ಬಾಲಕನ ಹತ್ಯೆಗೆ 15 ದಿನಗಳಿಂದ ತಯಾರಿ

KannadaprabhaNewsNetwork |  
Published : Sep 24, 2026, 04:00 AM IST
ಅಪರಾಧ  | Kannada Prabha

ಸಾರಾಂಶ

ತನ್ನ ಮಗನ ಬಗ್ಗೆ ವಿಚಾರಿಸಲು ಮೊಬೈಲ್‌ಗೆ ತಾಯಿ ಕರೆ ಮಾಡುತ್ತಿದ್ದಾಗಲೇ ಪ್ರಜ್ವಲ್‌ನನ್ನು ಹಂತಕರು ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡುತ್ತಿದ್ದರು ಎಂಬ ಹೃದಯಾವಿದ್ರಾಕ ಸಂಗತಿ ಚಿಕ್ಕಜಾಲ ಠಾಣೆ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಮಗನ ಬಗ್ಗೆ ವಿಚಾರಿಸಲು ಮೊಬೈಲ್‌ಗೆ ತಾಯಿ ಕರೆ ಮಾಡುತ್ತಿದ್ದಾಗಲೇ ಪ್ರಜ್ವಲ್‌ನನ್ನು ಹಂತಕರು ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡುತ್ತಿದ್ದರು ಎಂಬ ಹೃದಯಾವಿದ್ರಾಕ ಸಂಗತಿ ಚಿಕ್ಕಜಾಲ ಠಾಣೆ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಯಲಹಂಕ ಹತ್ತಿರದ ವಿನಾಯಕ ನಗರದ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮನೋಹರ್ ದಂಪತಿ ಪುತ್ರ ಪ್ರಜ್ವಲ್ (13) ಮೃತ ಬಾಲಕ. ಈ ಹತ್ಯೆ ಸಂಬಂಧ ಮೃತನ ನೆರೆಮನೆಯ ಸ್ನೇಹಿತ ಭಾಸ್ಕರ್ ರೆಡ್ಡಿ ಹಾಗೂ ಏಳುಕುಡಲವಾಡ ಬಂಧನವಾಗಿದೆ. ಈ ಪ್ರಕರಣದ ವಿಚಾರಣೆ ವೇಳೆ ಹತ್ಯೆ ಹಿಂದಿನ ಘಟನಾವಳಿಗಳು ಭಯಭೀತಿಗೊಳಿಸುವಂತೆ ತನಿಖೆಯಲ್ಲಿ ಬಯಲಾಗಿದೆ.

ಶ್ರೀಮಂತರ ಮಕ್ಕಳೇ ಟಾರ್ಗೆಟ್:

ಮೃತ ಪ್ರಜ್ವಲ್ ತಂದೆ ಮನೋಹರ್‌ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಸಮೀಪದ ಯಡಿಯೂರಿನವರು. 14 ವರ್ಷಗಳ ಹಿಂದೆ ಮಕ್ಕಳ ಶಿಕ್ಷಣ ಸಲುವಾಗಿ ಹುಟ್ಟೂರು ತೊರೆದು ಬಾಗಲೂರು ಹತ್ತಿರದ ವಿನಾಯಕ ನಗರಕ್ಕೆ ಪರಿವಾರ ಸಮೇತ ಬಂದು ಅವರು ನೆಲೆಸಿದರು. ಆಗ ಅವರ ಮನೆ ಪಕ್ಕದಲ್ಲೇ ಭಾಸ್ಕರ್ ರೆಡ್ಡಿ ಕುಟುಂಬ ನೆಲೆಸಿತ್ತು. ನೆರೆಹೊರೆಯಲ್ಲಿ ವಾಸವಾಗಿದ್ದರಿಂದ 2 ಕುಟುಂಬಗಳ ಮಧ್ಯೆ ಸ್ನೇಹ ವಿಶ್ವಾಸವಿತ್ತು. ಅಂದಿನಿಂದ ಮನೋಹರ್ ಆಪ್ತ ಒಡಿನಾಡಿಯಾಗಿ ಭಾಸ್ಕರ್ ತಂದೆ ತಿರುಮಾಲ ರೆಡ್ಡಿ ಇದ್ದರು. ಬಾಗಲೂರು ಹತ್ತಿರ 2 ಬಾರ್‌ಗಳನ್ನು ಬೋಗ್ಯಕ್ಕೆ ಪಡೆದು ಅವರು ನಡೆಸುತ್ತಿದ್ದು, ಇತ್ತೀಚಿಗೆ ಮದ್ಯ ಮಾರಾಟದ ವ್ಯವಹಾರದಲ್ಲಿ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು ಎನ್ನಲಾಗಿದೆ.

