ಮಾಲೇಕಲ್ ಅಮರಗಿರಿ ತಿರುಪತಿ ಜಾತ್ರೆಗೆ ಸಿದ್ಧತೆ

KannadaprabhaNewsNetwork |  
Published : Jul 13, 2026, 12:15 AM IST
ಚಿತ್ರ ಶೀರ್ಷಿಕೆಗಳುಮಾಲೇಕಲ್ ಅಮರಗಿರಿ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಉತ್ಸವಮೂರ್ತಿ.ಬೆಟ್ಟದ ತಪ್ಪಲಿನ ಶ್ರೀ ಗೋವಿಂದರಾಜಸ್ವಾಮಿ ದೇವಾಲಯದಲ್ಲಿ ಶಯನಾವಸ್ಥೆಯಲ್ಲಿ ಭಕ್ತರಿಗೆ ದರ್ಶನ ನೀಡುತ್ತಿರುವ ಸಂಪೂರ್ಣ ಸಾಲಿಗ್ರಾಮ ಶಿಲೆಯ ಶ್ರೀ ಗೋವಿಂದರಾಜಸ್ವಾಮಿ. | Kannada Prabha

ಸಾರಾಂಶ

ಮಾಲೇಕಲ್ ಅಮರಗಿರಿ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವವು ಜುಲೈ 19ರಿಂದ ಆಗಸ್ಟ್ 4ರವರೆಗೆ ನಡೆಯಲಿದ್ದು, ಜುಲೈ 26ರಂದು ಭಾನುವಾರ ಮಧ್ಯಾಹ್ನ ಸಂಪ್ರದಾಯಬದ್ಧವಾಗಿ ಮಹಾರಥೋತ್ಸವ ನೆರವೇರಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಜಾತ್ರೆಯ ಸಕಲ ಸಿದ್ಧತೆಗಳು ಅಂತಿಮ ಹಂತ ತಲುಪಿವೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಾಲೇಕಲ್ ಅಮರಗಿರಿ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವವು ಜುಲೈ 19ರಿಂದ ಆಗಸ್ಟ್ 4ರವರೆಗೆ ನಡೆಯಲಿದ್ದು, ಜುಲೈ 26ರಂದು ಭಾನುವಾರ ಮಧ್ಯಾಹ್ನ ಸಂಪ್ರದಾಯಬದ್ಧವಾಗಿ ಮಹಾರಥೋತ್ಸವ ನೆರವೇರಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಜಾತ್ರೆಯ ಸಕಲ ಸಿದ್ಧತೆಗಳು ಅಂತಿಮ ಹಂತ ತಲುಪಿವೆ.ಜಾತ್ರಾ ಅವಧಿಯಲ್ಲಿ ಪ್ರತಿದಿನ ವಿಶೇಷ ಪೂಜೆ, ಹೋಮಹವನ, ವೇದಘೋಷ, ಉತ್ಸವ ಮೂರ್ತಿಗಳ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ನಡೆಯಲಿವೆ. ದೇವಾಲಯ ಹಾಗೂ ಆವರಣದಲ್ಲಿ ಸುಣ್ಣ-ಬಣ್ಣ, ಸ್ವಚ್ಛತೆ, ವಿದ್ಯುತ್ ದೀಪಾಲಂಕಾರ ಸೇರಿದಂತೆ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯವನ್ನು ಮುಜರಾಯಿ ಇಲಾಖೆ ಮತ್ತು ದೇವಾಲಯ ಆಡಳಿತ ಕೈಗೊಂಡಿದೆ. ಬೆಟ್ಟದ ಮೇಲಿನ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ಹಾಗೂ ತಪ್ಪಲಿನ ಶ್ರೀ ಗೋವಿಂದರಾಜಸ್ವಾಮಿ ದೇವಾಲಯಗಳು ವರ್ಣರಂಜಿತ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಸಂಜೆ ನಡೆಯುವ ಉತ್ಸವಗಳಲ್ಲಿ ನೂರಾರು ಭಕ್ತರು ಭಕ್ತಿಭಾವದಿಂದ ಪಾಲ್ಗೊಳ್ಳುತ್ತಿದ್ದಾರೆ. ಚಿನ್ನಾಭರಣ ಹಾಗೂ ವೈವಿಧ್ಯಮಯ ಪುಷ್ಪಾಲಂಕಾರಗಳಿಂದ ಸ್ವಾಮಿಗೆ ವಿಶೇಷ ಶೃಂಗಾರ ಮಾಡಲಾಗುತ್ತಿದ್ದು, ಕ್ಷೇತ್ರವು ಧರೆಯ ಮೇಲಿನ ವೈಕುಂಠದಂತೆಯೇ ಭಕ್ತರ ಕಣ್ಮನ ಸೆಳೆಯುತ್ತಿದೆ.ಮಹಾರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಪುಷ್ಕರಣಿಯನ್ನು ಸ್ವಚ್ಛಗೊಳಿಸಿ ನೀರು ತುಂಬಿಸಲಾಗಿದ್ದು, ಶ್ರೀಸ್ವಾಮಿಯ ಕಲ್ಯಾಣೋತ್ಸವ ಹಾಗೂ ಪೌರಾಣಿಕ ಪ್ರಸಂಗಗಳನ್ನು ಬಿಂಬಿಸುವ ಮೂರ್ತಿಗಳ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ. ಇದರಿಂದ ಜಾತ್ರೆಯ ವೈಭವ ಮತ್ತಷ್ಟು ಹೆಚ್ಚಲಿದೆ.800 ವರ್ಷಗಳ ಇತಿಹಾಸ ಹೊಂದಿದ ಕ್ಷೇತ್ರ:ಮಾಲೇಕಲ್ ಅಮರಗಿರಿ ತಿರುಪತಿ ಕ್ಷೇತ್ರವು ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗುತ್ತದೆ. ಬೆಟ್ಟದ ಮೇಲಿನ ದೇವಾಲಯ ತಲುಪಲು 1,280 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ವಸಿಷ್ಠ ಮಹರ್ಷಿಗಳು ಇಲ್ಲಿ ಶ್ರೀ ವೆಂಕಟರಮಣಸ್ವಾಮಿ ಹಾಗೂ ಪದ್ಮಾವತಿ ದೇವಿಯನ್ನು ಪ್ರತಿಷ್ಠಾಪಿಸಿದ್ದರು ಎಂಬ ನಂಬಿಕೆಯಿದೆ. ನಂತರ ಚಿತ್ರದುರ್ಗದ ಪಾಳೇಗಾರ ತಿಮ್ಮಪ್ಪ ನಾಯಕ ದೇವಾಲಯ ನಿರ್ಮಾಣಕ್ಕೆ ಕೊಡುಗೆ ನೀಡಿದ್ದು, ಬೆಟ್ಟಕ್ಕೆ ಮಾಲೆಯಾಕಾರದ ಮೆಟ್ಟಿಲುಗಳನ್ನು ನಿರ್ಮಿಸಿದ ಕಾರಣ ಈ ಕ್ಷೇತ್ರಕ್ಕೆ ಮಾಲೇಕಲ್ ತಿರುಪತಿ ಎಂಬ ಹೆಸರು ಬಂದಿತೆಂದು ಸ್ಥಳೀಯ ಇತಿಹಾಸ ತಿಳಿಸುತ್ತದೆ.ಬೆಟ್ಟದ ತಪ್ಪಲಿನ ಕೆರೆ ನಿರ್ಮಾಣದ ವೇಳೆ ದೊರೆತ ಸಂಪೂರ್ಣ ಸಾಲಿಗ್ರಾಮ ಶಿಲೆಯ ಶ್ರೀ ಗೋವಿಂದರಾಜಸ್ವಾಮಿ ವಿಗ್ರಹವನ್ನು ಅಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ದೇವಾಲಯದ ಸುತ್ತಮುತ್ತ ಕೆಂಚರಾಯಸ್ವಾಮಿ, ಸೂರ್ಯನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಾಲಯಗಳೂ ಭಕ್ತರ ಆಕರ್ಷಣೆಯಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

​ಜಗಳೂರು ತಾಲೂಕಿನ ೨೪ ಕೆರೆಗಳಿಗೆ ಹರಿದ ತುಂಗಭದ್ರೆ
ಜೋಗ ಜಲಪಾತ ವೀಕ್ಷಣೆಗೆ ಮುಗಿಬಿದ್ದ ಜನ