ಹೊಸಕೋಟೆ: ಮುಂದಿನ ಒಂದೆರಡು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ನಗರ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೂಲ ಸೌಕರ್ಯಗಳಿಗೆ ಮಾತ್ರ ಕರಡು ಅಭಿವೃದ್ಧಿ ಯೋಜನೆಯಡಿ ಬೇಡಿಕೆ ಪಟ್ಟಿ ಸಿದ್ದಪಡಿಸಬೇಡಿ, ಮುಂದಿನ ಕನಿಷ್ಠ ೫ ವರ್ಷಕ್ಕೂ ಮೀರಿ ಬೇಕಾದ ಅವಶ್ಯಕತೆಗಳನ್ನು ಹುಡುಕಿ ಕರಡು ಪ್ರತಿ ಸಿದ್ದಗೊಳಿಸಿ ಸರ್ಕಾರಕ್ಕೆ ನೀಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೊಟೆ ತಾಲೂಕು ವೇಗವಾಗಿ ಬೆಳೆಯುತ್ತಿದೆ, ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡುವ ಆಶಯವಿದೆ, ಕೇವಲ ನೀರು, ಮೋರಿ, ರಸ್ತೆ, ಬೀದಿ ದೀಪಗಳು ಮಾತ್ರ ಸಾರ್ವಜನಿಕ ಮೂಲ ಸೌಕರ್ಯಗಳಲ್ಲ. ಇದರ ಜೊತೆ ಕುಸುಮ್ ಯೋಜನೆಯಡಿ ಸೋಲಾರ್ ಅಳವಡಿಕೆ ಮಾಡಿ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಸರ್ಕಾರಿ ಗೋಮಾಳಗಳಲ್ಲಿ, ಕೆರೆಯಂಗಳದಲ್ಲಿ ಸೋಲಾರ್ ಉತ್ಪಾದಿಸಿ ವಿದ್ಯುತ್ ಬಳಕೆ, ಮಳೆ ನೀರು ಕೊಯ್ಲು, ನಗರದ ವ್ಯಾಪ್ತಿಯಲ್ಲಿ ೨೪ ಗಂಟೆ ವಿದ್ಯುತ್, ನೀರು ಸರಬರಾಜಿಗೆ ಕಾವೇರಿ ನೀರು, ನೂತನ ಉದ್ಯಾನವನಗಳ ನಿರ್ಮಾಣ, ಬೀದಿ ದೀಪ ನಿರ್ವಹಣೆ, ನೈರ್ಮಲ್ಯ ಕಾಪಾಡಲು, ಕೃಷಿ ಸಂಬಂಧ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಗ್ರಾಮಗಳಿಗೆ ಉತ್ತಮ ಸಾರಿಗೆ ನೀಡುವ ನಿಟ್ಟಿನಲ್ಲಿ ಈಗಾಗಲೆ 2 ಎಲೆಕ್ರಿಕ್ ಬಸ್ ಡಿಪೋ ಸ್ಥಾಪನೆಗೆ ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದರು.
ನಂದಗುಡಿ ಹಾಗೂ ಅನುಗೊಂಡನಹಳ್ಳಿ ಭಾಗದಲ್ಲಿ ಒಂದು ಘಟಕ ಸ್ಥಾಪನೆಗೆ ಕನಿಷ್ಠ 5 ಎಕರೆ ಸರ್ಕಾರಿ ಜಾಗದ ಅವಶ್ಯಕತೆಯಿದೆ. ಕಂದಾಯ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕಗೊಳ್ಳುವಿಕೆ, ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ, ರಾಸುಗಳ ಪಾರಂ ಸ್ಥಾಪನೆ, ಬ್ರೀಡಿಂಗ್ ಕೇಂದ್ರಗಳ ಬೇಡಿಕೆ, ಕೇವಲ ಶಾಲಾ ಕಟ್ಟಡ ದುರಸ್ತಿ ಮಾತ್ರವಲ್ಲದೆ, ಮ್ಯಾಗ್ನೆಟ್ ಶಾಲೆ ಸ್ಥಾಪನೆಗೆ ಬೇಕಾದ ಕೆಪಿಎಸ್ ಮಾನದಂಡ ಅಳವಡಿಕೆಗೆ ಸಂಪನ್ಮೂಲ ಕ್ರೂಢೀಕರಣ, ಪ್ರಜಾಸೌಧ, ನಾಡ ಕಚೇರಿಗಳ ನಿರ್ಮಾಣ ಸೇರಿದಂತೆ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮುಂದಿನ 5 ವರ್ಷಕ್ಕೂ ಮೀರಿ ತಾಲೂಕಿಗೆ ಬೇಕಾಗುವ ಸೌಲಭ್ಯಗಳನ್ನು ಪ್ರತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಿಂದ ಎಲ್ಲಾ ಸರ್ಕಾರಿ ಅಧಿಕಾರಿಗಳು ಕರಡು ಪ್ರತಿಯನ್ನು ತಯಾರಿಸಿ ಮುಂದಿನ ಸೋಮವಾರದೊಳಗೆ ಸಲ್ಲಿಸಬೇಕಿದೆ ಎಂದು ಸೂಚಿಸಿದರು.ಸಭೆಯಲ್ಲಿ ತಾಲೂಕು ಪಂಚಾಯತಿ ಇಒ ಮುನಿಯಪ್ಪ, ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.
ಫೋಟೋ: 18 ಹೆಚ್‌ಎಸ್‌ಕೆ 5ಹೊಸಕೋಟೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಕರಡು ಅಭಿವೃದ್ಧಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಶರತ್ ಬಚ್ಚೆಗೌಡ ಅಧಿಕಾರಿಗಳಿಂದಿಗೆ ಚರ್ಚಿಸಿದರು. ತಾಪಂ ಇಒ ಮುನಿಯಪ್ಪ, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಹಾಜರಿದ್ದರು.