ದೊಡ್ಡಬಳ್ಳಾಪುರ: ಗಗನಕ್ಕೇರಿದ ಬೆಲೆಗಳ ಅಬ್ಬರದಲ್ಲಿ ಈ ಬಾರಿ ಗೌರಿ-ಗಣೇಶ ಹಬ್ಬದ ಆಚರಣೆಗೆ ಸಂಭ್ರಮದ ಸಿದ್ದತೆ ನಡೆದಿದೆ. ವಿಘ್ನನಿವಾರಕನಾದ ಗಣಪತಿಯನ್ನು ಮನೆಮನೆಗೆ ಅದ್ದೂರಿಯಿಂದ ಸ್ವಾಗತಿಸಲು ಜನತೆ ಸಜ್ಜಾಗಿದ್ದಾರೆ. ಆದರೆ ಜೇಬು ಸುಡುತ್ತಿರುವ ಹೂ-ಹಣ್ಣು-ತರಕಾರಿ ಬೆಲೆ ಜನರನ್ನು ತಬ್ಬಿಬ್ಬುಗೊಳಿಸಿದೆ. ಬೆಲೆ ಏರಿಕೆ ಮಧ್ಯೆ ಸಂಭ್ರಮದ ಹಬ್ಬಕ್ಕೆ ಸಜ್ಜಾಗಿದ್ದಾರೆ.
ಈ ಮಧ್ಯೆ ದೊಡ್ಡಬಳ್ಳಾಪುರ ನಗರ ಮತ್ತು ತಾಲೂಕಿನ ಎಲ್ಲೆಡೆ ಸ್ವರ್ಣಗೌರಿ ವ್ರತಾಚರಣೆ ಹಾಗೂ ಗಣೇಶ ಚತುರ್ಥಿ ಹಬ್ಬಕ್ಕೆ ಮನೆಮಂದಿಯೆಲ್ಲಾ ಈಗಾಗಲೇ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಸಾರ್ವಜನಿಕ ಗಣೇಶೋತ್ಸವಗಳು ಒಂದೆಡೆಯಾದರೆ, ಮನೆಮನೆಗಳಲ್ಲಿ ಗೌರಿ-ಗಣಪನನ್ನು ಆರಾಧಿಸುವ ಸಡಗರ ಕಂಡು ಬರುತ್ತಿದೆ.ಕೈಸುಡುವ ಮಾರುಕಟ್ಟೆ:
ಹಬ್ಬದ ಮಾರುಕಟ್ಟೆ ಅಕ್ಷರಶಃ ಕೈಸುಡುತ್ತಿದೆ. ಇಲ್ಲಿನ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಮಾರಾಟದ ಅಬ್ಬರ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿದೆ. ಮೊದಲೇ ಸಾಕಷ್ಟು ಏರಿದ್ದ ತರಕಾರಿ ಹಾಗೂ ಹೂಗಳ ಬೆಲೆ ಹಬ್ಬಕ್ಕೆಂದೇ ದುಬಾರಿಯಾಗಿ ಜನರನ್ನು ಕಂಗಾಲಾಗಿಸಿದೆ. ಇದರೊಂದಿಗೆ ಗಣಪ-ಗೌರಿ ಮೂರ್ತಿಗಳ ಪ್ರತಿಮೆಗಳು ಭರದಿಂದ ಮಾರಾಟವಾಗುತ್ತಿದ್ದು, ಅವೂ ದುಬಾರಿ ಎನಿಸಿವೆ. ನಗರದ ಮಾರ್ಕೆಟ್‌ನಲ್ಲಿ ಹಣ್ಣುಗಳ ನೂರಾರು ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ಆದರೆ ಹೂವು ಹಣ್ಣಿನ ಬೆಲೆಗಳು ಹಿಂದೆಂದೂ ಕಾಣದಷ್ಟು ಗಗನಮುಖಿಯಾಗಿವೆ.ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿಗೆ ₹800 ರಿಂದ ₹1000 ಗಳ ವರೆಗಿದ್ದರೆ ಕನಕಾಂಬರ ಕೆ.ಜಿಗೆ ₹1,800, ಸೇವಂತಿಗೆ, ಬಟನ್ಸ್, ಗುಲಾಬಿ ಮೊದಲಾದ ಹೂವಿನ ಬೆಲೆಗಳು ₹300 ರವರೆಗೂ ಇವೆ.
