ಅಬ್ಬಿಗೇರಿಯಲ್ಲಿ ದಸರಾ ಧರ್ಮ ಸಮ್ಮೇಳನದ ತಯಾರಿ ಪೂರ್ಣ: ಶ್ರೀ ವೀರಭದ್ರ ಶಿವಾಚಾರ್ಯರು

KannadaprabhaNewsNetwork |  
Published : Oct 03, 2024, 01:17 AM ISTUpdated : Oct 03, 2024, 01:18 AM IST
ನರೇಗಲ್ಲ ಸಮೀಪದ ಅಬ್ಬಿಗೇರಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಮೈದಾನದಲ್ಲಿ ಹಾಕಿರುವ ಬೃಹತ್ ಪೆಂಡಾಲ್. | Kannada Prabha

ಸಾರಾಂಶ

ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಅ. 3ರಿಂದ ಪ್ರಾರಂಭವಾಗಲಿರುವ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವದ ಸಿದ್ಧತೆ ಪೂರ್ಣಗೊಂಡಿದೆ ಎಂದು ಸಿದ್ದರಬೆಟ್ಟ, ಅಬ್ಬಿಗೇರಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು ಹೇಳಿದರು.

ನರೇಗಲ್ಲ: ಸಮೀಪದ ಅಬ್ಬಿಗೇರಿಯಲ್ಲಿ ಅ. 3ರಿಂದ ಪ್ರಾರಂಭವಾಗಲಿರುವ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವದ ಸಿದ್ಧತೆ ಭರದಿಂದ ಸಾಗಿದೆ. ಗುರುಮನೆ ದರ್ಬಾರ್‌, ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಎಲ್ಲ ತಯಾರಿ ಪೂರ್ಣಗೊಂಡಿದೆ ಎಂದು ಸಿದ್ದರಬೆಟ್ಟ, ಅಬ್ಬಿಗೇರಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು ಹೇಳಿದರು.

ಬುಧವಾರ ಸಂಜೆ ಸ್ಥಳ ಪರಿಶೀಲಿಸಿ, ವಿವರಿಸಿದ ಶ್ರೀಗಳು, ಮುಖ್ಯ ಸಭಾ ಮಂಟಪದ ಅಳತೆ 240 ಅಡಿ ಉದ್ದ ಮತ್ತ 120 ಅಡಿ ಅಗಲದ ಜರ್ಮನ್ ಸ್ಟೆಚರ್ನ್‌ ಪೆಂಡಾಲ್‌ ಹಾಕಲಾಗಿದೆ. ಮುಖ್ಯ ವೇದಿಕೆ 66 ಅಡಿ ಉದ್ದ ಮತ್ತು 32 ಅಡಿ ಅಗಲ ಹೊಂದಿದ್ದು, ಸಾಕಷ್ಟು ಅತಿಥಿಗಳು ವೇದಿಕೆಯ ಮೇಲೆ ಆರಾಮವಾಗಿ ಕೂಡಬಹುದಾಗಿದೆ. ಮುಖ್ಯ ವೇದಿಕೆಗೆ ಆಗಮಿಸಲು ಕೋಟೆ ಆಕಾರದ ಒಂದು ಬೃಹತ್ ಮಹಾದ್ವಾರ ನಿರ್ಮಿಸಲಾಗಿದ್ದು, ಅದು 90 ಅಡಿ ಎತ್ತರ ಮತ್ತು 25 ಅಡಿ ಅಗಲವನ್ನು ಹೊಂದಿರುವುದರಿಂದ ಎಂತಹ ವಾಹನಗಳೂ ಸುಲಭವಾಗಿ ಪ್ರವೇಶ ಮಾಡಬಹುದಾಗಿದೆ ಎಂದು ತಿಳಿಸಿದರು.

ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಊಟಕ್ಕಾಗಿ 200 ಅಡಿ ಉದ್ದ ಮತ್ತು 110 ಅಡಿ ಅಗಲದ ಬೃಹತ್ ಊಟದ ಪೆಂಡಾಲ್‌ ಹಾಕಲಾಗಿದ್ದು, ಒಮ್ಮೆಗೆ ಸಹಸ್ರಾರು ಜನರು ಊಟ ಮಾಡಲು ಅನುಕೂಲವಾಗಿದೆ. ನೀರಿನ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆಯನ್ನು ಶ್ರೀಮಠದ ಭಕ್ತರು ಮಾಡಿದ್ದಾರೆ ಎಂದರು.

ಬುಧವಾರ ಸಂಜೆ ಬಾಳೆಹೊನ್ನೂರು ರಂಭಾಪೂರಿ ಪೀಠದ ಜ. ಡಾ. ವೀರಸೋಮೇಶ್ವರ ಭಗವತ್ಪಾದರ ಪುರ ಪ್ರವೇಶವಾಗಿದೆ. ಭಕ್ತರು ಸಕಲ ವಾದ್ಯಗಳ ಮೆರವಣಿಗೆ ಮೂಲಕ ಗ್ರಾಮದ ಮಧ್ಯದಲ್ಲಿನ ಹಿರೇಮಠಕ್ಕೆ ಕರೆತಂದಿದ್ದಾರೆ. ಕುಂಭ ಹೊತ್ತ ಮಹಿಳೆಯರು ಊರಿನ ರಾಜ ಬೀದಿಗಳಲ್ಲಿ ಸಾಗುವ ಮೆರವಣಿಗೆಯೊಂದಿಗೆ ನರೇಗಲ್ಲ ರಸ್ತೆಯಲ್ಲಿನ ಹೊಸಮಠದ ರೇಣುಕಾಚಾರ್ಯ ಮಂಗಲ ಮಂದಿರಕ್ಕೆ ಸಾಗಿ ಸಂಪನ್ನಗೊಂಡಿತು ಎಂದು ತಿಳಿಸಿದರು.

ಈ ವೇಳೆ ನರೇಗಲ್ಲದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ರೋಣದ ಗುಲಗಂಜಿ ಮಠದ ಗುರುಪಾದ ದೇವರು, ಶಾಸಕ ಜಿ.ಎಸ್. ಪಾಟೀಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು