ಗದಗ ಜಿಲ್ಲೆಯ 31 ಗ್ರಾಮಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಸಿದ್ಧತೆ

KannadaprabhaNewsNetwork |  
Published : Jul 23, 2026, 02:30 AM IST
ಗದಗ ಮಾರುಕಟ್ಟೆಯಲ್ಲಿ ಮೇವು ಮಾರಾಟಕ್ಕೆ ಬಂದಿರುವುದು. | Kannada Prabha

ಸಾರಾಂಶ

ಪಶುಪಾಲನಾ ಇಲಾಖೆಯ ಪ್ರಸ್ತುತ ಅಂಕಿ- ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಪ್ರಸ್ತುತ 343771 ಟನ್ ಮೇವು ಸಂಗ್ರಹವಿದೆ. ಇದು ಮುಂದಿನ 20 ವಾರಗಳಿಗೆ(5 ತಿಂಗಳು) ಸಾಕಾಗಬಹುದು ಎಂದು ಅಂದಾಜಿಸಲಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯಲ್ಲಿ ಬರಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಳೆ ಕೊರತೆಯಿಂದಾಗಿ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ತೀವ್ರ ಅಭಾವ ಉಂಟಾಗುವ ಆತಂಕ ಎದುರಾಗಿದೆ. ಜಿಲ್ಲಾಡಳಿತ ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 31 ಆಯ್ದ ಗ್ರಾಮಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಕ್ರಮ ಕೈಗೊಂಡಿದೆ.

ಪಶುಪಾಲನಾ ಇಲಾಖೆಯ ಪ್ರಸ್ತುತ ಅಂಕಿ- ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಪ್ರಸ್ತುತ 343771 ಟನ್ ಮೇವು ಸಂಗ್ರಹವಿದೆ. ಇದು ಮುಂದಿನ 20 ವಾರಗಳಿಗೆ(5 ತಿಂಗಳು) ಸಾಕಾಗಬಹುದು ಎಂದು ಅಂದಾಜಿಸಲಾಗಿದೆ. ದಿನ ಕಳೆದಂತೆ ಉಷ್ಣಾಂಶ ಹೆಚ್ಚಿ, ಬಿಸಿಲಿನ ಬೇಗೆ ಏರಿದಂತೆ ಮೇವಿನ ಕೊರತೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ರೈತರು ತಮ್ಮ ಜಾನುವಾರುಗಳನ್ನು ಅಲ್ಪಸ್ವಲ್ಪ ಬೆಲೆಗೆ ಮಾರಾಟ ಮಾಡುವ ಅಥವಾ ವಲಸೆ ಹೋಗುವ ದುಸ್ಥಿತಿ ಬಾರದಂತೆ ಕ್ರಮ ವಹಿಸಬೇಕಿದೆ.

ಗದಗ ತಾಲೂಕಿನ ಗದಗ, ಕುರ್ತಕೋಟಿ, ಲಕ್ಕುಂಡಿ, ಬಿಂಕದಕಟ್ಟಿ, ಮುಳಗುಂದ ಮತ್ತು ಹುಲಕೋಟಿ, ಗಜೇಂದ್ರಗಡ ತಾಲೂಕಿನ ಗಜೇಂದ್ರಗಡ, ರಾಜೂರು, ಹಾಳಕೇರಿ, ಮುಶಿಗೇರಿ, ಲಕ್ಷ್ಮೇಶ್ವರ ತಾಲೂಕಿನ ಲಕ್ಷ್ಮೇಶ್ವರ, ಬಾಲೆಹೊಸೂರು, ಶಿಗ್ಲಿ, ಗೊಜನೂರು, ಮುಂಡರಗಿ ತಾಲೂಕಿನ ಡೋಣಿ, ಕದಾಂಪುರ, ಬಾಗೇವಾಡಿ, ಹಳ್ಳಿಕೇರಿ, ನರಗುಂದ ತಾಲೂಕಿನ ನರಗುಂದ, ಕೊಣ್ಣೂರು, ಭೈರನಹಟ್ಟಿ, ರೋಣ ತಾಲೂಕಿನ ರೋಣ, ಮಾಡಲಗೇರಿ, ಚಿಕ್ಕಮಣ್ಣೂರು, ಮಲ್ಲಾಪೂರ, ಶಿರಹಟ್ಟಿ ತಾಲೂಕಿನ ಶಿರಹಟ್ಟಿ, ಬೆಳ್ಳಟ್ಟಿ, ಕೋಗನೂರು, ಕಡಕೋಳ, ಮಜ್ಜೂರು, ಮಾಗಡಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಅಗತ್ಯತೆ ಮತ್ತು ಹಳ್ಳಿಗಳ ಸಾಮೀಪ್ಯವನ್ನು ಆಧರಿಸಿ ಒಟ್ಟು 31 ಗ್ರಾಮಗಳಲ್ಲಿ ಮೇವು ಬ್ಯಾಂಕ್ ತೆರೆಯಲು ಜಿಲ್ಲಾಡಳಿತ ಅಂತಿಮ ಹಂತದಲ್ಲಿದೆ.

