ಮಾರುತಿ ಶಿಡ್ಲಾಪೂರಹಾನಗಲ್ಲ: ಹೊಸ ಶೈಕ್ಷಣಿಕ ವರ್ಷಕ್ಕೆ 45 ಸಾವಿರ ಮಕ್ಕಳನ್ನು ಸ್ವಾಗತಿಸಲು ತಾಲೂಕಿನ 336 ಶಾಲೆಗಳು ಸನ್ನದ್ಧವಾಗಿದ್ದು, 1082 ಶಿಕ್ಷಕರು ಶಾಲಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಲ್ಲದೆ, ಮೇ 30ಕ್ಕೆ ಶಾಲೆಗಳು ಆರಂಭವಾಗುವವು.ರಾಜ್ಯದ ಅತಿ ದೊಡ್ಡ ತಾಲೂಕಿನಲ್ಲೊಂದಾದ ಹಾನಗಲ್ಲ ತಾಲೂಕಿನಲ್ಲಿ 1ರಿಂದ 10ನೇ ತರಗತಿಯವರೆಗೆ 45 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1212 ಮಂಜೂರಾದ ಶಿಕ್ಷಕರ ಹುದ್ದೆಗಳಿದ್ದು, ಕೇವಲ 880 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಸರ್ಕಾರಿ ಪ್ರೌಢಶಾಲೆಗಳಲ್ಲಿ 258 ಮಂಜೂರಾದ ಶಿಕ್ಷಕರ ಹುದ್ದೆಗಳಿವೆ. 202 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
35 ಕೊಠಡಿಗಳನ್ನು ದುರಸ್ತಿ ಮಾಡಲಾಗಿದೆಯಾದರೂ 85 ಶಿಥಿಲಗೊಂಡ ಕೊಠಡಿಗಳನ್ನು ನೆಲಸಮ ಮಾಡಬೇಕಾದ ಅನಿವಾರ್ಯತೆ ಇಲಾಖೆಗೆ ಇದೆ. ಶಾಲೆಗಳಿಗೆ ಭೌತಿಕವಾಗಿ ಕೊಠಡಿಗಳು, ವಿವಿಧ ಕಲಿಕಾ ಸಾಧನಗಳು ಅಗತ್ಯವಿದೆ. ಈ ನಡುವೆ ಓಸಿಯಾಟ್ ಕಂಪನಿ ನೂತನ 16 ಕೊಠಡಿಗಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನಿರ್ಮಿಸಿ ಕೊಟ್ಟಿದೆ. ಅದರಂತೆ ಹುಬ್ಬಳ್ಳಿಯ ರೌಂಡ್‌ಟೇಬಲ್ ಇಂಡಿಯಾ ಸಂಸ್ಥೆ ಕೂಡ 4 ಕೊಠಡಿಗಳನ್ನು ನಿರ್ಮಿಸಿದೆ. ಪಠ್ಯಪುಸ್ತಕ: ಈಗಾಗಲೇ ತಾಲೂಕಿನ 45 ಸಾವಿರ ಮಕ್ಕಳಿಗೆ ಬೇಕಾಗುವ ಪಠ್ಯಗಳು ಶೇ. 80ರಷ್ಟು ಪೂರೈಕೆಯಾಗಿವೆ. ಒಂದು ವಾರದಲ್ಲಿ ಉಳಿದ ಶೇ. 20ರಷ್ಟು ಪಠ್ಯಪುಸ್ತಕಗಳು ಬರುವ ನಿರೀಕ್ಷೆ ಇದೆ. ಎಲ್ಲ ಶಾಲೆಗಳಿಗೆ ಈಗಾಗಲೇ ಪುಸ್ತಕ ವಿತರಣೆ ನಡೆದಿದ್ದು, ಮೇ 30ರಂದು ಮಕ್ಕಳಿಗೆ ಪುಸ್ತಕ ವಿತರಣೆ ನಡೆಯಲಿದೆ.ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಜಿಲ್ಲೆಗೆ ತೃತೀಯ ಸ್ಥಾನದಲ್ಲಿದೆಯಾದರೂ ಕಳೆದ ವರ್ಷಕ್ಕಿಂತ ಶೇ. 9ರಷ್ಟು ಕಡಿಮೆಯಾಗಿದೆ. ರಾಜ್ಯದ ಫಲಿತಾಂಶಕ್ಕೆ ಹೋಲಿಸಿದರೆ ಫಲಿತಾಂಶ ಸಮಾಧಾನಕರವಾಗಿದೆ. ಬರುವ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಈಗಾಲೆ ಯೋಜನೆ ರೂಪಿಸಲಾಗಿದ್ದು, ಶಾಲಾರಂಭದಿಂದಲೇ ಕಾರ್ಯಗತವಾಗಲಿದೆ.ಹೊಸ ವರ್ಷದ ಶಾಲಾರಂಭಕ್ಕಾಗಿ ತಾಲೂಕಿನ ಎಲ್ಲ ಶಾಲೆಗಳ ಶಿಕ್ಷಕರು ಸಾಂಸ್ಕೃತಿಕ ವೈಭವದೊಂಧಿಗೆ ಮಕ್ಕಳನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಂಭ್ರಮದ ಶಾಲಾರಂಭ ಮಕ್ಕಳಿಗೆ ಹೊಸ ಉತ್ಸಾಹ ನೀಡುವ ಹಾಗೂ ಉತ್ತಮ ಶೈಕ್ಷಣಿಕ ಭರವಸೆ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.ಅಗತ್ಯ ಸಿದ್ಧತೆ: ಹೊಸ ವರ್ಷದ ಶಾಲಾರಂಭಕ್ಕೆ ಪಠ್ಯಪುಸ್ತಕಗಳ ವಿತರಣೆಯೂ ಸೇರಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲದಕ್ಕೂ ಮುಖ್ಯವಾಗಿ ಈ ಬಾರಿ ಎಸ್‌ಎಲ್‌ಸಿ ಫಲಿತಾಂಶವನ್ನು ಅತ್ಯುತ್ತಮಗೊಳಿಸಲು ಯೋಜನೆ ರೂಪಿಸಲಾಗಿದ್ದು, ಪ್ರತಿ ಪಾಠದ ನಂತರ ಪರೀಕ್ಷೆ, ಹಳೆಯ ಪ್ರಶ್ನೆ ಪತ್ರಿಕೆ ಬಿಡಿಸುವುದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ವರ್ಗಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅತಿಥಿ ಶಿಕ್ಷಕರ ಆದೇಶವೂ ಇಲಾಖೆಯಿಂದ ಆಗಿದ್ದು, ಶಾಲಾರಂಭದಿಂದಲೇ ಅತಿಥಿ ಶಿಕ್ಷಕರನ್ನು ಒದಗಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.