ಹಾವೇರಿ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಜಿಲ್ಲಾದ್ಯಂತ ಭರದ ಸಿದ್ಧತೆ ನಡೆದಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಮನೆ, ಮನೆಗೂ ಬೆಳಕಿನ ಮೆರುಗು ನೀಡಲು ಬಗೆಬಗೆಯ ಆಕಾಶ ಬುಟ್ಟಿಗಳು ವಿಶಿಷ್ಟ ಚಿತ್ತಾರಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೆ, ಮಣ್ಣಿನ ಹಣತೆಗಳ ಖರೀದಿಯಲ್ಲಿ ಜನ ಆಸಕ್ತಿ ತೋರಿದ್ದಾರೆ.
ಹಬ್ಬಕ್ಕೆ ಭರದ ಸಿದ್ಧತೆ: ನಾಡಿನ ದೊಡ್ಡ ಹಬ್ಬವಾದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಭರ್ಜರಿ ಸಿದ್ಧತೆ ನಡೆದಿದೆ. ಹಬ್ಬದ ಪೂರ್ವ ತಯಾರಿಯಾಗಿ ಜನತೆ ಬಗೆ-ಬಗೆಯ ಹೂವು, ಹಣ್ಣು ಸೇರಿದಂತೆ ಇತರ ದಿನಸಿ ಖರೀದಿಗೆ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ದೀಪಾವಳಿ ನಿಮಿತ್ತ ಲಕ್ಷ್ಮೀ ಹಾಗೂ ಸರಸ್ವತಿ ದೇವಿಯನ್ನು ಮನೆ, ಅಂಗಡಿಗಳಲ್ಲಿ ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುವ ಸಂಪ್ರದಾಯವಿದೆ. ಆದರೆ, ದಿನನಿತ್ಯದ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ಇದು ಜನಸಾಮಾನ್ಯರ ಜೇಬು ಬಿಸಿಯಾಗುವಂತೆ ಮಾಡಿದೆ. ಮೇಣಬತ್ತಿ ದೀಪ, ಆಕಾಶ ಬುಟ್ಟಿ, ಸೇವಂತಿಗೆ ಹೂವು, ಸಿಹಿ ತಿನಿಸುಗಳಲ್ಲಿ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರ ಜೇಬುಗಳಿಗೆ ಕಹಿ ಅನುಭವ ನೀಡುತ್ತಿದೆ. ಅಲಂಕಾರಿಕ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಹಾಗಾಗಿ ಗ್ರಾಹಕರು ಯೋಚಿಸಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೆಚ್ಚು ಜನಸಂದಣಿ ಕಂಡು ಬರುತ್ತಿದ್ದರೂ ವ್ಯಾಪಾರ ಮಾತ್ರ ಕಳೆದ ಬಾರಿಗಿಂತ ತೀರಾ ಕಡಿಮೆಯಾಗಿದೆ. ಅಲಂಕಾರಿಕ ಸಾಮಗ್ರಿ ಖರೀದಿ:ದೀಪಾವಳಿ ಹಬ್ಬದಲ್ಲಿ ರೈತನ ಮಿತ್ರ ಎತ್ತುಗಳು ಸೇರಿದಂತೆ ಜಾನುವಾರುಗಳಿಗೆ ವಿಶೇಷವಾಗಿ ಅಲಂಕಾರ ಮಾಡಲಾಗುತ್ತಿದೆ. ಹಬ್ಬದ ಖುಷಿಗಾಗಿ ಮನೆಯ ಎಲ್ಲ ಸದಸ್ಯರಿಗೆ ಹೊಸ ಬಟ್ಟೆ ಖರೀದಿ ಮಾಡುವಂತೆ ಜಾನುವಾರುಗಳಿಗೆ ಅಲಂಕಾರದ ಸಾಮಗ್ರಿಗಳನ್ನು ಖರೀದಿ ಮಾಡಲಾಗುತ್ತಿದೆ. ಪ್ರಮುಖವಾಗಿ ಮುಗುದಾರ, ಝೂಲ, ಕೊಂಬೆಣಸು, ಹಗ್ಗ, ಹಣೆಕಟ್ಟು, ಗೆಜ್ಜೆಸರ, ಕೊಂಬಿಗೆ ಹಚ್ಚಲು ಬಗೆಬಗೆಯ ಬಣ್ಣ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಜೊತೆಗೆ ವಾಹನಗಳ ಅಲಂಕಾರಿಕ ವಸ್ತುಗಳ ವ್ಯಾಪಾರವೂ ಜೋರಾಗಿದೆ.
ಮಣ್ಣಿನ ಹಣತೆಗೆ ಬೇಡಿಕೆ: ನಿರಂತರ ಜಾಗೃತಿ ಫಲವಾಗಿ ಬಹುತೇಕರು ಹಬ್ಬವನ್ನು ಸಾಂಪ್ರದಾಯಿಕವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಮಣ್ಣಿನ ಹಣತೆಗಳನ್ನೇ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ಆಕರ್ಷಕ ರೀತಿಯ ಹಣತೆಗಳು ಲಗ್ಗೆ ಇಟ್ಟಿದ್ದು, ಜನರು ಚೌಕಾಶಿ ಮಾಡಿಯಾದರೂ ಇವನ್ನೇ ಖರೀದಿ ಮಾಡುತ್ತಿದ್ದಾರೆ. ದೊಡ್ಡ ಮಾಲ್‌ಗಳಲ್ಲೂ ಆಕರ್ಷಕ ಹಣತೆಗಳು ಬಂದಿದ್ದು, ಭಾರಿ ಬೇಡಿಕೆ ಬಂದಿದೆ. ಅದೇ ರೀತಿ ಹಸಿರು ಪಟಾಕಿ ಖರೀದಿ ಸಾಧಾರಣ ರೀತಿಯಲ್ಲಿ ಆಗುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ಜೋರಾಗುವ ಸಾಧ್ಯತೆಯಿದೆ.