ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ಶಿಕ್ಷಣ ಸಂಸ್ಥೆ ಅಲ್ಯಮಿನಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಜನಗಣತಿ ಭಾರತ ಜನಗಣತಿ ೨೦೨೬-೨೭ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿ, ಕೈಪಿಡಿಯಲ್ಲಿರುವ ಎಲ್ಲಾ ಸೂಚನೆಗಳನ್ನು ಮೊದಲು ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಂಡ ಬಳಿಕವೇ ಕಾರ್ಯಪ್ರವೃತ್ತರಾಗಬೇಕು. ಈಗಿನ ಜನಗಣತಿ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ನಡೆಯುತ್ತಿರುವುದರಿಂದ ಹಿಂದಿನ ವರ್ಷಗಳಂತೆ ಕಷ್ಟಗಳಿಲ್ಲ. ಒಟ್ಟು ೩೪ ಪ್ರಮುಖ ಪ್ರಶ್ನೆಗಳಿದ್ದು, ಪ್ರತಿಯೊಂದನ್ನೂ ಗಮನವಿಟ್ಟು ಸರಿಯಾಗಿ ಭರ್ತಿ ಮಾಡಬೇಕು. ವಿಶೇಷವಾಗಿ ಮನೆಗಳ ಮ್ಯಾಪ್ ಗುರುತಿಸುವಿಕೆ ಮತ್ತು ಸ್ಥಳದ ವಿವರಗಳನ್ನು ದಾಖಲಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ಜನಗಣತಿ ಏಕೆ ಅಗತ್ಯ ಎಂಬುದನ್ನು ಜನರಿಗೆ ಸರಳವಾಗಿ ತಿಳಿಸಿ, ಅವರ ವಿಶ್ವಾಸ ಗಳಿಸುವುದು ಗಣತಿಗಾರರ ಪ್ರಮುಖ ಹೊಣೆಗಾರಿಕೆ. ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಜನಗಣತಿ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮವಾಗಿ ಹಾಗೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಗಣತಿಗಾರರಿಗೆ ಪ್ರಶಸ್ತಿ ನೀಡುವ ವ್ಯವಸ್ಥೆಯೂ ಇದೆ ಎಂದು ಹೇಳಿದರು. ಕೊನೆಯ ಕ್ಷಣದವರೆಗೆ ಕಾಯದೆ ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಮನೆಗಳ ಲಿಸ್ಟಿಂಗ್ ಮಾಡುವ ವಿಧಾನ ಕುರಿತು ಸಮಗ್ರ ತರಬೇತಿ ನೀಡಲಾಗುತ್ತದೆ ಎಂದರು.
ತರಬೇತಿಗೆ ಹಾಜರಾದವರು ಜವಾಬ್ದಾರಿಯುತವಾಗಿ, ಶಿಸ್ತಿನಿಂದ ಹಾಗೂ ಸಂತೋಷದಿಂದ ಈ ಕಾರ್ಯವನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು. ಸಮಾಜದಲ್ಲಿ ಬದಲಾವಣೆ ತರಲು ಜನಗಣತಿ ಪ್ರಮುಖ ಸಾಧನವಾಗಿದ್ದು, ಇದರ ಮೂಲಕ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳುತ್ತವೆ. ಹೀಗಾಗಿ ಈ ಕಾರ್ಯದಲ್ಲಿ ನಿರ್ಲಕ್ಷ್ಯ ತೋರದೆ, ನಿಖರ ಮಾಹಿತಿಯನ್ನು ಸಂಗ್ರಹಿಸುವುದು ಅತ್ಯಗತ್ಯ ಎಂದು ಹೇಳಿದರು. ಸವಾಲುಗಳು ಎದುರಾದರೂ ಧೈರ್ಯದಿಂದ ಎದುರಿಸಿ, ಮುಂದಿನ ದಿನಗಳಲ್ಲಿ ಇದು ನಿಮಗೆ ಅನುಭವ ಹಾಗೂ ಗೌರವ ತರುತ್ತದೆ ಎಂದು ಅಭಿಪ್ರಾಯಪಟ್ಟರು.ಅಪರ ಜಿಲ್ಲಾಧಿಕಾರಿ ಜಗದೀಶ್ ವಿ. ಗಂಗಣ್ಣನವರ್ ಮಾತನಾಡಿ, ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವಾಗ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು. ಪ್ರತಿದಿನ ಸಂಗ್ರಹಿಸಿದ ಮಾಹಿತಿಯನ್ನು ತಕ್ಷಣ ಅಪ್ಲೋಡ್ ಮಾಡಿದರೆ ಜಿಲ್ಲೆಯ ಪ್ರಗತಿ ರಾಜ್ಯ ಮಟ್ಟದಲ್ಲಿ ಗಮನಾರ್ಹವಾಗುತ್ತದೆ ಜೊತೆಗೆ ನಮ್ಮ ಜಿಲ್ಲೆಯ ಪ್ರಗತಿ ಚನ್ನಾಗಿ ಟಾಪ್ ಸ್ಥಾನ ಪಡೆಯುತ್ತದೆ. ಜನಗಣತಿಯಲ್ಲಿ ಕೊಟ್ಟಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಕಾಟಾಚಾರಕ್ಕೆ ಕೆಲಸ ಮಾಡಬೇಡಿ. ಪ್ರತಿದಿನ ಟಾರ್ಗೆಟ್ ರೀಚ್ ಆಗಬೇಕು. ನಮ್ಮ ಜಿಲ್ಲೆಯನ್ನು ಬೇರೆ ಜಿಲ್ಲೆಯವರು ಮಾದರಿಯನ್ನಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು. ದಿನನಿತ್ಯ ಗುರಿ ತಲುಪುವಂತೆ ಕಾರ್ಯನಿರ್ವಹಿಸಿ, ಕೇವಲ ಕಾಟಾಚಾರಕ್ಕೆ ಕೆಲಸ ಮಾಡದೆ ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು. ಹಾಸನ ಜಿಲ್ಲೆಯನ್ನು ಇತರ ಜಿಲ್ಲೆಗಳ ಮಾದರಿಯನ್ನಾಗಿಸುವ ಗುರಿಯನ್ನು ಹೊಂದಿರುವ ಜಿಲ್ಲಾಡಳಿತ, ಜನಗಣತಿ ಕಾರ್ಯಕ್ಕಾಗಿ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು-ರಾತ್ರಿ ಶ್ರಮಿಸುತ್ತಿದ್ದು, ಈ ಮಹತ್ವದ ಕಾರ್ಯವನ್ನು ಯಶಸ್ವಿಯಾಗಿ ಮುನ್ನಡೆಸಲು ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಗೀತಾ ಸೇರಿದಂತೆ ಹಲವು ಅಧಿಕಾರಿಗಳು, ಗಣತಿಗಾರರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.