ವಿದೇಶದಲ್ಲಿ ಓದಿ ಮರಳಿದ್ದ ಭಾಸ್ಕರ್‌, ವಿಪರೀತ ಮದ್ಯ ವ್ಯಸನಿಯಾಗಿದ್ದ. ಶೋಕಿ ಜೀವನಕ್ಕೆ ಆತ ಬಿದ್ದಿದ್ದ. ತಾನು ನೆಲೆಸಿದ್ದ ಏರಿಯಾದ ಪುಟ್ಟ ಮಕ್ಕಳ ಜತೆ ಆತನಿಗೆ ಸ್ನೇಹವಿತ್ತು. ತನ್ನ ಮನೆ ಹತ್ತಿರ ವಾಸವಾಗಿದ್ದ ಏಳುಕೂಡಲವಾಡ ಜತೆ ಆತನಿಗೆ ಗೆಳೆಯನ ಬೆಳೆಯಿತು. ಕೆಲಸವಿಲ್ಲದೆ ಅಲೆಯುತ್ತಿದ್ದ ಈ ಇಬ್ಬರು, ಮದ್ಯ ಸೇವಿಸುತ್ತ ಅಂಡಲೆಯುತ್ತಿದ್ದರು. ತಮ್ಮ ಮೋಜು ಮಸ್ತಿಗೆ ಹಣ ಹೊಂದಿಸಲು ಶ್ರೀಮಂತರ ಮಕ್ಕಳ ಅಪಹರಿಸಲು ಆರೋಪಿಗಳು ಸಂಚು ರೂಪಿಸಿದ್ದರು.

ಏರಿಯಾದ ಮಕ್ಕಳಿಗೆ ಆತನೇ ‘ಬಾಸ್‌’:

ಮನೋಹರ್‌ರವರ ಇಬ್ಬರ ಮಕ್ಕಳ ಪೈಕಿ ಅವರ ಕಿರಿಯ ಪುತ್ರನ ಜತೆ ಭಾಸ್ಕರ್ ಆತ್ಮೀಯತೆ ಬೆಳೆಯಿತು. ಅಲ್ಲದೆ ವಿನಾಯಕ ನಗರದ ಪುಟ್ಟ ಮಕ್ಕಳನ್ನು ಭಾಸ್ಕರ್‌ನನ್ನು ‘ಬಾಸ್‌’ ಎಂದೇ ಕರೆಯುತ್ತಿದ್ದರು. ಈತನ ದುಷ್ಟಬುದ್ಧಿ ಅರಿಯದೆ ಆತನಿಗೆ ಆ ಪುಟ್ಟ ಮನಸ್ಸುಗಳಲ್ಲಿ ಸ್ನೇಹ ತುಂಬಿಕೊಂಡಿತ್ತು. ಮಕ್ಕಳಿಗೆ ಚಾಕೋಲೆಟ್‌, ಪಾನಿಪೂರಿ ಮಾತ್ರವಲ್ಲದೆ ತನ್ನ ಕಾರಿನಲ್ಲಿ ಜಾಲಿ ಡ್ರೈವ್ ಸಹ ಕರೆದೊಯ್ಯುತ್ತಿದ್ದ. ಅದೇ ರೀತಿ ಪ್ರಜ್ವಲ್‌ ಸಹ ಭಾಸ್ಕರ್‌ ಬಲೆಗೆ ಬಿದ್ದಿದ್ದ. ತನ್ನ ಕಾರನ್ನು ಓಡಿಸಲು ಕೂಡ ಆತನಿಗೆ ಭಾಸ್ಕರ್ ಕೊಡುತ್ತಿದ್ದ. ಹೀಗಾಗಿ ಆರೋಪಿ ಮೇಲೆ ಮೃತನಿಗೆ ಹೆಚ್ಚಿನ ವಿಶ್ವಾಸ ಮೂಡಿತ್ತು ಎಂದು ಮೂಲಗಳು ಹೇಳಿವೆ.

