ಕನ್ನಡಪ್ರಭ ವಾರ್ತೆ ಹನೂರು
ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೆ ಸಕಲ ಸಿದ್ಧತೆಗಳು ಬರದಿಂದ ಸಾಗಿದೆ. ಸಭೆ ಮುಗಿದ ನಂತರ ಪೂರ್ಣಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಧಾಪನೆ ನೆರವೇರಿಸಲಿದ್ದಾರೆ.ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲೆಮಾದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಏ.24ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುವುದರಿಂದ ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಿವಿಧ ಕಡೆ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ಕ್ಯಾಬಿನೆಟ್ ಸಭೆಗೆ ಸಕಲ ಸಿದ್ಧತೆ:ಮಲೆಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಜ್ರಮಲೆ 367 ಕೊಠಡಿಗಳ ಮುಂಭಾಗದ ಸ್ಥಳದಲ್ಲಿ ಕ್ಯಾಬಿನೆಟ್ ಸಭೆ ನಡೆಸಲು ಸಕಲ ಸಿದ್ಧತೆಗಳೊಂದಿಗೆ ಭರದಿಂದ ಸಾಗಿದೆ. ಏ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕ್ಯಾಬಿನೆಟ್ ದರ್ಜೆಯ ಸಚಿವರು ಹಾಗೂ ಶಾಸಕರು ಹಿರಿಯ ಅಧಿಕಾರಿಗಳು ಆಗಮಿಸುವುದರಿಂದ ಭಾರಿ ಭದ್ರತೆಯೊಂದಿಗೆ ಸಕಲ ಸಿದ್ಧತೆಗಳು ಜರುಗಿದೆ.
ಕೊಠಡಿಗಳಿಗೆ ಉದ್ಘಾಟನೆ ಭಾಗ್ಯ;ಮಲೆಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ 69 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಜ್ರಮಲೆ ಭವನ ಉದ್ಘಾಟನೆಗೆ ಸಕಲ ರೀತಿಯಲ್ಲಿಯೂ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಕಾದಿದೆ. ಜೊತೆಗೆ ದೊಡ್ಡಕೆರೆ ತೆಪ್ಪೋತ್ಸವ ಕಲ್ಯಾಣಿ 6.90 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ದೀಪದಗಿರಿ ಒಡ್ಡಿನಲ್ಲಿರುವ 108 ಅಡಿ ಎತ್ತರದ ಬೃಹತ್ ಮಾದಪ್ಪನ ಪ್ರತಿಮೆಯ ತಳ ಭಾಗದಲ್ಲಿ 20 ಕೋಟಿ ರುಪಾಯಿ ವೆಚ್ಚದಲ್ಲಿ ಮಲೆಮಾದೇಶ್ವರ ಚರಿತ್ರೆಯನ್ನು ಒಳಗೊಂಡ 20 ಸಂಗತಿಯ ಚರಿತ್ರೆಯನ್ನು ಸಾರುವ ಮಲೆಮಹದೇಶ್ವರರು ಬಾಲ್ಯದಿಂದ ಹಾಗೂ ಅವರ ಪವಾಡಗಳ ಶಿವಲೀಲೆಗಳ ಜೊತೆಗೆ ಕಾರಯ್ಯ ಬಿಲ್ಲಯ್ಯ ಜೊತೆ ಸಂಬಂಧ, ಸಂಕಮ್ಮ ಮನಃಪರಿವರ್ತನೆ, 77 ಮಲೆಗಳ ಪ್ರವಾಸ, ಸರ್ಪದ ಹಾದಿ, ಬಸವನ ಹಾದಿ ಇತಿಹಾಸ ನಾಗಮಲೆಯಲ್ಲಿ ಪಾವಡ ಸೃಷ್ಟಿ, ಜಡೆಕಲ್ಲು ಮಂಟಪದ ಸಮಗ್ರ ಮಾಹಿತಿ, ನಡುಮಲೆಯಲ್ಲಿ ಐಕ್ಯವಾಗಿದ್ದು, ಆಲಂಬಾಡಿ ಜುಂಜೇಗೌಡರ ಹಸು ಮೇಯಿಸುವಾಗ ನಡೆಯುವ ಪಾವಡ, ಮಾದಪ್ಪನ ಪವಾಡಗಳು ಸೇರಿದಂತೆ ವರ್ಷದಲ್ಲಿ ನಡೆಯುವ ಹಬ್ಬ ಹರಿದಿನಗಳ ವಿಶೇಷ ದಿನಗಳ ಸಂಪೂರ್ಣ ಮಾಹಿತಿ ಸಹ ಮ್ಯೂಸಿಯಂನಲ್ಲಿ ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದೆ.
