ಹಾವೇರಿ: ಜಿಲ್ಲಾಡಳಿತದಿಂದ ಶ್ರೀ ದೇವರ ದಾಸಿಮಯ್ಯ, ಶ್ರೀ ಅಗ್ನಿಬನ್ನಿರಾಯ ಹಾಗೂ ಭಗವಾನ್ ಮಹಾವೀರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಸೂಚನೆ ನೀಡಿದರು.
ಶಿಷ್ಟಾಚಾರದ ಅನುಸಾರ ಆಮಂತ್ರಣ ಪತ್ರಿಕೆ, ಬ್ಯಾನರ್, ಉಪನ್ಯಾಸಕರ ಆಯ್ಕೆ, ನೀರು, ಉಪಹಾರ, ಆಸನ, ವೇದಿಕೆ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಶಾಲಾ-ಕಾಲೇಜು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಈ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಗೆ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾ. 24ರಂದು ಶ್ರೀ ದೇವರದಾಸಿಮಯ್ಯ ಜಯಂತಿ ಹಾಗೂ ಮಾ. 27ರಂದು ಶ್ರೀ ಅಗ್ನಿಬನ್ನಿರಾಯ ಜಯಂತಿ ಬೆಳಗ್ಗೆ 11ಕ್ಕೆ ಹಾವೇರಿ ನಗರದ ಗಾಂಧಿ ಭವನದಲ್ಲಿ ಆಚರಣೆಗೆ ನಿರ್ಣಯಿಸಲಾಯಿತು.
ಭಗವಾನ್ ಮಹಾವೀರ ಜಯಂತಿಯನ್ನು ಮಾ. 31ರ ಬದಲಾಗಿ ಮಾ. 30ರಂದು ಆಚರಣೆಗೆ ಸರ್ಕಾರಕ್ಕೆ ರಾಜ್ಯಮಟ್ಟದಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಆದೇಶ ನೋಡಿಕೊಂಡು ಭಗವಾನ್ ಮಹಾವೀರ ಆಚರಣೆ ದಿನಾಂಕ ನಿಗದಿಗೆ ಇಲಾಖೆಗೆ ತಿಳಿಸಲಾಗುವುದು ಎಂದು ಸಮಾಜದ ಮುಖಂಡರಾದ ಚಂದ್ರನಾಥ ಕಳಸೂರ ಸಭೆಗೆ ತಿಳಿಸಿದರು.ಸಮಾಜದ ಮುಖಂಡರು ಜಯಂತಿಗಳ ಆಚರಣೆ ಬಗ್ಗೆ ಚರ್ಚಿಸಿ ಸಲಹೆಗಳನ್ನು ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹಿರೇಮಠ ಅವರು ಜಂತಿಗಳ ಆಚರಣೆ ಕುರಿತು ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.