ಕೊಲೆಗೆ 15 ದಿನಗಳು ತಯಾರಿ ನಡೆಸಿದ್ರು:

ಹಣಕ್ಕಾಗಿ ಪ್ರಜ್ವಲ್‌ನನ್ನು ಅಪಹರಿಸಿ ಹತ್ಯೆಗೈಯ್ಯಲು 2 ವಾರಗಳ ಹಿಂದೆಯೇ ಸಂಚು ರೂಪಿಸಿ ಆರೋಪಿ ಹೊಂಚು ಹಾಕುತ್ತಿದ್ದರು. ಇನ್ನು ಏಳುಕೂಡಲವಾಡನ ತಂದೆ ಗಾರೆ ಕೆಲಸಗಾರ. ಬಾಗಲೂರು ಹತ್ತಿರದ ಖಾಲಿ ನಿವೇಶನಕ್ಕೆ ಕಾಂಪೌಂಡ್‌ ಹಾಗೂ 2 ಶೆಡ್‌ಗಳನ್ನು ಅವರು ನಿರ್ಮಿಸಿದ್ದರು. ಅಲ್ಲಿ ಕೆಲಸ ನಡೆಯುವಾಗ ಏಳುಕೂಡಲ ಸಹ ಹೋಗಿದ್ದ. ನಂತರ ಭೂ ವ್ಯಾಜ್ಯ ನಡೆದು ಆ ನಿವೇಶನದಲ್ಲಿ ಕಾಮಗಾರಿ ಸ್ಥಗಿತವಾಗಿತ್ತು. ಹಾಗಾಗಿ ಆ ನಿವೇಶನದ 2 ಶೆಡ್‌ಗಳಲ್ಲಿ ಒಂದಕ್ಕೆ ಬೀಗ ಹಾಕಿ ಏಳುಕೂಡಲ ಬಳಸುತ್ತಿದ್ದ. ಇಲ್ಲಿಯೇ ಭಾಸ್ಕರ್ ಜತೆ ಸೇರಿ ಆತ ಮದ್ಯದ ಪಾರ್ಟಿ ನಡೆಸುತ್ತಿದ್ದ. ಈ ನಿವೇಶನಕ್ಕೆ ಪ್ರಜ್ವಲ್‌ನನ್ನು ಅಪಹರಿಸಿ ಕರೆತಂದು ಹತ್ಯೆ ಮಾಡುವುದು ಆರೋಪಿಗಳು ಸಂಚಾಗಿತ್ತು. ಇದಕ್ಕಾಗಿಯೇ ಆ ಶೆಡ್‌ನಲ್ಲಿ ಹಾಸಿಗೆ ಸಹ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಪಟಾಕಿ ಖರೀದಿ ನೆಪದಲ್ಲಿ ಅಪಹರಣ:

