ಜಿಲ್ಲಾದ್ಯಂತ ಬೆಳಕಿನ ಹಬ್ಬದ ಸಂಭ್ರಮಕ್ಕೆ ಸಿದ್ಧತೆ

KannadaprabhaNewsNetwork |  
Published : Nov 08, 2026, 01:30 AM IST
ಪೋಟೋ: 07ಎಸ್‌ಎಂಜಿಕೆಪಿ01ಶಿವಮೊಗ್ಗ ನಗರದಲ್ಲಿ ದೀಪಾವಳಿ ಹಬ್ಬ ಹಿನ್ನೆಲೆ ಹೂವು ಖರೀದಿ ಮಾಡುತ್ತಿರುವುದು. | Kannada Prabha

ಸಾರಾಂಶ

Preparations underway across the district for the festivities of the Festival of Lights

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮನೆ ಮಾಡಿದೆ.

ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ. ನ.8 ರಿಂದ 10 ವರೆಗೆ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲು ಜನರು ಶನಿವಾರ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಹೂವು, ಹಣ್ಣು, ಹಣತೆ, ಆಕಾಶಬುಟ್ಟಿ, ಪೂಜಾ ಸಾಮಗ್ರಿಗಳು, ಹೊಸ ಬಟ್ಟೆ ಹಾಗೂ ಪಟಾಕಿಗಳ ಖರೀದಿ ಭರಾಟೆ ಜೋರಾಗಿತ್ತು.

ನಗರದ ಗಾಂಧಿ ಬಜಾರ್, ದುರ್ಗಿಗುಡಿ, ಬಿಎಚ್ ರಸ್ತೆ, ಲಕ್ಷ್ಮೀ ಟಾಕೀಸ್ ವೃತ್ತ, ಪೊಲೀಸ್ ಚೌಕಿ, ಗೋಪಾಳ, ವಿದ್ಯಾನಗರ, ಸವಳಂಗ ರಸ್ತೆ, ಗೋಪಿ ವೃತ್ತ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಬೆಳಗ್ಗಿನಿಂದಲೇ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು.

ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಕುಟುಂಬ ಸಮೇತರಾಗಿ ಜನರು ಮಾರುಕಟ್ಟೆಗೆ ಆಗಮಿಸುತ್ತಿರುವ ದೃಶ್ಯ ಕಂಡು ಬಂತು. ಜನದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನ ಸಂಚಾರ ಹಾಗೂ ಜನರ ಓಡಾಟವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ದೀಪಾವಳಿ ಹಬ್ಬದ ಪ್ರಮುಖ ಆಕರ್ಷಣೆಯಾದ ಹಣತೆಗಳ ಖರೀದಿ ಈ ಬಾರಿ ಜೋರಾಗಿದೆ. ಮಣ್ಣಿನ ಸಾಂಪ್ರದಾಯಿಕ ಹಣತೆಗಳ ಜತೆಗೆ ವಿವಿಧ ಬಣ್ಣ, ವಿನ್ಯಾಸ ಮತ್ತು ಆಕರ್ಷಕ ರೂಪದ ಹಣತೆಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುತ್ತಿವೆ. ಸಣ್ಣ ಹಣತೆಗಳಿಂದ ಹಿಡಿದು ಅಲಂಕಾರಿಕ ದೀಪಗಳ ಹಲವು ಬಗೆಯ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ.

ಹಣತೆಗಳ ಬೆಲೆ ಕನಿಷ್ಠ ₹5 ನಿಂದ ಗರಿಷ್ಠ ₹300 ವರೆಗೆ ಇದೆ. ಮನೆಗಳ ಮುಂಭಾಗ, ತುಳಸಿ ಕಟ್ಟೆ, ದೇವರ ಕೋಣೆ ಹಾಗೂ ಅಂಗಡಿ-ಮುಂಗಟ್ಟುಗಳನ್ನು ಅಲಂಕರಿಸಲು ಜನರು ಹಣತೆಗಳನ್ನು ಖರೀದಿಸುತ್ತಿದ್ದರು.

