ರೈಲ್ವೆಯಿಂದ ಮತ್ತೆ ಕನ್ನಡಕ್ಕೆ ಅನ್ಯಾಯ

KannadaprabhaNewsNetwork |  
Published : Feb 07, 2026, 03:15 AM ISTUpdated : Feb 07, 2026, 07:01 AM IST
Railway

ಸಾರಾಂಶ

ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ಕೊಡಬೇಕೆಂಬ ನೀತಿ ಇದ್ದರೂ, ಸ್ಟೇಷನ್‌ ಮಾಸ್ಟರ್‌ ಹುದ್ದೆಗಳ ಮುಂಬಡ್ತಿ ಪರೀಕ್ಷೆಯಿಂದ ಕನ್ನಡವನ್ನು ಕೈಬಿಟ್ಟು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ರೈಲ್ವೆ ಇಲಾಖೆ ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿದೆ.

ಅಜೀಜ ಅಹ್ಮದ ಬಳಗಾನೂರ

 ಹುಬ್ಬಳ್ಳಿ :  ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ಕೊಡಬೇಕೆಂಬ ನೀತಿ ಇದ್ದರೂ, ಸ್ಟೇಷನ್‌ ಮಾಸ್ಟರ್‌ ಹುದ್ದೆಗಳ ಮುಂಬಡ್ತಿ ಪರೀಕ್ಷೆಯಿಂದ ಕನ್ನಡವನ್ನು ಕೈಬಿಟ್ಟು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ರೈಲ್ವೆ ಇಲಾಖೆ ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿದೆ. ಕಿರಿಯ ಅಭಿಯಂತರ (ಜೂನಿಯರ್‌ ಎಂಜಿನಿಯರ್‌/ಹಳಿ ನಿರ್ವಹಣೆ) ಹಾಗೂ ತಂತ್ರಜ್ಞ ಗ್ರೇಡ್‌-।।। (ಟೆಕ್‌-3 ಎಲ್‌ಡಿಸಿಇ) ಮುಂಬಡ್ತಿ ಹುದ್ದೆಗಳಿಗೂ ಬರೀ ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಷ್ಟೇ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಆ ಮೂಲಕ ಕನ್ನಡಿಗರಿಗೆ ಮತ್ತೆ ಅನ್ಯಾಯ ಮಾಡಲಾಗಿದೆ.

ಕಿರಿಯ ಅಭಿಯಂತರರ 20 (ಎಸ್‌ಸಿ-05, ಎಸ್‌ಟಿ-02, ಸಾಮಾನ್ಯ-13) ಹಾಗೂ ತಂತ್ರಜ್ಞ ಗ್ರೇಡ್‌-।।। 55 (ಸಾಮಾನ್ಯ-39, ಎಸ್‌ಸಿ-08, ಎಸ್‌ಟಿ-06, ಅಂಗವಿಕಲ-02) ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಸಂಬಂಧ ಅರ್ಜಿ ಸಲ್ಲಿಸಲು ಫೆ.4 ಹಾಗೂ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದ್ದು, ಅದರಲ್ಲಿ ಕನ್ನಡವನ್ನು ಹೊರಗಿಡಲಾಗಿದೆ. ಇಂಗ್ಲಿಷ್‌, ಹಿಂದಿಯಲ್ಲಿ ಪರೀಕ್ಷೆ ಬರೆಯುವಂತೆ ಸೂಚಿಸಲಾಗಿದೆ.

ರೈಲ್ವೆ ಸಚಿವಾಲಯವು ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ರೈಲ್ವೆ ಪರೀಕ್ಷೆಗಳನ್ನು ನಡೆಸಬೇಕೆಂಬ ಆದೇಶ 1992ರ ಜುಲೈ 8ರಿಂದಲೂ ಇದೆ. ವಿಭಾಗ ಮಟ್ಟದಲ್ಲಿ ನಡೆಯುವಂತಹ ಎಲ್ಲ ಪರೀಕ್ಷೆಗಳಲ್ಲಿ 3 ಭಾಷೆಯಲ್ಲಿ ಅಂದರೆ ಇಂಗ್ಲಿಷ್, ಹಿಂದಿ ಹಾಗೂ ಆಯಾ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷಾ ಪತ್ರಿಕೆ ಇರಬೇಕೆಂಬ ನಿಯಮವಿದೆ. ಆದರೂ, ನೈಋತ್ಯ ರೈಲ್ವೆ ವಲಯದಲ್ಲಿ ನಡೆದ ಎಲ್ಲ ಮುಂಬಡ್ತಿ ಪರೀಕ್ಷೆಗಳಲ್ಲಿ ಹಾಗೂ ಇತ್ತೀಚೆಗೆ ಹೊರಡಿಸಲಾದ ಅಧಿಸೂಚನೆಯಲ್ಲಿ ಕನ್ನಡ ಭಾಷೆಯನ್ನು ತೆಗೆದು ಹಾಕಲಾಗಿದೆ.

