ಕಿಮ್ಸ್‌ಗೆ ಕೆಎಂಸಿ-ಆರ್‌ಐ ಎಂದು ನಾಮಕರಣ ಮಾಡಲು ಸಿದ್ಧತೆ

KannadaprabhaNewsNetwork | Published : Jun 24, 2024 1:33 AM

ಸಾರಾಂಶ

ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿ-ಆರ್‌ಐ) ಆಗಿ ಹೆಸರು ಬದಲಿಸಿಕೊಳ್ಳಲಿದೆ. ಈಗಾಗಲೇ ಇದಕ್ಕೆ ಸರ್ಕಾರದಿಂದ ಒಪ್ಪಿಗೆಯೂ ದೊರೆತಿದ್ದು, ಒಂದೆರಡು ತಿಂಗಳಲ್ಲಿ ಹೆಸರು ಬದಲಿಸಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿ-ಆರ್‌ಐ) ಆಗಿ ಹೆಸರು ಬದಲಿಸಿಕೊಳ್ಳಲಿದೆ. ಈಗಾಗಲೇ ಇದಕ್ಕೆ ಸರ್ಕಾರದಿಂದ ಒಪ್ಪಿಗೆಯೂ ದೊರೆತಿದ್ದು, ಒಂದೆರಡು ತಿಂಗಳಲ್ಲಿ ಹೆಸರು ಬದಲಿಸಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ.

ಈ ಆಸ್ಪತ್ರೆ 1957ರಲ್ಲಿ ಆರಂಭವಾದಾಗ ಕರ್ನಾಟಕ ವೈದ್ಯಕೀಯ ಕಾಲೇಜ್ (ಕೆಎಂಸಿ) ಎಂದು ಹೆಸರು ಇಡಲಾಗಿತ್ತು. ಇದಾದ ನಂತರ 1996ರಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಎಂದು ಮರುನಾಮಕರಣ ಮಾಡಲಾಯಿತು. ಇದೀಗ 28 ವರ್ಷಗಳ ನಂತರ ಮತ್ತೊಮ್ಮೆ ಹೆಸರು ಬದಲಾಯಿಸಲು ಸಿದ್ಧವಾಗಿದೆ. ಒಂದೆರಡು ತಿಂಗಳಲ್ಲಿ ಈ ಹಿಂದೆ ಇದ್ದ ಹಳೆ ಹೆಸರಿನ ಜತೆಗೆ ಸಂಶೋಧನಾ ಸಂಸ್ಥೆ(ಕೆಎಂಸಿ-ಆರ್‌ಐ) ಎನ್ನುವ ಹೊಸ ಪದ ಸೇರ್ಪಡೆ ಮಾಡಿಕೊಳ್ಳಲಿದೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಕಲಬುರ್ಗಿ ಮತ್ತು ಹುಬ್ಬಳ್ಳಿಯಲ್ಲಿರುವ ಮೆಡಿಕಲ್ ಕಾಲೇಜುಗಳು ಅತ್ಯಂತ ಹಳೆಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು. ಈಗಾಗಲೇ ಬೆಂಗಳೂರು ಮತ್ತು ಮೈಸೂರಿನ ವೈದ್ಯಕೀಯ ಕಾಲೇಜುಗಳು ಸಂಶೋಧನಾ ಸಂಸ್ಥೆಯಾಗಿ ಹೆಸರು ಬದಲಿಸಿಕೊಂಡಿವೆ. ಈಗ ಹುಬ್ಬಳ್ಳಿಯ ಕಿಮ್ಸ್‌ ಸಂಶೋಧನಾ ಸಂಸ್ಥೆಯಾಗಿ ಹೆಸರು ಬದಲಿಸಿಕೊಳ್ಳುತ್ತಿರುವ ಮೂರನೇ ಕಾಲೇಜು ಆಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ್, ಕಿಮ್ಸ್ ಎಂದಾಗ ಕಾರವಾರ ಮತ್ತು ಕೊಪ್ಪಳದ ಮೆಡಿಕಲ್ ಕಾಲೇಜು ಎಂದು ಜನರಲ್ಲಿ ಗೊಂದಲವಾಗುತ್ತಿತ್ತು. ರೋಗಿಗಳು ಈಗಲೂ ಕೆಎಂಸಿ ಎಂದೇ ಕರೆಯುತ್ತಾರೆ. ಈ ಕುರಿತು ಸರ್ಕಾರಕ್ಕೆ ಕೆಎಂಸಿ-ಆರ್‌ಐ(ಕರ್ನಾಟಕ ಮೆಡಿಕಲ್‌ ಕಾಲೇಜು-ಸಂಶೋಧನಾ ಸಂಸ್ಥೆ) ಎಂದು ಹೆಸರಿಡಲು ಪ್ರಸ್ತಾವ ಸಲ್ಲಿಸಲಾಗಿತ್ತು. ಇದಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿದೆ ಎಂದರು.

ಬೆಂಗಳೂರಿನ ಬಿಎಂಸಿ-ಆರ್‌ಐ(ಬೆಂಗಳೂರು ಮೆಡಿಕಲ್‌ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ) ಮಾದರಿಯಲ್ಲಿ ಕೆಎಂಸಿ-ಆರ್‌ಐ (ಕರ್ನಾಟಕ ಮೆಡಿಕಲ್‌ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ) ಎಂದು ನಾಮಕರಣ ಮಾಡಲು ಸರ್ಕಾರ 2 ತಿಂಗಳ ಹಿಂದೆಯೇ ಪತ್ರ ಬರೆದು ತಿಳಿಸಿದೆ. ಚುನಾವಣಾ ನೀತಿ ಸಂಹಿತೆಯಿಂದ ಮರು ನಾಮಕರಣ ಪ್ರಕ್ರಿಯೆ ವಿಳಂಬವಾಗಿದೆ. ಸದ್ಯದಲ್ಲಿಯೇ ನಡೆಯಲಿರುವ ವೈದ್ಯಕೀಯ ಕಾಲೇಜುಗಳ ಸಲಹಾ ಮಂಡಳಿಯಲ್ಲಿ ವಿಷಯ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

Share this article