ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಾಪನೆ ತಯಾರಿ: ಡಾ. ಮಂತರ್ ಗೌಡ

KannadaprabhaNewsNetwork |  
Published : Oct 30, 2025, 02:30 AM IST
ಚಿತ್ರ :  26ಎಂಡಿಕೆ4 : ರಾಜ್ಯ ಸಂಸ್ಥೆ ವತಿಯಿಂದ ಶಾಸಕ ಮಂತರ್ ಗೌಡ ಅವರನ್ನು ಗೌರವಿಸಲಾಯಿತು  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರ್ಕಾರ ತಯಾರಿದೆ ಎಂದು ಶಾಸಕರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರ್ಕಾರ ತಯಾರಿದ್ದು, ಮಡಿಕೇರಿ ಸಮೀಪ ಖಾಸಗಿ ವ್ಯಕ್ತಿಗಳಿಂದ ಕನಿಷ್ಠ 120 ಎಕರೆ ಸಮತಟ್ಟು ಜಾಗ ಲಭ್ಯವಿದ್ದಲ್ಲಿ ಅದನ್ನು ಮಾರುಕಟ್ಟೆ ದರದಲ್ಲಿ ಖರೀದಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತೇಳಿಸಿದ್ದಾರೆ.

ಮಡಿಕೇರಿ ಸಮೀಪದ ಖಾಸಗಿ ರೆಸಾರ್ಟ್ ನಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಮಹಾ ಸಂಸ್ಥೆ ವತಿಯಿಂದ ಸಂವಾದ ಕಾರ್ಯಕ್ರಮ ಹಾಗೂ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಇತರ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ಕುಶಾಲನಗರ ಸಮೀಪದ ಚಿಕ್ಕ ಅಳುವಾರದಲ್ಲಿ ಜಾಗ ಗುರುತಿಸಿದ್ದರೂ ಅದು ಸೂಕ್ತವಲ್ಲ ಎಂದು ವರದಿ ಬಂದಿದ್ದು ಹಾಗಾಗಿ ಮಡಿಕೇರಿ ಸಮೀಪ ಸಮತಟ್ಟು ಪ್ರದೇಶ ಲಭ್ಯವಾದಲ್ಲಿ ಅದನ್ನು ಸರಕಾರ ಖರೀದಿಸಲಿದೆ ಎಂದು ತಿಳಿಸಿದ ಶಾಸಕರು ಜಿಲ್ಲೆಯಲ್ಲಿ ನಾಲ್ಕು ಕಡೆ ಹೆಲಿಪೋರ್ಟ್ ಸ್ಥಾಪನೆಗೂ ಸರಕಾರ ಮುಂದಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಹಲವು ಹೋಂಸ್ಟೇಗಳು ಕಾನೂನಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು ಇದರಿಂದ ಪ್ರವಾಸಿಗರಿಗೂ ತೊಂದರೆ ಉಂಟಾಗುತ್ತಿದೆ, ಹಾಗಾಗಿ ಪ್ರವಾಸೋದ್ಯಮಕ್ಕೆ ಕಟ್ಟು ನಿಟ್ಟಿನ ನಿಯಮ ಜಾರಿ ಅಗತ್ಯ ಎಂದು ಅವರು ಒತ್ತಿ ಹೇಳಿದರು.