ಇದೇ ಇಲಾಖೆಯಲ್ಲಿ ಆರ್‌ಆರ್‌ಬಿ, ಆರ್‌ಆರ್‌ಸಿ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮುಂಬಡ್ತಿ ಪಡೆಯಲು, ವಿವಿಧ ಉನ್ನತ ಹುದ್ದೆಗಳಿಗೆ ಅರ್ಜಿ ಹಾಕಿದರೆ ಅಲ್ಲಿ ಹಿಂದಿ ಮತ್ತು ಇಂಗ್ಲೀಷ್‌ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಅನ್ಯಭಾಷಿಕರ ಲಾಬಿ:

ರಾಜ್ಯದ ರೈಲ್ವೆ ಇಲಾಖೆಯ ಬಹುತೇಕ ಉನ್ನತ ಹುದ್ದೆಗಳಲ್ಲಿ ಕನ್ನಡಿಗರಿಗಿಂತ ಹಿಂದಿ, ತೆಲುಗು, ತಮಿಳರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕನ್ನಡಿಗರಿಗೆ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶ ನೀಡಿದರೆ ಅವರೂ ಮುಂಬಡ್ತಿ ಪಡೆಯುತ್ತಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ ಎಂಬ ಕಾರಣಕ್ಕೆ ರೈಲ್ವೆ ಆದೇಶವನ್ನೂ ಮೀರಿ ಪ್ರಾದೇಶಿಕ ಭಾಷೆ ಬಿಟ್ಟು ಕೇವಲ ಹಿಂದಿ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ ಪರೀಕ್ಷೆ ನಡೆಸುತ್ತಾರೆ ಎಂಬ ಆರೋಪ ಕನ್ನಡಿಗ ನೌಕರರದ್ದು. ಈ ಬಗ್ಗೆ ಅಧಿಕಾರಿ ವರ್ಗವನ್ನು ಕೇಳಿದರೆ ಕಂಪ್ಯೂಟರ್‌ ಕನ್ನಡ ಭಾಷೆ ತೆಗೆದುಕೊಳ್ಳುತ್ತಿಲ್ಲ. ಸಾಫ್ಟ್‌ವೇರ್‌ ಅಪ್‌ಡೇಟ್‌ ಆಗಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ.

ಸಚಿವರ ಸೂಚನೆಗೂ ಬೆಲೆಯಿಲ್ಲ:

ಕಳೆದ ಆಗಸ್ಟ್‌ 24, 2024ರಲ್ಲಿ ಬೆಂಗಳೂರು ವಿಭಾಗದಲ್ಲಿ ಸ್ಟೇಷನ್‌ ಮಾಸ್ಟರ್‌, ಗೂಡ್ಸ್‌ ಟ್ರೈನ್‌ ಮ್ಯಾನೇಜರ್‌ ಹುದ್ದೆಗಳಿಗೆ ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಅರ್ಜಿ ಆಹ್ವಾನಿಸಿ ಪರೀಕ್ಷೆ ಬರೆಸಲಾಗಿತ್ತು. ನಂತರ, ಈ ಅಧಿಸೂಚನೆ ರದ್ದುಗೊಳಿಸಿ ಪುನಃ ಡಿಸೆಂಬರ್‌ 2, 2025ರಲ್ಲಿ ಪರೀಕ್ಷೆ ನಡೆಸಲಾಯಿತು. ಆದರೆ, ಅಲ್ಲಿ ಹಿಂದಿನ ಆದೇಶದಂತೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಸಲಾಗುತ್ತದೆ ಎಂದುಕೊಂಡು ಪರೀಕ್ಷೆ ಬರೆಯಲು ಹೋಗಿದ್ದ ಅಭ್ಯರ್ಥಿಗಳಿಗೆ ಆಘಾತ ಎದುರಾಗಿತ್ತು. ಅಂದಿನ ಪರೀಕ್ಷೆಯಲ್ಲಿ ಕನ್ನಡವೇ ಮಾಯವಾಗಿತ್ತು. ಅನಿವಾರ್ಯವಾಗಿ ಅನ್ಯ ಭಾಷೆಯಲ್ಲಿ ಪರೀಕ್ಷೆ ಬರೆದು ಬಂದಿದ್ದರು. ಈ ಆದೇಶ ರದ್ದುಗೊಳಿಸಿ ಕನ್ನಡ ಭಾಷೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಹಲವು ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಕೇಂದ್ರ ಸಚಿವ ವಿ.ಸೋಮಣ್ಣ ಅವರು ಈ ಆದೇಶ ಹಿಂಪಡೆಯುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈವರೆಗೂ ಹಿಂಪಡೆದಿಲ್ಲ. ಇದರಿಂದಾಗಿ ಸಚಿವರ ಸೂಚನೆಗೂ ಬೆಲೆಯಿಲ್ಲದಂತಾಗಿದೆ.

