ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಬಿ.ಕಣಬೂರು, ಮಾಗುಂಡಿ, ಬನ್ನೂರು, ಕರ್ಕೇಶ್ವರ, ಆಡುವಳ್ಳಿ, ದೇವದಾನ, ಬಿದರೆ, ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 75 ಗಣೇಶ ಸಮಿತಿಯವರು ಗಣೇಶ ವಿಗ್ರಹದ ಪ್ರತಿಷ್ಠಾಪನೆಗಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆದಿದ್ದಾರೆ ಎಂದು ಪತ್ರಿಕೆಗೆ ಹೇಳಿದ್ದಾರೆ.
ಚತುರ್ಥಿಯಂದು ಪ್ರತಿಷ್ಠಾಪಿಸಿದ ವಿಗ್ರಹಗಳ ಪೈಕಿ 5 ಕಡೆಗಳಲ್ಲಿ ಪ್ರತಿಷ್ಠಾಪಿಸಿದ ದಿನದಂದೆ ವಿಸರ್ಜಿಸಲು ಸಮಿತಿಯವರು ದಿನ ನಿಗದಿಪಡಿಸಿಕೊಂಡಿದ್ದಾರೆ. ಮೂರನೇ ದಿನವಾದ ಶುಕ್ರವಾರ 45 ಕಡೆಗಳಲ್ಲಿ ವಿಗ್ರಹ ವಿಸರ್ಜನೆ ಮಾಡಲಾಗುವುದು. ನಾಲ್ಕನೇ ದಿನ 2 ಕಡೆ, ಐದನೇ ದಿನ 17 ಕಡೆ, ಆರನೇ ದಿನ 2 ಕಡೆ, ಏಳನೇ ದಿನ 1 ಕಡೆ, ಎಂಟನೇ ದಿನ 1 ಕಡೆ, ಒಂಬತ್ತನೇ ದಿನ 1 ಕಡೆ ಗಣೇಶ ವಿಗ್ರಹದ ವಿಸರ್ಜನೆ ನಡೆಯಲಿದೆ. ವಿಗ್ರಹ ಪ್ರತಿಷ್ಠಾಪಿಸಿದ 15ನೇ ದಿನ 1 ಕಡೆ ಅಂದರೆ ಪಟ್ಟಣದ ವಿದ್ಯಾಗಣಪತಿ ಸಮಿತಿಯ ಗಣೇಶ ವಿಗ್ರಹದ ವಿಸರ್ಜನೆ ನಡೆಯಲಿದೆ ಎಂದಿದ್ದಾರೆ.75 ಕಡೆಗಳಲ್ಲಿ 68 ಸಮಿತಿಯ ಗಣೇಶೋತ್ಸವ ನಡೆಯುವ ಪ್ರದೇಶವನ್ನು ಪೊಲೀಸ್ ಇಲಾಖೆ ಸಾಮಾನ್ಯ ಪ್ರದೇಶವೆಂದು, 6 ಕಡೆಗಳಲ್ಲಿ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದೆ. ಪಟ್ಟಣದ ವಿದ್ಯಾಗಣಪತಿ ಸಮಿತಿಯ ಗಣೇಶೋತ್ಸವ ಜಿಲ್ಲೆಯಲ್ಲಿ ಅತೀ ದೊಡ್ಡ ಉತ್ಸವ, ವಿಜೃಂಭಣೆಯಿಂದ ನಡೆಯುವ ಹಿನ್ನೆಲೆಯಲ್ಲಿ ಹಾಗೂ ಅತೀ ಹೆಚ್ಚು ಜನ ಸೇರುವ ಉದ್ದೇಶದಿಂದ ಇಲ್ಲಿನ ಉತ್ಸವವನ್ನು ಅತೀ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಠಾಣಾ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಿಸುವ ಸಮಿತಿಯವರು ಹಾಗೂ ಪಾಲ್ಗೊಳ್ಳುವ ಭಕ್ತರು ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡಬೇಕು. ಪೊಲೀಸ್ ಇಲಾಖೆ ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಗಣೇಶ ಹಬ್ಬವನ್ನು ಶಾಂತಿ, ಸಾಮರಸ್ಯದಿಂದ ಆಚರಿಸಿ ಇತರರಿಗೆ ಮಾದರಿಯಾಗಬೇಕು. ಇಲಾಖೆಯ ಸಿಬ್ಬಂದಿ ಸಹ ಉತ್ಸವಗಳು ಅಚ್ಚುಕಟ್ಟಾಗಿ ನಡೆಯುವಂತೆ ಸಹಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.