ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರಸಕ್ತ (2024-25) ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಪುನರ್ ಆರಂಭಿಸುವ ಸಂಬಂಧ ಅಗತ್ಯ ಪೂರ್ವ ಸಿದ್ಧತೆ 29 ರಂದು ನಡೆಯಲಿದೆ. ಶಾಲಾ ಆವರಣ, ಶಾಲಾ ಕೊಠಡಿ ಹಾಗೂ ಶೌಚಾಲಯ ಸ್ವಚ್ಚತೆ, ಕುಡಿಯುವ ನೀರು, ಸಂಪು, ಟ್ಯಾಂಕ್ ಸ್ವಚ್ಛತೆ, ಅಡುಗೆ ಮನೆ ಪಾತ್ರೆಗಳು, ಆಹಾರ ಧಾನ್ಯಗಳ ವ್ಯವಸ್ಥೆ, ಶಾಲಾ ವೇಳಾಪಟ್ಟಿ, ತರಗತಿ ವೇಳಾಪಟ್ಟಿ, ಶಿಕ್ಷಕರಿಗೆ ವಿಷಯ ಮತ್ತು ತರಗತಿ ಹಂಚಿಕೆ ಮತ್ತಿತರ ಕಾರ್ಯಗಳು ನಡೆಯಲಿವೆ ಎಂದು ವಿವರಿಸಿದರು.
30ರಂದು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪೋಷಕರ ಜೊತೆ ಪೂರ್ವಭಾವಿ ಸಭೆಯು ಆಯಾಯ ಶಾಲೆಗಳಲ್ಲಿ ನಡೆಯಲಿದೆ. 31 ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದೆ ಎಂದು ಎಂ.ಮಹದೇವಸ್ವಾಮಿ ತಿಳಿಸಿದರು. ತಳಿರು ತೋರಣ, ಹೂವಿನ ಸ್ವಾಗತ:31 ರಂದು ಶಾಲೆಗಳಿಗೆ ತಳಿರು ತೋರಣ ಕಟ್ಟಿ, ಗುಲಾಬಿ ಹೂವು ನೀಡಿ, ಸಿಹಿ ಹಂಚುವ ಮೂಲಕ ಮಕ್ಕಳನ್ನು ಬರಮಾಡಿಕೊಳ್ಳಲಾಗುತ್ತದೆ. ಹಾಗೆಯೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ. ಪಾಠ ಪ್ರವಚನ ಪ್ರಾರಂಭಿಸಿ ಬಿಸಿಯೂಟದೊಂದಿಗೆ ಕಾರ್ಯಕ್ರಮ ಶುರುವಾಗಲಿದೆ ಎಂದು ವಿವರಿಸಿದರು.
ವಿದ್ಯಾ ಪ್ರವೇಶ ಕಾರ್ಯಕ್ರಮ:
ಎಲ್ಲಾ ಸಿಆರ್‌ಪಿ, ಡಿಆರ್‌ಪಿ, ಬಿಐಇಆರ್‌ಟಿ ಹಾಗೂ ಇಸಿಒಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಗಮನಹರಿಸುವುದು, ಶಾಲೆಯಲ್ಲಿ ಮಾಡಿಕೊಂಡಿರುವ ಪೂರ್ವ ಸಿದ್ಧತೆಗಳನ್ನು ಖಾತರಿಪಡಿಸಿಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು.
29ರಿಂದ ದಾಖಲಾತಿ ಆಂದೋಲನ ನಡೆಸಿ ಮನೆ ಮನೆಗೆ ಭೇಟಿ ನೀಡಿ ನಿಗದಿತ ವಯೋಮಾನದ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ(2023-24 ನೇ ಸಾಲಿನಲ್ಲಿ ಸರ್ಕಾರಿ ಅನುದಾನಿತ, ಅನುದಾನ ರಹಿತ) 1 ರಿಂದ 10ನೇ ತರಗತಿವರೆಗೆ 72,160 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.
ಸಿ ಮತ್ತು ಸಿ+ ಪಡೆದಿರುವ 60 ವಿದ್ಯಾರ್ಥಿಗಳು, ಪುನರಾವರ್ತಿತ 629 ಮತ್ತು ಖಾಸಗಿಯಾಗಿ 15 ಒಟ್ಟು 704 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ-2 ಬರೆಯಲಿದ್ದಾರೆ. ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆಯ ಜೂನಿಯರ್ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.
ಕೊಡಗು ಜಿಲ್ಲೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ 4 ನೇ ಸ್ಥಾನ ಪಡೆದಿದ್ದು, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿರುವುದು ವಿಶೇಷವಾಗಿದೆ ಎಂದು ಎಂ.ಮಹದೇವಸ್ವಾಮಿ ವಿವರಿಸಿದರು.