ಮೈಸೂರಿನಿಂದ ಕುಶಾಲನಗರವರೆಗಿನ ರೈಲ್ವೆ ಸಂಪರ್ಕ ಯೋಜನೆಗೆ ರಾಜ್ಯ ಸರ್ಕಾರ ಆದಾಯದ ದೃಷ್ಟಿಯಿಂದ ಒಪ್ಪಿಗೆ ನೀಡದಿದ್ದರೂ, ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಅವರು ಈ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು ಸರ್ಕಾರವನ್ನು ಮನವೊಲಿಸಲಾಗುವುದು ಎಂದು ಮಂತರ್ ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಎಫ್ ಕೆ ಸಿ ಸಿ ಐ ಅಧ್ಯಕ್ಷೆ ಉಮಾರೆಡ್ಡಿ ಅವರು, ತಮ್ಮ ಅಧಿಕಾರಾವಧಿಯಲ್ಲಿ ಮಂತನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸುಮಾರು 2500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಇದೆ ಎಂದರು.ಕರ್ನಾಟಕದಲ್ಲಿ ಸುಮಾರು 7 ಲಕ್ಷ ಎಂ ಎಸ್ ಎಂ ಇ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಇದನ್ನು 10 ಲಕ್ಷಕ್ಕೆ ಏರಿಸುವ ಬಗ್ಗೆ ಸಂಸ್ಥೆ ಯೋಜನೆ ಹಮ್ಮಿಕೊಂಡಿದೆ ಎಂದರು.ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪರವಾಗಿ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ.ಚಿದ್ವಿಲಾಸ್ ಅವರು, ಕಳೆದ ಆರು ತಿಂಗಳುಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ರಸ್ತೆಗಳು ತೀವ್ರ ದುರಸ್ತಿಯಾಗಿದ್ದು ಅವುಗಳನ್ನು ಸರಿಪಡಿಸಲು ರಾಜ್ಯ ಸರಕಾರ ವಿಶೇಷ ಅನುದಾನ ನೀಡುವ ನಿಟ್ಟಿನಲ್ಲಿ ಎಫ್ ಕೆ ಸಿ ಸಿ ಐ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.ಮೈಸೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಕೆಲಸ ಕುಂಠಿತಗೊಂಡಿದ್ದು ಈ ಬಗ್ಗೆ ಶೀಘ್ರ ಕಾಮಗಾರಿ ಕೈಗೊಂಡು ಅದನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಯವರನ್ನು ಸಂಸ್ಥೆ ಸಂಪರ್ಕಿಸುವಂತೆ ಕೋರಿದರು.ದಶಕಗಳಿಂದ ಕೊಡಗು ಜಿಲ್ಲೆ, ಲೋಕಸಭಾ ಕ್ಷೇತ್ರಕ್ಕಾಗಿ ದಕ್ಷಿಣ ಕನ್ನಡ ಹಾಗೂ ಇದೀಗ ಮೈಸೂರು ಜಿಲ್ಲೆಯನ್ನು ಅವಲಂಬಿಸಿದ್ದು ಮುಂದಿನ ಲೋಕಸಭಾ ಚುನಾವಣಾ ಹಂತದಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರ ಆಗುವಂತೆ ಸರಕಾರ ಗಮನಹರಿಸಬೇಕು ಎಂದು ಅವರು ಆಶಿಸಿದರು.ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಕೆ. ವಿಶ್ವನಾಥ್ ಅವರು, ಕುಶಾಲನಗರದಿಂದ ಮಂಗಳೂರು ನವ ಬಂದರಿಗೆ ರಸ್ತೆ ಮೂಲಕ ಮಳೆಗಾಲದಲ್ಲಿ ಕಾಫಿ ಸಾಗಾಟ ಮಾಡಲು ಅವಕಾಶ ಇರುವುದಿಲ್ಲ, ಇದರಿಂದ ಸಾಗಾಟದ ಹೆಚ್ಚಾಗಿ ಅದು ಬೆಳೆಗಾರನ ಮೇಲೆ ಹೊರೆಯಾಗುತ್ತಿದೆ,ಈ ನಿಟ್ಟಿನಲ್ಲಿ ಸರಕಾರ ನಿರಂತರ ಲಾರಿ ಸಾಗಾಟಕ್ಕೆ ಸೂಕ್ತವಾಗುವ ರಸ್ತೆ ನಿರ್ಮಾಣ ಮಾಡುವಂತೆ ಎಫ್ ಕೆ ಸಿ ಸಿ ಐ ಒತ್ತಾಯ ಮಾಡಬೇಕು ಎಂದು ಆಶಿಸಿದರು.