ಹಬ್ಬದ ಹಿನ್ನೆಲೆಯಲ್ಲಿ ಹೂವಿನ ಮಾರುಕಟ್ಟೆಯಲ್ಲಿಯೂ ವ್ಯಾಪಾರ ಚುರುಕುಗೊಂಡಿದೆ. ಕನಕಾಂಬರ, ಮಲ್ಲಿಗೆ, ಚೆಂಡು, ಸೇವಂತಿಗೆ, ಗುಲಾಬಿ ಹಾಗೂ ಸುಗಂಧರಾಜ ಹೂವುಗಳಿಗೆ ಬೇಡಿಕೆ ಕಂಡುಬಂದಿದೆ. ವಿಶೇಷವಾಗಿ ದೀಪಾವಳಿ ಪೂಜೆ ಮತ್ತು ಮನೆಗಳ ಅಲಂಕಾರಕ್ಕೆ ಬಳಸುವ ಚೆಂಡು ಹಾಗೂ ಸೇವಂತಿಗೆ ಹೂವುಗಳ ಮಾರಾಟ ಹೆಚ್ಚಾಗಿದೆ.

ಆದರೆ, ಈ ಬಾರಿ ಮಾರುಕಟ್ಟೆಗೆ ಹೂವುಗಳ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿರುವುದರ ಜತೆಗೆ ಹಬ್ಬದ ಸಂದರ್ಭದಲ್ಲಿ ಮಳೆಯಾಗುತ್ತಿರುವುದರಿಂದ ಬೆಲೆಗಳಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿಲ್ಲ. ವರಮಹಾಲಕ್ಷ್ಮಿ ಹಾಗೂ ದಸರಾ ಹಬ್ಬಗಳ ಸಂದರ್ಭದಲ್ಲಿ ಕಂಡುಬಂದಿದ್ದಷ್ಟು ಬೇಡಿಕೆ ಈ ಬಾರಿ ಇಲ್ಲ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟರು

ಸದ್ಯ ಮಾರುಕಟ್ಟೆಯಲ್ಲಿ ಚೆಂಡು ಹೂವು ಕೆಜಿಗೆ ₹100 ರಿಂದ ₹150, ಮಲ್ಲಿಗೆ ₹100 ಹಾಗೂ ಸೇವಂತಿಗೆ ಹೂವು ಕೆಜಿಗೆ ₹150 ರಿಂದ ₹200 ವರೆಗೆ ಹಾಗೂ ಹಾರಗಳಿಗೆ ₹150 ರಿಂದ ₹400 ಮಾರಾಟವಾಗುತ್ತಿದೆ. ಪೂಜೆಗೆ ಅಗತ್ಯವಿರುವ ಬಾಳೆಕಂದು, ಕಬ್ಬು, ತೆಂಗಿನಕಾಯಿ, ವೀಳ್ಯದೆಲೆ, ಬೂದುಗುಂಬಳ ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿಯೂ ಜೋರಾಗಿದೆ.

ಹಣ್ಣುಗಳ ಬೆಲೆಯೂ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದ್ದು, ಸೇಬು ಕೆಜಿಗೆ ₹150 ರಿಂದ ₹200, ಬಾಳೆಹಣ್ಣು ಕೆಜಿಗೆ ₹70ರಿಂದ ₹100 ಮೋಸಂಬಿ ₹200 ಕಿತ್ತಲೆ ಹಣ್ಣು ₹100, ಸೀತಾಫಲ ₹200 ಹಾಗೂ ದಾಳಿಂಬೆ ₹250 ರವರೆಗೆ ಮಾರಾಟವಾಗುತ್ತಿದೆ.

ಜೋಡಿ ಬಾಳೆ ಕಂದು ₹40 ರಿಂದ ₹50 ಹಾಗೂ ಒಂದು ಜೋಡಿ ಕಬ್ಬು ₹20 ರಿಂದ ₹40 ದರದಲ್ಲಿ ಮಾರಾಟವಾಗುತ್ತಿದೆ. ದೀಪಾವಳಿ ಹಬ್ಬದ ಮತ್ತೊಂದು ಆಕರ್ಷಣೆಯಾಗಿರುವ ಆಕಾಶಬುಟ್ಟಿಗಳು ನಗರದ ಮಾರುಕಟ್ಟೆಗಳಿಗೆ ವಿಶೇಷ ಮೆರುಗು ನೀಡಿವೆ.

