ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭದ್ರಾ ನಾಲಾ, ನದಿ ಪಾತ್ರ ಪ್ರದೇಶದಲ್ಲಿ ಅನಧಿಕೃತ ಪಂಪ್ ಸೆಟ್ ಮತ್ತು ತೂಬುಗಳ ಮೂಲಕ ನೀರನ್ನು ಎತ್ತುವುದನ್ನು ನಿಷೇಧಿಸಿ ಭದ್ರಾ ನಾಲಾ ಮತ್ತು ನದಿಯ ಪಾತ್ರಗಳ ಸುತ್ತಮುತ್ತ 100 ಮೀ. ವ್ಯಾಪ್ತಿಯಲ್ಲಿ ನಿಬಂಧನೆಗಳನ್ನು ವಿಧಿಸಿ, ಫೆ.19ರಿಂದ 26ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಫೆ.5ರ ರಾತ್ರಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಾವೇರಿ ಮತ್ತು ಗದಗ ಜಿಲ್ಲೆಯ ಪಟ್ಟಣಗಳಿಗೆ ಇದುವರೆಗೂ ಒಟ್ಟು 1 ಟಿಎಂಸಿ ನೀರನ್ನು ಭದ್ರಾ ಜಲಾಶಯದಿಂದ ಹರಿಸಲಾಗಿರುತ್ತದೆ. ಆದರೆ, ಹರಿಸಿರುವ ನೀರು ಸದರಿ ಜಿಲ್ಲೆಗಳ ನೀರು ಒದಗಿಸುವ ಜಾಕ್‌ವೆಲ್ ಸ್ಥಳವನ್ನು ತಲುಪುತ್ತಿಲ್ಲವೆಂದು ತಿಳಿದುಬಂದಿದೆ. ಇದಕ್ಕೆ ನದಿ ಪಾತ್ರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಪಂಪ್‌ಸೆಟ್ ಗಳನ್ನು ಅಳವಡಿಸಿ, ಅಕ್ರಮವಾಗಿ ನೀರನ್ನೆತ್ತಿ ಬಳಸಿಕೊಳ್ಳುತ್ತಿದ್ದಾರೆ. ಪರಿಣಾಮ ಹಾಗೂ ನದಿ ಪಾತ್ರದಲ್ಲಿ ಕೆಲವು ಗ್ರಾಮಗಳಲ್ಲಿ ನದಿಗೆ ಅಡ್ಡಲಾಗಿ ಅನಧಿಕೃತ ಮಣ್ಣಿನ/ ಮರಳಿನ ಏರಿಗಳ ನಿರ್ಮಿಸಿ ನೀರನ್ನು ಎತ್ತುತ್ತಿರುವುದು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.2023-24ನೇ ಸಾಲಿಗೆ ಭದ್ರಾ ಕಾಲುವೆಯಲ್ಲಿ ಬೇಸಿಗೆ ಹಂಗಾಮಿಗೆ ನೀರನ್ನು ಹರಿಸುತ್ತಿದ್ದು, ಅಕ್ರಮ ಪಂಪ್‌ಸೆಟ್ ಅಳವಡಿಸಿ ನೀರನ್ನು ಎತ್ತಿ ಬಳಸುತ್ತಿರುವುದರಿಂದ ಅಚ್ಚುಕಟ್ಟು ಕೊನೆಯ ಭಾಗದವರಿಗೆ ನೀರು ಹರಿಸುವುದು ಕಷ್ಟವಾಗಿದೆ. ಕುಡಿಯುವ ನೀರು ಪೂರೈಸುವುದೂ ಕಷ್ಟವಾಗಿದೆ. ಹೀಗಾಗಿ, ಪಂಪ್ ಸೆಟ್‌ಗಳನ್ನು ತೆರವುಗೊಳಿಸಲು ಮತ್ತು ನಿಷೇಧಾಜ್ಞೆ ಜಾರಿಗೊಳಿಸಲು ಪ್ರಾಧಿಕಾರ ಕೋರಿಕೆ ಸಲ್ಲಿಸಿತ್ತು.
ಪ್ರಸ್ತುತ ರಾಜ್ಯ, ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು, ಕುಡಿಯುವ ನೀರಿಗೆ ತುಂಬಾ ಬೇಡಿಕೆ ಇದೆ. ಭದ್ರಾ ನಾಲಾ ಕಾಲುವೆಗಳಲ್ಲಿ ನೀರು ಹರಿಸುತ್ತಿರುವುದರಿಂದ ಕಾಲುವೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಒದಗಿಸುವುದಕ್ಕಾಗಿ ಹಾಗೂ ಕಾಲುವೆಗಳ ಪ್ರದೇಶದಲ್ಲಿ ಅನಧಿಕೃತವಾಗಿ ರೈತರು ಹೊಲಗಳಿಗೆ ನೀರನ್ನು ಹರಿಸುವುದಾಗಲೀ ಅಥವಾ ಪಂಪ್‌ಸೆಟ್ ಮತ್ತು ತೂಬುಗಳ ಮೂಲನ್ನು ನೀರನ್ನು ಎತ್ತುವಳಿ ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಫೆ. 19ರಿಂದ 26 ರವರೆಗೆ ಭದ್ರಾ ನಾಲಾ ಮತ್ತು ನದಿ ಪಾತ್ರ ಪ್ರದೇಶದ ಸುತ್ತಮುತ್ತ 100 ಮೀ ವ್ಯಾಪ್ತಿಯಲ್ಲಿ ಸಿಆರ್ ಪಿಸಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.- - - (-ಫೋಟೋ: ಸಾಂದರ್ಭಿಕ ಚಿತ್ರ)