ಅಂಕೋಲಾದಲ್ಲಿ ಕಿರುಚಿತ್ರಗಳ ಟ್ರೆಂಡ್ ಜೋರು

KannadaprabhaNewsNetwork |  
Published : Jul 23, 2026, 02:30 AM IST
ಬಿಡುಗಡೆಗೊಳ್ಳಲಿರುವ ಬಕೆಟಟ್ ರಾಜಾ ಕಿರು ಚಿತ್ರ  | Kannada Prabha

ಸಾರಾಂಶ

ಒಂದು ಕಾಲದಲ್ಲಿ ದೊಡ್ಡ ಪರದೆಯ ಸಿನಿಮಾ ನಿರ್ಮಾಣವೇ ಕಲಾವಿದರ ಕನಸಾಗಿತ್ತು. ಆದರೆ ತಂತ್ರಜ್ಞಾನದ ಬೆಳವಣಿಗೆ, ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆ ಹಾಗೂ ಉತ್ತಮ ಗುಣಮಟ್ಟದ ಮೊಬೈಲ್ ಕ್ಯಾಮೆರಾಗಳ ಲಭ್ಯತೆಯಿಂದ ಈಗ ಕಿರುಚಿತ್ರಗಳ ನಿರ್ಮಾಣ ಹೊಸ ಟ್ರೆಂಡ್ ಆಗಿ ಬೆಳೆಯುತ್ತಿದೆ.

ಯುವ ಪ್ರತಿಭೆಗಳ ಸೃಜನಶೀಲ ಪಯಣ । ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆ

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಒಂದು ಕಾಲದಲ್ಲಿ ದೊಡ್ಡ ಪರದೆಯ ಸಿನಿಮಾ ನಿರ್ಮಾಣವೇ ಕಲಾವಿದರ ಕನಸಾಗಿತ್ತು. ಆದರೆ ತಂತ್ರಜ್ಞಾನದ ಬೆಳವಣಿಗೆ, ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆ ಹಾಗೂ ಉತ್ತಮ ಗುಣಮಟ್ಟದ ಮೊಬೈಲ್ ಕ್ಯಾಮೆರಾಗಳ ಲಭ್ಯತೆಯಿಂದ ಈಗ ಕಿರುಚಿತ್ರಗಳ ನಿರ್ಮಾಣ ಹೊಸ ಟ್ರೆಂಡ್ ಆಗಿ ಬೆಳೆಯುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿಯೂ ಈ ಟ್ರೆಂಡ್ ವೇಗ ಪಡೆದುಕೊಂಡಿದ್ದು, ಸ್ಥಳೀಯ ಯುವಕರು ತಮ್ಮ ಸೃಜನಶೀಲತೆ, ಅಭಿನಯ ಹಾಗೂ ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಹೊಸ ಗುರುತನ್ನು ಮೂಡಿಸುತ್ತಿದ್ದಾರೆ.

ಕಡಿಮೆ ವೆಚ್ಚದಲ್ಲಿ ಉತ್ತಮ ಕಥಾಹಂದರ, ಪರಿಣಾಮಕಾರಿ ಸಂದೇಶ ಮತ್ತು ಗುಣಮಟ್ಟದ ಚಿತ್ರೀಕರಣದ ಮೂಲಕ ಕಿರುಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಯೂಟ್ಯೂಬ್ ಸೇರಿ ವಿವಿಧ ಡಿಜಿಟಲ್ ವೇದಿಕೆಗಳು ಪ್ರತಿಭಾವಂತರಿಗೆ ಉತ್ತಮ ಅವಕಾಶ ಕಲ್ಪಿಸುತ್ತಿದ್ದು, ಗ್ರಾಮೀಣ ಭಾಗದ ಕಲಾವಿದರೂ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವಂತಾಗಿದೆ.

ಅಂಕೋಲಾದ ಹಲವು ಯುವ ತಂಡಗಳು ಸಮಕಾಲೀನ ಸಾಮಾಜಿಕ ಸಮಸ್ಯೆಗಳು, ಪರಿಸರ ಸಂರಕ್ಷಣೆ, ಕುಟುಂಬ ಮೌಲ್ಯಗಳು, ಸ್ನೇಹ, ಗ್ರಾಮೀಣ ಬದುಕು ಹಾಗೂ ಹಾಸ್ಯಮಯ ಕಥಾಹಂದರಗಳನ್ನು ಆಧರಿಸಿ ಕಿರುಚಿತ್ರಗಳನ್ನು ನಿರ್ಮಿಸುತ್ತಿವೆ. ಸ್ಥಳೀಯ ಕಲಾವಿದರು, ಛಾಯಾಗ್ರಾಹಕರು, ಸಂಕಲನಕಾರರು ಹಾಗೂ ಸಂಗೀತ ನಿರ್ದೇಶಕರು ಒಂದೇ ವೇದಿಕೆಯಲ್ಲಿ ಕೆಲಸ ಮಾಡುವ ಮೂಲಕ ಹೊಸ ಪ್ರತಿಭೆಗಳ ಬೆಳವಣಿಗೆಗೆ ಕಾರಣವಾಗಿದ್ದಾರೆ.