838412 ಪ್ರಾಣಿಗಳಿಗೆ ಮೇವು: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಪಶುಪಾಲನಾ ಇಲಾಖೆಯ ಗಣತಿ ಆಧಾರದಲ್ಲಿ ಒಟ್ಟು 838412 ಪ್ರಾಣಿಗಳಿದ್ದು, ಅವುಗಳಲ್ಲಿ 145708 ಎತ್ತು, ಆಕಳು, ಎಮ್ಮೆಗಳಿದ್ದರೆ 692704 ಆಡು ಮತ್ತು ಕುರಿಗಳಿವೆ. ಇದರೊಟ್ಟಿಗೆ 8544 ಸಣ್ಣ ಮತ್ತು ಇತರೆ ಜಾನುವಾರುಗಳು ಇವೆ. ಇವುಗಳಿಗೆ ಬೇಕಾಗುವ ಮೇವು ಸಂಗ್ರಹಣೆಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಅಗತ್ಯಕ್ಕೆ ತಕ್ಕಂತೆ ಮೇವು: ಬರಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ಅಥವಾ ಅಗತ್ಯಕ್ಕೆ ತಕ್ಕಂತೆ ಮೇವು ಪೂರೈಸಲಾಗುವುದು. ರೈತರು ಧೈರ್ಯಗೆಡಬಾರದು ಹಾಗೂ ಮೇವಿನ ಲಭ್ಯತೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ತಿಳಿಸಿದರು.ಎಲ್ಲೆಲ್ಲಿ ಮೇವು ಬ್ಯಾಂಕ್‌?

ಗದಗ 6, ಶಿರಹಟ್ಟಿ 6, ಗಜೇಂದ್ರಗಡ 4, ಲಕ್ಷ್ಮೇಶ್ವರ 4, ಮುಂಡರಗಿ 4, ರೋಣ 4, ನರಗುಂದ ತಾಲೂಕಿನ 3 ಗ್ರಾಮಗಳಲ್ಲಿ ಬರಗಾಲದ ತೀವ್ರತೆ ಹೀಗೆಯೇ ಮುಂದುವರಿದಲ್ಲಿ ಮೇವು ಬ್ಯಾಂಕ್ ಸ್ಥಾಪನೆಯಾಗಲಿವೆ.21ಜಿಡಿಜಿ20

ಗದಗ ಮಾರುಕಟ್ಟೆಯಲ್ಲಿ ಮೇವು ಮಾರಾಟಕ್ಕೆ ಬಂದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯ ಸಚಿವ ಖಾದರ್‌ಗೆ ‘ಎಎಂಇಸಿ ಗ್ಲೋಬಲ್‌ ಸಿವಿಕ್‌ ಲೀಡರ್‌ಶಿಪ್’ ಪ್ರಶಸ್ತಿ
ಎಸ್ಐಆರ್‌ ಮಹಾ ಅಭಿಯಾನ: ಶಾಸಕರ ವಾರ್ಡ್‌ ಭೇಟಿ