ಪ್ರತಿ ವರ್ಷ ವಿನಾಯಕ ನಗರದಲ್ಲಿ ಗಣೇಶೋತ್ಸವನ್ನು ಆ ಏರಿಯಾದ ಮಕ್ಕಳ ಜತೆ ಸೇರಿ ಮನೋಹರ್ ಇಬ್ಬರು ಪುತ್ರರು ಆಯೋಜಿಸುತ್ತಿದ್ದರು. ಅಂತೆಯೇ ಈ ವರ್ಷವು ಹಬ್ಬದ ದಿನ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಬುಧವಾರ ವಿಸರ್ಜನೆ ಮಾಡಲು ಮಕ್ಕಳು ನಿರ್ಧರಿಸಿದ್ದರು. ಆ ಹಬ್ಬದ ದಿನವೇ ಪ್ರಜ್ವಲ್‌ನನ್ನು ಅಪಹರಿಸಿ ಹತ್ಯೆಗೆ ಭಾಸ್ಕರ್ ಯತ್ನಿಸಿದ್ದ. ಆದರೆ ಸೋಮವಾರ ರಾತ್ರಿ 9 ಗಂಟೆಗೆ ಪಟಾಕಿ ತರುವ ನೆಪದಲ್ಲಿ ಭಾಸ್ಕರ್‌ ಕರೆ ಮೇರೆಗೆ ಮನೆಯಿಂದ ಹೋಗಲು ಪ್ರಜ್ವಲ್‌ ಹೊರಟ್ಟಿದ್ದ. ಆಗ ಆತನಿಗೆ ತಾಯಿ ಬೈದು ಹೊರಗೆ ಹೋಗದಂತೆ ನಿರ್ಬಂಧಿಸಿದ್ದರು. ಇದಾದ ಮರುದಿನ ಸಹ ಮಗನಿಗೆ ತಾಯಿ ತಡೆ ಹಾಕಿದರು. ಪ್ರತಿದಿನದಂತೆ ಶಾಲೆಯಿಂದ ಸಂಜೆ 6 ಗಂಟೆಗೆ ಮರಳಿದ ಪ್ರಜ್ವಲ್‌ಗೆ ಪಟಾಕಿ ತರಲು ನಾನು ನೀನು ಏಳುಕೂಡಲ ಹೋಗೋಣ. ನಿಮ್ಮಮ್ಮನಿಗೆ ಹೇಳದಂತೆ ಪಕ್ಕದ ಬೀದಿಯಲ್ಲಿ ನಿಂತಿರುವ ಕಾರಿನೊಳಗೆ ಕುಳಿತುಕೋ ಎಂದು ಕಾರಿನ ಕೀ ಕೊಟ್ಟು ಭಾಸ್ಕರ್ ಕಳುಹಿಸಿದ್ದ. ಅಂತೆಯೇ ಕಾರಿಗೆ ಹೋಗಿ ಸಂಜೆ 6.45ರಲ್ಲಿ ಪ್ರಜ್ವಲ್ ಗುಪ್ತವಾಗಿ ತೆರಳಿ ಕಳಿತುಕೊಂಡಿದ್ದ.