27.10 ಕೋಟಿ ವೆಚ್ಚದಲ್ಲಿ ಮಲೆ ಮಾದೇಶ್ವರ ಬೆಟ್ಟದಲ್ಲಿ ಸಮಗ್ರ ಒಳಚರಂಡಿ ಯೋಜನೆ, ಪೂರ್ಣಗೊಂಡಿದೆ. ನಾಗಮಲೆಗೆ ತೆರಳುವ ಮಾರ್ಗಮಧ್ಯದಲ್ಲಿ ಸಿಗುವ ಹೆಲಿಪ್ಯಾಡ್ ಬಳಿ 8.51 ಕೋಟಿ ವೆಚ್ಚದಲ್ಲಿ ಒಂದು ಮೆಗಾವ್ಯಾಟ್ ಸೋಲಾರ್ ಪ್ಲಾಂಟ್ ನಿರ್ಮಾಣಗೊಂಡಿದೆ. ಇದರಿಂದಾಗಿ ವಿದ್ಯುತ್ ಸಮಸ್ಯೆ ನಿಗಲಿದೆ. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೂ ವಿದ್ಯುತ್ ಬಿಲ್ 25 ಲಕ್ಷ ಪ್ರತಿ ತಿಂಗಳು ಉಳಿಯಲಿದೆ. ಜೊತೆಗೆ ಹಬ್ಬ ವಿಶೇಷ ಹರಿದಿನಗಳಲ್ಲೂ ಸಹ ವಿದ್ಯುತ್ ಸಮಸ್ಯೆ ಸಹ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಸಾಲೂರು ಮಠದ ಆವರಣದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವೇದ ಆಗಮ ಪಾಠಶಾಲೆ ಕಟ್ಟಡವನ್ನು 1.79 ಕೋಟಿ ವೆಚ್ಚದಲ್ಲಿ ಗುರುಕುಲ ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ.ಶಂಕುಸ್ಥಾಪನೆ ಸಿದ್ಧತೆ:
ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಲೆ ಮಹದೇಶ್ವರನ ಸನ್ನಿಧಿಗೆ ಬರುವಂತ ಭಕ್ತಾದಿಗಳಿಗೆ ಸಕಲ ಸೌಕರ್ಯ ನೀಡುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ 45 ಕೋಟಿ ರೂಪಾಯಿ ವೆಚ್ಚದಲ್ಲಿ ಏಕಕಾಲದಲ್ಲಿ 4000 ಭಕ್ತರು ಕುಳಿತುಕೊಳ್ಳವಂತಹ ದಾಸೋಹ ಭವನ ನಿರ್ಮಾಣಕ್ಕಾಗಿ ಶಂಕುಸ್ಥಾಪನೆಗೆ ಹಾಗೂ ಮಲೆ ಮಹದೇಶ್ವರ ಬೆಟ್ಟದ ಮುಖ್ಯದ್ವಾರ ಗೇಟ್ ಬಳಿ 9 ಕೋಟಿ ವೆಚ್ಚದಲ್ಲಿ ಬೃಹತ್ ಕಮಾನು ನಿರ್ಮಾಣ, ಮೂರು ಕೋಟಿ ವೆಚ್ಚದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಹಾಗೂ ಪುರತತ್ವ ಇಲಾಖೆ ವತಿಯಿಂದ ಆಲಂಬಾಡಿ ರಂಗಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ಜೊತೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಮಲೆಮಾದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕ ಎಂ.ಆರ್.ಮಂಜುನಾಥ್, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಮಾದಪ್ಪನ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಕೊರತೆಯಾಗದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.ಎ ಇ ರಘು, ಕಾರ್ಯದರ್ಶಿ, ಮಲೆಮಾದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಹದೇಶ್ವರ ಬೆಟ್ಟ