ಕಂಪ್ಲಿ-ಕುರುಗೋಡು ಉತ್ಸವ ಅಂಗವಾಗಿ ಪೂರ್ವಭಾವಿ ಸಭೆ ನಡೆಸಿ; ಡಿಸಿ ಸೂಚನೆ

KannadaprabhaNewsNetwork |  
Published : Feb 07, 2026, 03:15 AM IST
ಕಂಪ್ಲಿ ಮತ್ತು ಕುರುಗೋಡು ಉತ್ಸವ ಅಂಗವಾಗಿ ಬಳ್ಳಾರಿ ನೂತನ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ಪೂರ್ವಭಾವಿ ಸಭೆ ನಡೆಸಿದರು.  | Kannada Prabha

ಸಾರಾಂಶ

ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಇಚ್ಛಾಶಕ್ತಿಯಂತೆ ಫೆ.11, 12ರಂದು ಕಂಪ್ಲಿ ಉತ್ಸವ ಮತ್ತು ಫೆ.15, 16 ರಂದು ಕುರುಗೋಡು ಉತ್ಸವ ಆಯೋಜಿಸಲು ನಿರ್ಧರಿಸಲಾಗಿದೆ.

ಬಳ್ಳಾರಿ: ಜಿಲ್ಲೆಯಲ್ಲಿ ಕಂಪ್ಲಿ ಮತ್ತು ಕುರುಗೋಡು ಉತ್ಸವಗಳನ್ನು ಆಯೋಜಿಸಲಾಗಿದ್ದು, ಎಲ್ಲ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡುವ ಮೂಲಕ ಉತ್ಸವಗಳನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.

ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕಂಪ್ಲಿ ಮತ್ತು ಕುರುಗೋಡು ಉತ್ಸವ ಅಂಗವಾಗಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಇಚ್ಛಾಶಕ್ತಿಯಂತೆ ಫೆ.11, 12ರಂದು ಕಂಪ್ಲಿ ಉತ್ಸವ ಮತ್ತು ಫೆ.15, 16 ರಂದು ಕುರುಗೋಡು ಉತ್ಸವ ಆಯೋಜಿಸಲು ನಿರ್ಧರಿಸಲಾಗಿದೆ. ಈಗಾಗಲೇ ಸಿದ್ಧತಾ ಕಾರ್ಯ ಆರಂಭಗೊಂಡಿದೆ. ಹಾಗಾಗಿ ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಕಂಪ್ಲಿ ಉತ್ಸವದ ಅಂಗವಾಗಿ ಫೆ.11ರಂದು ಸಂಜೆ ಕಂಪ್ಲಿ ಕೋಟೆ ಪಂಪಾಪತಿ ದೇವಸ್ಥಾನದಿಂದ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಭವ್ಯ ಮೆರವಣಿಗೆ ನಡೆಯಲಿವೆ. ಸೋಮಪ್ಪ ಕೆರೆ ಆವರಣ ತಲುಪಿದ ಬಳಿಕ ವಾರಣಾಸಿ ಅರ್ಚಕರಿಂದ ತುಂಗಾರತಿ ನಡೆಯಲಿದೆ. ಬಳಿಕ ಪಟ್ಟಣದ ಸುಂದರಿ ಸಕ್ಕರೆ ಕಾರ್ಖಾನೆಯ ಮೈದಾನದಲ್ಲಿ ಅಂದು ಸಂಜೆ ಸ್ಥಳೀಯ ಕಲಾವಿದರಿಂದ ಸಂಗೀತ ಗಾಯನ, ಬಯಲಾಟ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೇಕಾದ ಎಲ್ಲಾ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಫೆ.12 ರಂದು ಸಂಜೆ ‘ಕಂಪ್ಲಿ ಉತ್ಸವ’ದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಬಳಿಕ ಖ್ಯಾತ ಗಾಯಕ ಚಂದನ್ ಶೆಟ್ಟಿ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಲಾವಿದರಿಗೆ ತಂಗಲು ವ್ಯವಸ್ಥೆ ಮಾಡಬೇಕು. ವೇದಿಕೆ ನಿರ್ಮಾಣ, ಸ್ವಚ್ಛತಾ ಕಾರ್ಯ, ಬೆಳಕು ವ್ಯವಸ್ಥೆ, ಕಲಾವಿದರ ಆಯ್ಕೆ ಪ್ರಕ್ರಿಯೆ ಸೇರಿದಂತೆ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಬೇಕು. ಹೆಚ್ಚುವರಿ ಸಾರಿಗೆ ವ್ಯವಸ್ಥೆ, ಆಗ್ನಿಶಾಮಕ, ಆ್ಯಂಬುಲೆನ್ಸ್ ವ್ಯವಸ್ಥೆ ಇರಿಸಿಕೊಳ್ಳಬೇಕು ಎಂದು ಸೂಚಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಬೇಕು. ಎರಡು ದಿನಗಳ ಉತ್ಸವದಲ್ಲಿ ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮೆಹೆಂದಿ ಸ್ಪರ್ಧೆ, ಅಡುಗೆ ಸ್ಪರ್ಧೆ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಸಿಂಗರಿಸಿದ ಎತ್ತಿನಗಾಡಿಗಳ ಜಾಥಾ, ಗ್ರಾಮೀಣ ಕ್ರೀಡೆಗಳು ಹಾಗೂ ವಿವಿಧ ಇಲಾಖೆಗಳ ಮಾಹಿತಿ ಒಳಗೊಂಡ ಮಳಿಗೆಗಳು ಇರಲಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಫೆ.15, 16ರಂದು ಕುರುಗೋಡು ಉತ್ಸವ: ಅದೇ ರೀತಿಯಾಗಿ ಫೆ.15, 16 ರಂದು ಕುರುಗೋಡು ಉತ್ಸವವನ್ನು ಸಹ ಆಯೋಜಿಸಲಾಗಿದೆ. ಫೆ.15ರಂದು ಸಂಜೆ ಜಾನಪದ ಕಲಾತಂಡಗಳಿಂದ ಭವ್ಯ ಮೆರವಣಿಗೆ, ಬಳಿಕ ತುಂಗಾರತಿ ನಡೆಯಲಿದೆ. ಫೆ.16ರಂದು ಉತ್ಸವದ ಉದ್ಘಾಟನೆ ನೆರವೇರಲಿದೆ. ಅಧಿಕಾರಿಗಳಿಗೆ ಈಗಾಗಲೇ ತಮಗೆ ವಹಿಸಿದ ಕೆಲಸಗಳನ್ನು ಯಥಾವತ್ತಾಗಿ ಇಲ್ಲಿಯೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್., ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕಂಪ್ಲಿ ತಹಶೀಲ್ದಾರ ಜೂಗಲ ಮಂಜುನಾಯಕ, ಕುರುಗೋಡು ತಹಶೀಲ್ದಾರ ನರಸಪ್ಪ, ತೋರಣಗಲ್ಲು ಡಿವೈಎಸ್‌ಪಿ ಪ್ರಸಾದ್ ಗೋಖಲೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು, ತಾಪಂ ಇಒಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ
ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