ಅಲಂಕಾರಿಕ ಹೂಗುಚ್ಚಗಳು 150 ರಿಂದ 200 ರು.ಗಳವರೆಗೆ ಧಾರಣೆ ಇದೆ. ಇನ್ನು ಹಣ್ಣುಗಳ ಪೈಕಿ ಬಾಳೆಹಣ್ಣು ₹60, ಸೇಬು ₹200, ದಾಳಿಂಬೆ ₹200, ಕಿತ್ತಳೆ ಕೆಜಿಗೆ ₹210 ದಾಟಿದೆ. ಹೀಗೆ ಎಲ್ಲ ಬಗೆಯ ಹಣ್ಣುಗಳ ಬೆಲೆಯೂ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ತಾವರೆ ಮತ್ತು ಡಾಲಿಯ ಹೂಗಳು ₹40 ಕ್ಕೆ ಕಡಿಮೆ ಇಲ್ಲ.ಕಳೆದ ಕೆಲದಿನಗಳಿಂದ ಸುರಿದ ನಿರಂತರ ಮಳೆ ಪರಿಣಾಮ ತರಕಾರಿಗಳ ಬೆಲೆಗಳು ಸಹ ಈಗ ಹಬ್ಬಕ್ಕೆಂದೇ ಏರಿಕೆಯಾಗಿವೆ. ಇಷ್ಟೆಲ್ಲಾ ನಡುವೆಯೂ ಎಷ್ಟಾದರೂ ಸರಿ ಹಬ್ಬ ಮಾಡಲೇ ಬೇಕೆಂದು ಜನರು ಕೊಂಡೊಯ್ಯುತ್ತಿದ್ದರು. ಮಾರುಕಟ್ಟೆ ಪ್ರದೇಶದಲ್ಲಿನ ಜನಸಂದಣಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.
ಕುಗ್ಗದ ಭರಾಟೆ:ಬೆಲೆ ಏರಿಕೆ ಬಿಸಿ ಇಷ್ಟಿದ್ದರೂ ಹಬ್ಬದ ಭರಾಟೆ ಮಾತ್ರ ಕುಗ್ಗಿಲ್ಲ. ಸೋಮವಾರ ಮಧ್ಯಾಹ್ನದಿಂದಲೂ ಮಾರುಕಟ್ಟೆಯಲ್ಲಿ ಕಾಲಿಡಲೂ ಜಾಗವಿಲ್ಲದ ಸ್ಥಿತಿ ಇತ್ತು. ಹೂ-ಹಣ್ಣಿನ ವ್ಯಾಪಾರ, ಅಲಂಕಾರಿಕ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಬೆಲೆ ಎಷ್ಟಾದರೆ ಏನು, ಹಬ್ಬ ಮಾಡಲೇ ಬೇಕಲ್ಲ, 1 ಕೆಜಿ ಕೊಳ್ಳವಲ್ಲಿ ಅರ್ಧ ಕೆಜಿ ಕೊಂಡರಾಯಿತು. ಇದ್ದುದರಲ್ಲೇ ಮಿತವ್ಯಯಿಯಾಗಿ ಹಬ್ಬ ಮಾಡಬೇಕೆಂದಿದ್ದೇವೆ ಎನ್ನುವ ಜನ ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದ್ದಾರೆ.
25ಕೆಡಿಬಿಪಿ4- ದೊಡ್ಡಬಳ್ಳಾಪುರದಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಬಾಳೆಕಂದು, ತಳಿರುತೋರಣ ಖರೀದಿ ಭರಾಟೆ.25ಕೆಡಿಬಿಪಿ5-
ದೊಡ್ಡಬಳ್ಳಾಪುರದ ಮಾರುಕಟ್ಟೆಯಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಹೂ-ಹಣ್ಣುಗಳ ಖರೀದಿ ಭರಾಟೆ.