ಗದ್ದಲದಲ್ಲಿ ಮಗನ ಮರೆತ ಪೋಷಕರು

ಗಣಪತಿ ವಿಸರ್ಜನಾ ಮೆರವಣಿಗೆ ಶುರುವಾದ ಬಳಿಕ ಪ್ರಜ್ವಲ್‌ ಕಡೆ ಪೋಷಕರು ಗಮನಹರಿಸಿಲ್ಲ. ಆ ಉತ್ಸವಕ್ಕೆ ಆತ ತೆರಳಿರಬಹುದು ಎಂದು ಅವರು ಭಾವಿಸಿದ್ದರು. ಅಲ್ಲದೆ ಕಳೆದ ಬಾರಿ ಗಣೇಶೋತ್ಸವದಲ್ಲಿ ಪಕ್ಕದ ಏರಿಯಾದ ಹುಡುಗರ ಜತೆ ಭಾಸ್ಕರ್ ಗಲಾಟೆ ಮಾಡಿಕೊಂಡಿದ್ದ. ಇದೇ ಜಿದ್ದಿನಿಂದ ಗಣಪತಿ ವಿಸರ್ಜನೆ ವೇಳೆ ಆ ಹುಡುಗರು ರಗಳೆ ಮಾಡಿದ್ದರು. ಆ ಗಲಾಟೆ ಇತ್ಯರ್ಥಪಡಿಸುವಲ್ಲಿ ಸ್ಥಳೀಯ ರಾಜಕೀಯ ನಾಯಕರಾಗಿದ್ದ ಮನೋಹರ್ ದಂಪತಿ ವ್ಯಸ್ತರಾಗಿದ್ದರು. ಹೀಗಾಗಿ ಮಗನ ಮೇಲೆ ಅವರಿಗೆ ಲಕ್ಷ್ಯ ಹರಿದಿಲ್ಲ. ಗಣಪತಿ ವಿಸರ್ಜನೆ ಮುಗಿದ ಬಳಿಕ ರಾತ್ರಿ 9.30 ಗಂಟೆಗೆ ಕಿರಿಯ ಪುತ್ರ ಕಾಣದೆ ಹೋದಾಗ ಅವರು ಹುಡುಕಾಡಿದ್ದಾರೆ. ಆಗ ಭಾಸ್ಕರ್ ಜತೆ ಪಟಾಕಿ ತರಲು ಕಾರಿನಲ್ಲಿ ಪ್ರಜ್ವಲ್‌ ಹೋಗಿದ್ದನ್ನು ನೋಡಿದ್ದಾಗಿ ಮೃತನ ತಾಯಿಗೆ ಸ್ಥಳೀಯ ನಿವಾಸಿ ಹೇಳಿದರು. ತಕ್ಷಣವೇ ಭಾಸ್ಕರ್‌ ಮೊಬೈಲ್‌ಗೆ ಮೃತನ ತಾಯಿ ಹಾಗೂ ಅಣ್ಣ ಕರೆ ಮಾಡಿದ್ದಾರೆ. ಅದೇ ವೇಳೆ ಬಾಗಲೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಅವರ ಪುತ್ರನ ಮೇಲೆ ಹಂತಕರ ಕ್ರೌರ್ಯದ ಅಟ್ಟಹಾಸ ನಡೆದಿತ್ತು. ಹತ್ಯೆ ಬಳಿಕ ಮೃತನ ತಾಯಿ ಕರೆಗಳಿಗೆ ಉತ್ತರಿಸಿದ್ದ. ತನಗೆ ಪ್ರಜ್ವಲ್ ಬಗ್ಗೆ ಗೊತ್ತಿಲ್ಲ ಎಂದಿದ್ದ.

....ಬಾಕ್ಸ್‌...

