ಅನ್ಯಾಯ ಸರಿಪಡಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಸಕ ಬಸವರಾಜ ರಾಯರಡ್ಡಿಗೆ ಮನವಿ
ಕನ್ನಡಪ್ರಭ ವಾರ್ತೆ ಯಲಬುರ್ಗಾಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಯಲಬುರ್ಗಾ-ಕುಕನೂರು ಸಂಘದವರು ವೃಂದ ಮತ್ತು ನೇಮಕಾತಿ ನಿಯಮಗಳಿಂದ ಆಗಿರುವ ತಪ್ಪುನ್ನು ಸರಿಪಡಿಸಬೇಕು, ಮುಖ್ಯ ಶಿಕ್ಷಕರ ಬಡ್ತಿ ಮತ್ತು ಪ್ರೌಢಶಾಲೆಗೆ ಬಡ್ತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಮಂಗಳವಾರ ಶಾಸಕ ಬಸವರಾಜ ರಾಯರಡ್ಡಿಗೆ ಮನವಿ ಸಲ್ಲಿಸಿದರು.
ಒಂದರಿಂದ ಏಳನೇ ತರಗತಿಗೆ ನೇಮಕಾತಿ ಹೊಂದಿ ಸುಮಾರು ೧೫ರಿಂದ ೩೦ ವರ್ಷಗಳ ಕಾಲ ೧ರಿಂದ ೭ನೇ ತರಗತಿಯವರೆಗೆ ಬೋಧನೆ ಮಾಡಿದ್ದು, ೨೦೧೭ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಒಂದರಿಂದ ಏಳನೇ ತರಗತಿಗೆ ನೇಮಕಾತಿ ಹೊಂದಿದವರನ್ನು ೧ರಿಂದ ೫ ಎಂದು ಪರಿಗಣಿಸಿರುವುದರಿಂದ ಹಿಂಬಡ್ತಿ ನೀಡಿದಂತಾಗಿದೆ. ಇದರಿಂದಾಗಿ ಒಂದು ಲಕ್ಷ ಇಪ್ಪತ್ತು ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತೀವ್ರ ಅನ್ಯಾಯವಾಗಿದೆ. ಪದವಿ ಪೂರೈಸಿದ ಶಿಕ್ಷಕರಿಗೆ ಮತ್ತು ಸೇವಾ ಅನುಭವಕ್ಕೆ ಬೆಲೆ ಇಲ್ಲದಂತಾಗಿದೆ. ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯಿಂದಾಗಿ ಹಲವಾರು ಸಮಸ್ಯೆಗಳು ಉದ್ಭವಿಸಿವೆ. ಇದನ್ನು ಸರಿಪಡಿಸಲು ಸಂಘಟನೆ ಹಲವಾರು ಪ್ರಯತ್ನಗಳನ್ನು ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಹೀಗಾಗಿ ಇಂದು ತಾಲೂಕು ಹಂತದಲ್ಲಿ ಮನವಿ ಸಲ್ಲಿಕೆ ಹಾಗೂ ಆ. ೧೨ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.ಮನವಿ ಸ್ವೀಕರಿಸಿದ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಈ ಸಮಸ್ಯೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್.ವಿ. ಧರಣಾ, ಮಾರುತೇಶ ತಳವಾರ, ಕಾರ್ಯದರ್ಶಿಗಳಾದ ಸಿದ್ಲಿಂಗಪ್ಪ ಶ್ಯಾಗೋಟಿ, ಮಹಾವೀರ ಕಲ್ಭಾವಿ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.