ಸಂಡೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ವಿಕಸಿತ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಈ ಯೋಜನೆಯ ಉಪಯುಕ್ತತೆಯ ಕುರಿತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮಗಳಲ್ಲಿ ಜನತೆಗೆ ತಿಳಿಸುವ ಮೂಲಕ ಯೋಜನೆಯ ಯಶಸ್ವಿಗೆ ಶ್ರಮಿಸೋಣ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.
ನಕಲಿ ಗಾಂಧಿವಾದಿಗಳು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಮತ್ತು ಯೋಜನೆಯ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಮನರೇಗಾ ಯೋಜನೆ ಅಡಿಯಲ್ಲಿ ನಿಜವಾದ ಕೂಲಿ ಕಾರ್ಮಿಕರಿಗೆ ಕೂಲಿ ಸಮರ್ಪಕವಾಗಿ ನಿಗದಿತ ಸಮಯಕ್ಕೆ ತಲುಪುತ್ತಿದ್ದಿಲ್ಲ. ನಕಲಿ ಜಾಬ್ ಕಾರ್ಡ್ಗಳ ಹಾವಳಿ ಹೆಚ್ಚಾಗಿತ್ತು. ಹೊಸ ಯೋಜನೆಯಲ್ಲಿ ಇದಕ್ಕೆ ಆಸ್ಪದವಿಲ್ಲ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಮಾತನಾಡಿ, ೨೦೪೭ರ ಹೊತ್ತಿಗೆ ವಿಕಸಿತ ಭಾರತ ನಿರ್ಮಾಣದ ಉದ್ದೇಶದ ಅಂಗವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಮನರೇಗ ಯೋಜನೆಯಡಿ ಹೆಚ್ಚಾಗಿ ಗುಂಡಿ ತೆಗೆಯುವುದು, ಗುಂಡಿ ಮುಚ್ಚುವ ಕೆಲಸಗಳು ಆಗುತ್ತಿದ್ದವು. ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ೧೬೭ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಈ ಹಿಂದೆ ಇದ್ದ ೧೦೦ ಕೆಲಸದ ದಿನಗಳನ್ನು ೧೨೫ ದಿನಗಳಿಗೆ ಹೆಚ್ಚಿಸಲಾಗಿದೆ. ಬಯೋಮೆಟ್ರಿಕ್ ಹಾಜರಾತಿ, ಜಿಪಿಎಸ್ ವ್ಯವಸ್ಥೆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುತ್ತಿದೆ. ಇಂತಹ ಉತ್ತಮ ಯೋಜನೆಯ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಲು ಶ್ರಮಿಸೋಣ ಎಂದರು.ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ಅಶೋಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಮೋಕಾ, ಮುಖಂಡರಾದ ರಾಮಕೃಷ್ಣ, ಬಪ್ಪಕಾನ್ ಕುಮಾರಸ್ವಾಮಿ, ರಾಮರಾವ್ ಮುಂತಾದವರು ಮಾತನಾಡಿದರು.