ಉಸಿರು ಚೆಲ್ಲುವಾಗ ‘ಅಮ್ಮ’ ಎಂದ ಬಾಲಕ

ಮನೆಯಿಂದ ಕಾರಿನಲ್ಲಿ ಬಾಗಲೂರು ಸಮೀಪದ ನಿರ್ಜನ ಪ್ರದೇಶಕ್ಕೆ ಪ್ರಜ್ವಲ್‌ನನ್ನು ಆರೋಪಿಗಳು ಕರೆದೊಯ್ದಿದ್ದಾರೆ. ಅಲ್ಲಿ ಬಾಲಕನಿಗೆ ಕಾರು ಓಡಿಸಲು ಭಾಸ್ಕರ್ ಕೊಟ್ಟಿದ್ದಾನೆ. ಇದರಿಂದ ತನ್ನ ಮೇಲೆ ಮುಂದೆ ನಡೆಯುವ ಭೀಕರ ಹಲ್ಲೆ ಬಗ್ಗೆ ಆತನಿಗೆ ಗಮನಕ್ಕೆ ಬಂದಿಲ್ಲ. ತಾನೇ ಕಾರು ಚಲಾಯಿಸಿಕೊಂಡು ಭಾಸ್ಕರ್ ಹೇಳಿದಂತೆ ನಿರ್ಜನ ನಿವೇಶನಕ್ಕೆ ಹೋಗಿದ್ದಾನೆ. ಕಾರಿನಿಂದಿಳಿದ ಕೂಡಲೇ ಬಾಲಕನ ಮೇಲೆ ಏಕಾಏಕಿ ದೊಣ್ಣೆಯಿಂದ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಹೊಡೆತಕ್ಕೆ ಆತ ಕುಸಿದು ಬಿದ್ದಿದ್ದಾನೆ. ಅಲ್ಲಿಂದ 80 ಅಡಿಯಷ್ಟು ದೂರ ಆತನನ್ನು ಎಳೆದೊಯ್ದು ಹಳೇ ಗುಂಡಿಗೆ ಎಸೆದಿದ್ದಾರೆ. ಆಗ ‘ಅಮ್ಮ’ ಎಂದು ಪ್ರಜ್ವಲ್‌ ನರಳಿದಾಗ ಆತನ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಹಂತಕರು ಜಜ್ಜಿದ್ದಾರೆ. ಅದೇ ಗುಂಡಿಯಲ್ಲಿ ಮೃತದೇಹವನ್ನು ಮುಚ್ಚಲು ಯತ್ನಿಸಿ ವಿಫಲರಾಗಿದ್ದಾರೆ. ಆಗ 7 ಅಡಿ ಕಾಂಪೌಂಡ್ ನಿಂದ ಕೆಳಕ್ಕೆ ಮೃತದೇಹವನ್ನು ಎಸೆದು ಬಳಿಕ ಹಾಸಿಗೆಯಲ್ಲಿ ಸುತ್ತಿಕೊಂಡು ಆಂಧ್ರಪ್ರದೇಶದಲ್ಲಿ ಬಿಸಾಡಲು ಕಾರಿನಲ್ಲಿ ಆರೋಪಿಗಳು ಹೊರಟಿದ್ದರು. ಆಗ ಆತಂಕದಿಂದ ಅತಿವೇಗದಲ್ಲಿ ಓಡಿಸುವಾಗ ಮಾರ್ಗ ಮಧ್ಯೆ ಹಂಪ್ಸ್‌ನಲ್ಲಿ ಕಾರು ಜಿಗಿದಿದೆ. ಆ ವೇಳೆ ರಸ್ತೆ ಬದಿ ನಿಂತಿದ್ದ ಎರಡ್ಮೂರು ಕಾರುಗಳಿಗೆ ತನ್ನ ಕಾರನ್ನು ಭಾಸ್ಕರ್ ಗುದ್ದಿಸಿ ಸರಣಿ ಅಪಘಾತ ಮಾಡಿದ್ದಾನೆ. ಇದರಿಂದ ಕೆರಳಿದ ಸ್ಥಳೀಯರು, ಭಾಸ್ಕರ್‌ನನ್ನು ಹಿಡಿದು ಬಡೆದಿದ್ದಾರೆ. ಆ ವೇಳೆ ಕಾರಿನಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಬಾಲಕನ ಮೃತದೇಹ ಪತ್ತೆಯಾಗಿದೆ.

...ಬಾಕ್ಸ್‌.....

ತಮ್ಮ ಸಿಗದೆ ಹೋಗಿದ್ದರೆ

ಅಣ್ಣನ ಕಿಡ್ನಾಪ್‌ಗೆ ಪ್ಲಾನ್‌

ಮನೋಹರ್ ಅವರ ಇಬ್ಬರು ಪುತ್ರರು ಹಂತಕರ ಗುರಿಯಾಗಿದ್ದರು. ಆದರೆ ಪಟಾಕಿ, ಕಾರಿನಲ್ಲಿ ಸುತ್ತಾಟದ ಆಮಿಷಗಳಿಗೆ ಹಿರಿಯ ಪುತ್ರ ಬಲಿಯಾಗುವುದು ಕಡಿಮೆ ಎಂದು ಭಾವಿಸಿ ಪ್ರಜ್ವಲ್‌ಗೆ ಭಾಸ್ಕರ್ ಗಾಳ ಹಾಕಿದ್ದ ಎಂದು ಗೊತ್ತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ದಾಖಲೆ ಸೃಷ್ಟಿಸಿ ಕಾರು ಮಾರ್ತಿದ್ದ ಗ್ಯಾಂಗ್‌ನ ಬಂಧನ
ಶಿಕ್ಷಣ ನೀತಿ ಬದಲಾಗದೆ ದೇಶಬದಲಾಗದು: ಡಾ. ಬಿಳಿಮಲೆ