ್ಥೆಯಲ್ಲಿ ಮತ ಎಣಿಕೆ ಕೇಂದ್ರಕ್ಕೆ ರವಾನೆಯಾಗಲಿದ್ದು. ಅ. 27ರಂದು ಮತ ಎಣಿಕೆ ನಡೆಯಲಿದೆ.