ಈ ಸಾಲಿನಲ್ಲಿ ಭಾವಿಕೇರಿಯ ಲಕ್ಕಿ ಬಾಯ್ಸ್ ತಂಡವೂ ಗಮನ ಸೆಳೆದಿದೆ. ತಂಡದ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ನಾಯ್ಕ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಬಕೆಟ್ ರಾಜಾ ಕಿರುಚಿತ್ರ ಈಗಾಗಲೇ ಕಿರುಚಿತ್ರ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ವಿಭಿನ್ನ ಕಥಾಹಂದರ ಹಾಗೂ ಮನರಂಜನೆಯ ಅಂಶಗಳನ್ನು ಒಳಗೊಂಡಿರುವ ಈ ಕಿರುಚಿತ್ರವು ಜು. 22 ರಂದು ಅವರ್ಸಾದಲ್ಲಿ ಬಿಡುಗಡೆಯಾಗಲಿದೆ. ಕಿರುಚಿತ್ರದ ಬಿಡುಗಡೆಯು ಸ್ಥಳೀಯ ಕಲಾಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಿದೆ.

ಕಿರುಚಿತ್ರಗಳು ಕೇವಲ ಮನರಂಜನೆಯ ಮಾಧ್ಯಮವಾಗಿಯೇ ಉಳಿಯದೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪರಿಣಾಮಕಾರಿ ಸಾಧನವಾಗಿಯೂ ರೂಪುಗೊಳ್ಳುತ್ತಿವೆ. ಯುವಕರಲ್ಲಿ ಆತ್ಮವಿಶ್ವಾಸ ಬೆಳೆಸುವುದು, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಹಾಗೂ ಸ್ಥಳೀಯ ಸಂಸ್ಕೃತಿ ಮತ್ತು ಪ್ರತಿಭೆಯನ್ನು ದಾಖಲಿಸುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತಿವೆ.

ಅಂಕೋಲಾದ ಯುವಕರು ಇದೇ ಉತ್ಸಾಹ ಮತ್ತು ಗುಣಮಟ್ಟ ಮುಂದುವರಿಸಿದರೆ, ಭವಿಷ್ಯದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸುವ ಸಾಧ್ಯತೆ ಹೆಚ್ಚಿದೆ. ಸ್ಥಳೀಯ ಮಟ್ಟದಲ್ಲಿ ಆರಂಭವಾಗಿರುವ ಈ ಕಿರುಚಿತ್ರದ ಅಭಿರುಚಿ ಮುಂದಿನ ದಿನಗಳಲ್ಲಿ ಅಂಕೋಲಾದ ಅನೇಕ ಪ್ರತಿಭಾವಂತರನ್ನು ಬೆಳಕಿಗೆ ತರುವ ಆಶಯ ವ್ಯಕ್ತವಾಗಿದೆ. ಜನರಲ್ಲಿ ಧಾವಂತದ ಬದುಕಿನತ್ತ ವಾಲುತ್ತಿದ್ದಾರೆ. ಹಾಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣವಾದ ಕಿರು ಚಿತ್ರಗಳತ್ತ ಜನರು ಆಕರ್ಷಿಸುತ್ತಿದ್ದಾರೆ. ಕಿರುಚಿತ್ರ ನಿರ್ಮಾಣದಿಂದ ಸೃಜನಶೀಲತೆ ಹಾಗೂ ಪ್ರತಿಭೆ ಹೊರ ಬರಲು ಸಾಧ್ಯವಾಗಿದೆ ಎನ್ನುತ್ತಾರೆ ಕಿರುಚಿತ್ರದ ನಿರ್ದೇಶಕ ಪ್ರಶಾಂತ ನಾಯ್ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯ ಸಚಿವ ಖಾದರ್‌ಗೆ ‘ಎಎಂಇಸಿ ಗ್ಲೋಬಲ್‌ ಸಿವಿಕ್‌ ಲೀಡರ್‌ಶಿಪ್’ ಪ್ರಶಸ್ತಿ
ಎಸ್ಐಆರ್‌ ಮಹಾ ಅಭಿಯಾನ: ಶಾಸಕರ ವಾರ್ಡ್‌ ಭೇಟಿ