-ಅಧಿಕಾರಿಗಳಿಗೆ ಸೂಚನೆ -78ನೇ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆ
ಜಿಲ್ಲಾ ಮಟ್ಟದಲ್ಲಿ ಆ.15ರಂದು ಆಚರಿಸಲಾಗುವ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಿಸಿದ ಅಧಿಕಾರಿಗಳು ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಆ.15ರಂದು 78ನೇ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ.15ರಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು. ಅಂದು ಬೆಳಗ್ಗೆ 9 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರಿಗೆ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡುವರು. ಶಾಲಾ ಮಕ್ಕಳು, ಎನ್‌ಸಿಸಿ ಕೆಡೆಟ್ಸ್ ಗಳು, ಪೊಲೀಸ್, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಸಿಕೊಡಲು ಕ್ರಮ ವಹಿಸಿ ಎಂದರು.ಕಾರ್ಯಕ್ರಮದ ಸಿದ್ದತೆ ಕುರಿತು ಕ್ರೀಡಾಂಗಣದ ಸ್ವಚ್ಚತೆ, ವೇದಿಕೆ, ಶಾಮಿಯಾನ, ಆಸನ ವ್ಯವಸ್ಥೆ ಕುರಿತಂತೆ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ನಾಡು ನುಡಿ ಮಹತ್ವ ಬಿಂಬಿಸುವ ನಾಡಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ತಂಡವನ್ನು ಸಿದ್ದಪಡಿಸಿಕೊಳ್ಳಬೇಕು ಹಾಗೂ ಆಯಾಯ ಇಲಾಖೆಗಳಿಗೆ ವಹಿಸಿಕೊಟ್ಟ ಕಾರ್ಯಕ್ರಮದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನೆರವೇರಿಸಬೇಕು ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂದು ಬೆಳಿಗ್ಗೆ 8:45ಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಚಂದ್ರಯ್ಯ ಸೂಚನೆ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ರಾಮನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಗಸ್ಟ್ ಮಾಹೆಯ 19ರಂದು ನುಲಿಯ ಚಂದಯ್ಯ ಜಯಂತಿ, ಆ. 20ರಂದು ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ಆ.26ರಂದು ಶ್ರೀ ಕೃಷ್ಣ ಜಯಂತಿಗಳನ್ನು ಆಚರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಈ ಮೂರು ಜಯಂತಿ ಕಾರ್ಯಕ್ರಮವನ್ನು ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಚರಿಸುವಂತೆ ಹಾಗೂ ಕಾರ್ಯಕ್ರಮಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು. ಆ. 20ರಂದು ಶ್ರೀ ಕೃಷ್ಣ ಜಯಂತಿಯಂದು ವಿವಿಧ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಆಯೋಜಿಸುವಂತೆ ತಿಳಿಸಿದರು.