6 ತಿಂಗಳಲ್ಲಿ 6 ಕನ್ನಡ ಇಲ್ಲದ ಬಡ್ತಿ ಪರೀಕ್ಷೆಗಳು!

ಮುಂಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ರೈಲ್ವೆ ಇಲಾಖೆ ಅವಕಾಶ ಕೊಡುತ್ತಿಲ್ಲ. ಆರು ತಿಂಗಳ ಅವಧಿಯಲ್ಲಿ ಒಟ್ಟು 6 ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ.

1. ಜಿಟಿಎಂಆರ್‌ (ಗೂಡ್ಸ್‌ ಟ್ರೈನ್‌ ಮ್ಯಾನೇಜರ್‌) ಮುಂಬಡ್ತಿಗೆ 2024ರ ಆ.24ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಕನ್ನಡಕ್ಕೆ ಅವಕಾಶ ಇರಲಿಲ್ಲ

2. ಪ್ರಿನ್ಸಿಪಲ್‌ ಚೀಫ್ ಆಫೀಸರ್‌ (ಪಿಸಿಒ) ಹುದ್ದೆಗಳ ಬಡ್ತಿಗೆ 2024ರ ಆ.3ರಂದು ಅಧಿಸೂಚನೆ ಹೊರಬಿತ್ತು. ಕನ್ನಡಕ್ಕೆ ಅವಕಾಶವಿರಲಿಲ್ಲ

3. ಬೆಂಗಳೂರು ವಿಭಾಗದ ಗೂಡ್ಸ್‌ ಟ್ರೇನ್‌ ಮ್ಯಾನೇಜರ್‌ ಹುದ್ದೆ ಬಡ್ತಿಗೆ 2025ರ ಡಿ.11ರಂದು ಕನ್ನಡ ಅವಕಾಶವಿಲ್ಲದ ಅಧಿಸೂಚನೆ

4. ಸ್ಟೇಷನ್‌ ಮಾಸ್ಟರ್‌ ಹುದ್ದೆಗಳಿಗೆ ಬಡ್ತಿ ನೀಡಲು 2026ರ ಜ.31ರಂದು ಅಧಿಸೂಚನೆ. ಕನ್ನಡದಲ್ಲಿ ಬರೆಯುವ ಆಯ್ಕೆಯೇ ಇರಲಿಲ್ಲ

5. ಜೂನಿಯರ್‌ ಎಂಜಿನಿಯರ್‌/ಟ್ರ್ಯಾಕ್‌ ಮೇಂಟೆನನ್ಸ್‌ ಹುದ್ದೆಗೆ 2026ರ ಫೆ.4ರಂದು ಅಧಿಸೂಚನೆ ಪ್ರಕಟ. ಅದರಲ್ಲೂ ಕನ್ನಡ ಇಲ್ಲ

6. ತಂತ್ರಜ್ಞ ಗ್ರೇಡ್‌-।।। (ಟೆಕ್‌-3 ಎಲ್‌ಡಿಸಿಇ) ಹುದ್ದೆಗಳಿಗೆ ಬಡ್ತಿ ಕೊಡಲು 2026ರ ಫೆ.6ರಂದು ಅಧಿಸೂಚನೆ.

ಯಥಾಪ್ರಕಾರ ಕನ್ನಡ ಇಲ್ಲ

ಕನ್ನಡ ಇಲ್ಲದ್ದಕ್ಕೆ ಗಣಕಸಮಸ್ಯೆ ಕಾರಣವಂತೆರೈಲ್ವೆ ಇಲಾಖೆಯಲ್ಲಿನ ಮುಂಬಡ್ತಿ ಪರೀಕ್ಷೆಗಳು ಕಂಪ್ಯೂಟರ್‌ ಆಧಾರಿತ ಪರೀಕ್ಷೆ (ಸಿಬಿಟಿ) ಆಗಿರುವುದರಿಂದ ಇಂಗ್ಲಿಷ್, ಹಿಂದಿ ಭಾಷೆ ಮಾತ್ರ ತೋರಿಸುತ್ತಿದೆ. ಆಗಿರುವ ಸಮಸ್ಯೆ ಕುರಿತು ಈಗಾಗಲೇ ರೈಲ್ವೆ ಬೋರ್ಡ್‌ನ ಗಮನಕ್ಕೆ ತರಲಾಗಿದೆ. ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರೈಲ್ವೆ ಬೋರ್ಡ್‌ನ ನಿರ್ದೇಶನದಂತೆ ಪರೀಕ್ಷೆ ನಡೆಸಲಾಗುತ್ತಿದೆ.- ಮಂಜುನಾಥ ಕನಮಡಿ, ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