ಅದೇ ಸಂಸ್ಥೆಯ ಮತ್ತೊಬ್ಬ ಕಾರ್ಯಕಾರಿ ಮಂಡಳಿ ಸದಸ್ಯ ಪ್ರದೀಪ್ ಪೂವಯ್ಯ ಅವರು ಮಾತನಾಡಿ, ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತಾದರೂ ಶೇಕಡಾ 70ರಷ್ಟು ಕುಶಾಲನಗರದಿಂದಲೇ ರಪ್ತಾಗುತ್ತಿದ್ದು ಸೂಕ್ತ ರಸ್ತೆಯ ಅವಶ್ಯಕತೆ ಬಗ್ಗೆ ಗಮನ ಸೆಳೆದರಲ್ಲದೆ ನವ ಮಂಗಳೂರು ಬಂದರಿಗೆ ಎಲ್ಲೆಡೆಯಿಂದ ಸುಗಮ ರಸ್ತೆ ಸಂಪರ್ಕ ಆಗಬೇಕಾದ ಅಗತ್ಯವಿದೆ ಎಂದರು. ಸಿಪಿಎ ಅಧ್ಯಕ್ಷ ನಂದ ಬೆಳ್ಳಿಯಪ್ಪ ಅವರು ಮಾತನಾಡಿ ಕೊಡಗಿಗೆ ಪರಿಸರ ಪೂರಕವಾದ ಐಟಿ ಬಿಟಿ ಸಂಸ್ಥೆಗಳು ತಮ್ಮ ಉದ್ಯಮವನ್ನು ಆರಂಭಿಸುವುದು ಒಳಿತು ಎಂದರು. ಉತ್ತಮ ರಸ್ತೆಗಳು ನಿರ್ಮಾಣವಾದರೂ ಎರಡೂ ಬದಿಗಳಲ್ಲಿ ವೈಜ್ಞಾನಿಕ ಚರಂಡಿಗಳು ಇಲ್ಲದ್ದರಿಂದ ರಸ್ತೆ ಬೇಗ ಹಾಳಾಗುವುದರ ಬಗ್ಗೆ ಅವರು ವಿವರಿಸಿದರು.ಸುಶೀಮ ಅವರಿಂದ ಪ್ರಾರ್ಥನೆ , ಎಫ್ ಕೆ ಸಿ ಸಿ ಐ ಹಿರಿಯ ಉಪಾಧ್ಯಕ್ಷ ಸಾಯಿ ರಾಮ್ ಪ್ರಸಾದ್ ಅವರಿಂದ ವಂದನಾರ್ಪಣೆ ಹಾಗೂ ಕಾರ್ಯದರ್ಶಿ ಪ್ರಕಾಶ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.ಎಸ್ ಕೆ ಸಿ ಸಿ ಐ ನಿಕಟ ಪೂರ್ವ ಅಧ್ಯಕ್ಷ ಎಂ. ಜಿ. ಬಾಲಕೃಷ್ಣ,ನಿರ್ದೇಶಕ ಕೆ. ಬಿ. ಗಿರೀಶ್ ಗಣಪತಿ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ರಾಜ್ಯ ನಿರ್ದೇಶಕ ಹಿರೇಮಠ್ ಉಪಸ್ಥಿತರಿದ್ದರು. ಜಿಲ್ಲಾ ಚೇಂಬರ್ ವತಿಯಿಂದ ರಾಜ್ಯಾಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಸಾಯಿ ರಾಮ್ ಪ್ರಸಾದ್, ಹಿಂದಿನ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಇವರನ್ನು ಸನ್ಮಾನಿಸಲಾಯಿತು. ರಾಜ್ಯ ಸಂಸ್ಥೆ ವತಿಯಿಂದ ಶಾಸಕ ಮಂತರ್ ಗೌಡ ಅವರನ್ನು ಗೌರವಿಸಲಾಯಿತು. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಆರ್.ನಾಗೇಂದ್ರ ಪ್ರಸಾದ್ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಅಂಬೆಕಲ್ ನವೀನ್ ಗೌರವ ಸ್ವೀಕರಿಸಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು