ವಾಣಿವಿಲಾಸ ಆಸ್ಪತ್ರೆಯಲ್ಲಿ ವರ್ಷಾಂತ್ಯಕ್ಕೆ ರಕ್ತನಿಧಿ ಕೇಂದ್ರ ತೆರೆಯಲು ಸಿದ್ಧತೆ

KannadaprabhaNewsNetwork |  
Published : Jun 26, 2025, 01:32 AM ISTUpdated : Jun 26, 2025, 10:02 AM IST
vani vilasa hospital 1 | Kannada Prabha

ಸಾರಾಂಶ

ಬೆಂಗಳೂರು ನಗರದ ಪ್ರಮುಖ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಾದ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಗತ್ಯವಾದ ರಕ್ತನಿಧಿ ಕೇಂದ್ರ ತೆರೆಯಲು ನಿರ್ಧಾರವಾಗಿದ್ದು, ವರ್ಷಾಂತ್ಯಕ್ಕೆ ಇದು ಕಾರ್ಯಾರಂಭ ಮಾಡಲಿದೆ.

  ಬೆಂಗಳೂರು :  ನಗರದ ಪ್ರಮುಖ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಾದ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಗತ್ಯವಾದ ರಕ್ತನಿಧಿ ಕೇಂದ್ರ ತೆರೆಯಲು ನಿರ್ಧಾರವಾಗಿದ್ದು, ವರ್ಷಾಂತ್ಯಕ್ಕೆ ಇದು ಕಾರ್ಯಾರಂಭ ಮಾಡಲಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಯ ಈ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 1300-1500 ರಷ್ಟು ಹೆರಿಗೆ ಆಗುತ್ತಿದೆ. ಪ್ರತಿನಿತ್ಯ ಸುಮಾರು 250ಕ್ಕೂ ಅಧಿಕ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಆದರೆ, ಸದ್ಯ ರಕ್ತ ಶೇಖರಣೆಗೆ ಮಾತ್ರ ವ್ಯವಸ್ಥೆ ಇಲ್ಲಿದ್ದು, ಸರಾಸರಿ ವಾರ್ಷಿಕ ಸರಾಸರಿ 3600 ಯುನಿಟ್‌ ರಕ್ತದ ಅಗತ್ಯ ಬೀಳುತ್ತಿದೆ.

ಅಗತ್ಯ ರಕ್ತಕ್ಕಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಯನ್ನು ಅವಲಂಬಿಸಿದೆ. ಆದರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲೇ ವಾರ್ಷಿಕ 8 ಸಾವಿರ ಯುನಿಟ್‌ ಅಗತ್ಯವಿದೆ. ಕೆಲ ಸಂದರ್ಭದಲ್ಲಿ ವಾಣಿ ವಿಲಾಸ ಆಸ್ಪತ್ರೆಗೆ ಅಲ್ಲಿಂದಲೂ ರಕ್ತ ಪಡೆದುಕೊಳ್ಳುವುದು ಸಮಸ್ಯೆ ಆಗುತ್ತಿದೆ. ಆಸ್ಪತ್ರೆಯಲ್ಲಿ 700 ಹಾಸಿಗೆಗಳಿದ್ದು, ತಾಯಂದಿರಿಗೆ 500 ಹಾಸಿಗೆ ಮೀಸಲಾಗಿದೆ. ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ, ರಕ್ತಸ್ರಾವ, ಗರ್ಭಕಂಠ ನಿರ್ಬಂಧಿಸುವಂತಹ ಪ್ಲೆಸೆಂಟಾ ಪ್ರಿವಿಯಾ ಸಮಸ್ಯೆ ಸೇರಿ ಇತರೆ ತೊಂದರೆಯುಳ್ಳ ಗರ್ಭಿಣಿಯರು ಹೆಚ್ಚಾಗಿ ದಾಖಲಾಗುತ್ತಾರೆ.

ಈ ಬಗ್ಗೆ ಮಾತನಾಡಿದ ವಾಣಿವಿಲಾಸ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾ ಸಿ., ಸದ್ಯ ಅಗತ್ಯ ರಕ್ತವನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ಪಡೆಯುತ್ತಿದ್ದೇವೆ. ಈಗ ನಮ್ಮದೇ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ತೆರೆಯಲು ನಿರ್ಧರಿಸಿದ್ದು, ಅದಕ್ಕೆ ಬೇಕಾದ ಸ್ಥಳ ಗುರುತಿಸಲಾಗಿದೆ. ಅಗತ್ಯ ಯಂತ್ರೋಪಕರಣವನ್ನು ಕೆಎಸ್‌ಎಂಎಸ್‌ಸಿಎಲ್‌ ಮೂಲಕ ಪಡೆದುಕೊಳ್ಳಲಾಗುವುದು. ಆದರೆ, ಈಗಲೇ ಎಷ್ಟು ಪ್ರಮಾಣದ ರಕ್ತ ಸಂಗ್ರಹ ಮಾಡುತ್ತೇವೆ ಎಂದು ಹೇಳುವುದು ಕಷ್ಟ ಎಂದು ಹೇಳಿದರು.

ರಕ್ತನಿಧಿ ಕೇಂದ್ರಕ್ಕೆ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಔಷಧ ನಿಯಂತ್ರಣ ಇಲಾಖೆಯಿಂದ ಒಪ್ಪಿಗೆ ಪಡೆಯಬೇಕು. ಇವೆಲ್ಲ ಪ್ರಕ್ರಿಯೆಗೆ ಆರು ತಿಂಗಳು ಬೇಕಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.

ವಾಣಿವಿಲಾಸದಲ್ಲಿ ವರ್ಷಾಂತ್ಯಕ್ಕೆ ರಕ್ತನಿಧಿ ಕೇಂದ್ರ ತೆರೆಯಲು ನಿರ್ಧಾರವಾಗಿದೆ. ರಕ್ತನಿಧಿ ಕೇಂದ್ರವಾದಲ್ಲಿ ಬೇರೆ ಆಸ್ಪತ್ರೆಯಿಂದ ತರಿಸಿಕೊಳ್ಳುವುದು ತಪ್ಪಲಿದ್ದು, ದಾಖಲಾಗುವವರಿಗೆ ಅನುಕೂಲ ಆಗಲಿದೆ.

ಡಾ.ಸವಿತಾ ಸಿ., ವೈದ್ಯಕೀಯ ಅಧೀಕ್ಷಕರು, ವಾಣಿವಿಲಾಸ ಆಸ್ಪತ್ರೆ

PREV
Read more Articles on

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