ಕನ್ನಡಪ್ರಭ ವಾರ್ತೆ ಕುಶಾಲನಗರ
ಕಳೆದ ವಾರ ಕುಶಾಲನಗರ ಪುರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದೇ ಇರುವ ಬಗ್ಗೆ ಪುರಸಭಾ ಸದಸ್ಯರು ಒಳಚರಂಡಿ ಮಂಡಳಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಯೋಜನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ನಿರ್ಣಯ ಕೈಗೊಂಡಿದ್ದರು.
ಪುರಸಭೆ ಅಧಿಕಾರಿಗಳು, ಆಡಳಿತ ಮಂಡಳಿ ಆಗ್ರಹದ ಮೇರೆಗೆ ಜಿಲ್ಲಾಧಿಕಾರಿ ವೆಂಕಟರಾಜ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ ಅವರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.ಹಾಗೆಯೇ ಸ್ಥಳದಲ್ಲಿದ್ದ ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನಕುಮಾರ್ ಅವರಲ್ಲಿ ಯುಜಿಡಿ ಕಾಮಗಾರಿ ಬಗ್ಗೆ ಸಂಪೂರ್ಣ ಸಾಧಕ ಬಾಧಕಗಳ ಮಾಹಿತಿ ಪಡೆದುಕೊಂಡರು.
ಈ ಸಂಬಂಧ ಸ್ಥಳೀಯ ಪುರಸಭೆಗೆ 12.4 ಲಕ್ಷ ರು. ಗಳ ನಿರ್ವಹಣಾ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ಇದುವರೆಗೆ ಪುರಸಭೆ ಪಾವತಿಸಿಲ್ಲ. ಪುರಸಭೆ ಆಡಳಿತ ಮಂಡಳಿ ಈ ಬಗ್ಗೆ ನಿರ್ವಹಣಾ ವೆಚ್ಚವನ್ನು ಜಲಮಂಡಳಿಗೆ ಪಾವತಿಸಿದ ತಕ್ಷಣ ಇದನ್ನು ಜನರ ಬಳಕೆಗೆ ಒದಗಿಸಲಾಗುತ್ತದೆ ಎಂದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಪುರಸಭೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸಾರ್ವಜನಿಕರಿಗೆ ಶೀಘ್ರದಲ್ಲಿ ಬಳಕೆಗೆ ಸಿಗುವಂತಹ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದರು.ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಮತ್ತಿತರ ಅಧಿಕಾರಿಗಳು ಇದ್ದರು.