ವಿವಿಧ ಅಂಗಡಿಗಳ ಮುಂದೆ ನೇತುಹಾಕಿರುವ ಬಣ್ಣಬಣ್ಣದ ಆಕಾಶಬುಟ್ಟಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ನಕ್ಷತ್ರದ ಮಾದರಿ, ಚಂದ್ರನ ಆಕಾರ ಸೇರಿದಂತೆ ಹಲವು ವಿನ್ಯಾದ ಆಕಾಶಬುಟ್ಟಿಗಳು ಮಾರಾಟಕ್ಕೆ ಬಂದಿವೆ. ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದ ಆಕರ್ಷಕ ವಿನ್ಯಾಸದ ಆಕಾಶಬುಟ್ಟಿಗಳನ್ನು ತರಿಸಲಾಗಿದೆ.

ಗಾತ್ರ, ಬಣ್ಣ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ಇವುಗಳ ಬೆಲೆ ಇತ್ತು.

ಬಾಕ್ಸ್‌...

98ಕ್ಕೂ ಅಧಿಕ ಪಟಾಕಿ ಮಳಿಗೆಗಳು

ದೀಪಾವಳಿ ಎಂದರೆ ದೀಪಗಳ ಬೆಳಕು, ಸಿಹಿತಿಂಡಿಗಳ ಸವಿ ಹಾಗೂ ಪಟಾಕಿಗಳ ಸದ್ದು. ಹೀಗಾಗಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಪಟಾಕಿಗಳ ಖರೀದಿಯೂ ನಗರದಲ್ಲಿ ಜೋರಾಗಿದೆ. ನಗರದ ಅಲ್ಲಮಪ್ರಭು ಮೈದಾನದಲ್ಲಿ 98ಕ್ಕೂ ಅಧಿಕ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು, ಗ್ರಾಹಕರು ತಮಗೆ ಇಷ್ಟವಾದ ವಿವಿಧ ಬಗೆಯ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ.

ಲಕ್ಷೀ ಪಟಾಕಿ, ಸುರ್‌ಸುರ್ ಬತ್ತಿ, ಆಕಾಶಬಾಣ, ಹೂವಿನ ಬತ್ತಿ, ಹನುಮಂತನ ಬಾಲ ಸೇರಿದಂತೆ ಹಲವು ಬಗೆಯ ಪಟಾಕಿಗಳು ಮಾರಾಟಕ್ಕೆ ಲಭ್ಯವಿವೆ. ಪಟಾಕಿ ಗಿಫ್ಟ್ ಪ್ಯಾಕ್‌ಗಳು ₹300 ನಿಂದ ₹1500 ವರೆಗೆ ಮಾರಾಟವಾಗುತ್ತಿವೆ. ಮಕ್ಕಳಿಗಾಗಿ ಸಣ್ಣ ಪಟಾಕಿಗಳು ಹಾಗೂ ಕುಟುಂಬದವರು ಒಟ್ಟಾಗಿ ಸಂಭ್ರಮಿಸಲು ವಿವಿಧ ಪ್ಯಾಕೇಜ್‌ಗಳನ್ನು ಗ್ರಾಹಕರು ಆಯ್ಕೆ ಮಾಡುತ್ತಿದ್ದಾರೆ.

ಬಾಕ್ಸ್‌...

ಲಕ್ಷ್ಮಿ ಪೂಜೆಗೆ ಸಿದ್ಧತೆ

ಭಾನುವಾರ ಮತ್ತು ಸೋಮವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮನೆಗಳು, ಅಂಗಡಿ-ಮುಂಗಟ್ಟುಗಳು ಹಾಗೂ ಕಾರ್ಖಾನೆಗಳಲ್ಲಿ ಲಕ್ಷ್ಮಿ ಪೂಜೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಸ್ವಚ್ಛಗೊಳಿಸಿ, ಹೂವು, ತಳಿರು ತೋರಣ, ವಿದ್ಯುತ್ ದೀಪಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸುತ್ತಿದ್ದಾರೆ. ಲಕ್ಷ್ಮಿ ದೇವಿಯ ಪೂಜೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಮುಂಚಿತವಾಗಿಯೇ ಖರೀದಿಸುತ್ತಿದ್ದರು.ಪೋಟೋ: 07ಎಸ್‌ಎಂಜಿಕೆಪಿ01

ನಗರದಲ್ಲಿ ದೀಪಾವಳಿ ಹಬ್ಬ ಹಿನ್ನೆಲೆ ಹೂವು ಖರೀದಿ ಮಾಡುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