ನಾಳೆಯ ಮಾನವ ಸರಪಳಿ ಕಾರ್ಯಕ್ರಮದ ಸಿದ್ಧತೆ ಪೂರ್ಣ: ಡಿಸಿ

KannadaprabhaNewsNetwork |  
Published : Sep 14, 2024, 01:54 AM IST
4564 | Kannada Prabha

ಸಾರಾಂಶ

ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ಇತರರು ಸೇರಿದಂತೆ ಒಟ್ಟಾರೆ 79500 ಜನರು ಪಾಲ್ಗೊಳ್ಳಲಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳ ಸಂಖ್ಯೆ 54 ಸಾವಿರ ಇದೆ.

ಧಾರವಾಡ:

ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಧಾರವಾಡದಲ್ಲಿ ಸೆ. 15ರಂದು ತೇಗೂರಿನಿಂದ ಮಾವಿನಕೊಪ್ಪದ ವರೆಗೆ 51 ಕಿಮೀ ಉದ್ದ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಈ ಕಾರ್ಯಕ್ರಮದ ಸಿದ್ಧತೆ ಪೂರ್ಣಗೊಂಡಿರುವ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ಇತರರು ಸೇರಿದಂತೆ ಒಟ್ಟಾರೆ 79500 ಜನರು ಪಾಲ್ಗೊಳ್ಳಲಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳ ಸಂಖ್ಯೆ 54 ಸಾವಿರ ಇದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಸರ್ಕಾರದಿಂದ ಪ್ರಮಾಣ ಪತ್ರ ನೀಡಲಾಗುತ್ತಿದೆ. ಮಾನವ ಸರಪಳಿಯ ಸಮೀಪದ ಶಾಲಾ-ಕಾಲೇಜುಗಳ ಮಕ್ಕಳಿಗೆ ಅನುಕೂಲವಾಗುವಂತೆ ಜಾಗವನ್ನು ನಿಗದಿ ಮಾಡಿ ಆ ಸ್ಥಳಕ್ಕೆ ಬರಲು ಸೂಚಿಸಲಾಗಿದ್ದು, ಪ್ರತಿ 100 ಮೀಟರ್‌ಗೆ ಒಬ್ಬ ಅಧಿಕಾರಿಗಳು ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಬೆಳಗ್ಗೆ 9.30ಕ್ಕೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. 9.45ಕ್ಕೆ ಅವರ ಭಾಷಣ ನಡೆಯಲಿದ್ದು ನಂತರ ಮಾನವ ಸರಪಳಿ ನಿರ್ಮಾಣ ಹಾಗೂ ಸರಪಳಿಯಲ್ಲಿ ಪಾಲ್ಗೊಂಡವರಿಂದ ಸಂವಿಧಾನ ಪೀಠಿಕೆ ಓದಿಸಲಾಗುವುದು. 10.15ಕ್ಕೆ ಸಾಮಾಜಿಕ ಅರಣ್ಯ ಇಲಾಖೆಯಿಂದ ವಿವಿಧೆಡೆ ನಾಲ್ಕು ಸಾವಿರ ಸಸಿ ನೆಡೆಸುವ ಕಾರ್ಯಕ್ರಮ ಸಹ ಇರಲಿದೆ. ಸರಪಳಿಯಲ್ಲಿ ಪಾಲ್ಗೊಂಡವರಿಗೆ ಇಸ್ಕಾನ್‌ ಹಾಗೂ ಸಿದ್ಧಾರೂಢ ಮಠದಿಂದ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದ ಜಿಲ್ಲಾಧಿಕಾರಿ, ರಾಜ್ಯಮಟ್ಟದಲ್ಲಿ 100 ಮೀಟರ್‌ ಉದ್ಧದ ರಾಷ್ಟ್ರಧ್ವಜ ಪ್ರದರ್ಶನ ಮಾಡಲಿದ್ದು, ಧಾರವಾಡ ಜಿಲ್ಲೆಯಲ್ಲಿ ಕರ್ನಾಟಕ ಕಾಲೇಜುನಿಂದ 100 ಮೀಟರ್‌ ಉದ್ಧದ ಕರ್ನಾಟಕ ಧ್ವಜ ಪ್ರದರ್ಶನದ ಯೋಜನೆ ರೂಪಿಸಲಾಗಿದೆ ಎಂದರು. ಮಳೆಯಿಂದ ರಸ್ತೆಗಳು ಹದಗೆಟ್ಟಿದ್ದು ದುರಸ್ತಿಗೆ ₹ 5 ಕೋಟಿ ಅನುದಾನದ ಬೇಡಿಕೆ ಇಟ್ಟಿದ್ದು, ಈ ಪೈಕಿ ₹ 1.5 ಕೋಟಿ ಬಿಡುಗಡೆಯಾಗಿದೆ. ಹಳಿಯಾಳ ರಸ್ತೆ ಸೇರಿದಂತೆ ಗ್ರಾಮೀಣ ರಸ್ತೆಗಳ ಸುಧಾರಣೆ ಬಗ್ಗೆ ಪಿಡಬ್ಲ್ಯೂಡಿ ಹಾಗೂ ಪಿಆರ್‌ಇಡಿ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