ಕನ್ನಡಪ್ರಭ ವಾರ್ತೆ, ಹನೂರು
ದಂಟಳ್ಳಿ ಗ್ರಾಮದ ಮೂಲಕ ಕುರಟ್ಟಿ ಹೊಸೂರು, ಶೆಟ್ಟಳ್ಳಿ, ಕೌದಳ್ಳಿ, ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಅಂತರ್ಜಲ ಮಟ್ಟ ಹೆಚ್ಚಿಸಲು ದಂಟಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿ ಡಿಪಿಆರ್ ಸಿದ್ಧಪಡಿಸಬೇಕು. ಇದಕ್ಕಾಗಿ ಕಳೆದ 96 ದಿನಗಳಿಂದ ನಿರಂತರವಾಗಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಎಂ.ಆರ್. ಮಂಜುನಾಥ್ ಅವರು, ಜ. 15ರೊಳಗೆ ಡಿ.ಪಿ.ಆರ್ ಮಾಡಿಸುತ್ತೇನೆ. ಒಂದೊಮ್ಮೆ ಸಾಧ್ಯವಾಗದಿದ್ದರೆ ನಿಮ್ಮ ಜೊತೆ ಹೋರಾಟಕ್ಕೆ ಕೂರುತ್ತೇನೆ ಎಂದು ಭರವಸೆ ನೀಡಿದ್ದರು. ಜೊತೆಗೆ ಇಬ್ಬರು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಡಿಪಿಆರ್ ಭರವಸೆ ನೀಡಿದ್ದರು, ಎಲ್ಲರ ಭರವಸೆಗಳು ಹುಸಿಯಾಗಿವೆ.ಮುಖಂಡ ನಿಶಾಂತ್ ಮಾತನಾಡಿ, ದಂಟಳ್ಳಿ ಏತ ನೀರಾವರಿ ಯೋಜನೆಯಲ್ಲಿ ಕಳೆದ 96 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿಗಳು ದಿನಾಂಕ ನಿಗದಿ ಮಾಡಿದರೆ ಹೊರತು ಅದನ್ನು ಅನುಷ್ಠಾನಕ್ಕೆ ತರಲಿಲ್ಲ, ಕಳೆದ 97 ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬೆಟ್ಟಕ್ಕೆ ಬಂದಿದ್ದರು. ಸೌಜನ್ಯಕ್ಕೂ ರೈತರನ್ನು ಮಾತನಾಡಿಸಲಿಲ್ಲ ಎಂದರು. ರಾಜ್ಯದ ಹಿರಿಯ ಸಚಿವರು ಕೇವಲ ಯೋಜನೆಯ ಬಗ್ಗೆ ಮಾತನಾಡುತ್ತಾರೆ. ಅದರ ಬದಲು ಏತ ನೀರಾವರಿ ಯೋಜನೆಯ ಮೂಲಕ ನಮ್ಮ ಭಾಗದ ರೈತರಿಗೆ ಕುಡಿಯುವ ನೀರು ಪೂರೈಕೆ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ. ಮಳೆಗಾಲದ ಸಂದರ್ಭದಲ್ಲಿ ನದಿಯ ಮೂಲಕ ನೂರಾರು ಟಿಎಂಸಿ ಸಮುದ್ರದ ಪಾಲಾಗುತ್ತಿದೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಮಾತನಾಡಿ, ಈ ಭಾಗದಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯುವ ನೀರಿನ ಸಮಸ್ಯೆ ಇರುವುದು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಗಳು ಸಹ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಿ ದಿನಾಂಕವನ್ನು ನಿಗದಿ ಮಾಡಿ ರೈತ ಮುಖಂಡರುಗಳ ಜೊತೆ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ದಂಟಳ್ಳಿ ಏತ ನೀರಾವರಿ ಯೋಜನೆಗೆ ಡಿಪಿಆರ್ ಮಾಡದ ಹಿನ್ನೆಲೆ ರಸ್ತೆ ತಡೆ ನಡೆಸುವುದಾಗಿ ರೈತ ಮುಖಂಡರು ಈಗಾಗಲೇ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಆದರೂ ಪ್ರತಿಭಟನಾ ಸ್ಥಳಕ್ಕೆ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಬಾರದೆ ಇದ್ದಿದ್ದರಿಂದ ಆಕ್ರೋಶಗೊಂಡ ರೈತ ಮುಖಂಡರು ಮಲೆ ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿ ಕುಳಿತು ಶಾಮಿಯಾನ ಅಳವಡಿಸಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸಿದರು. ಇದರಿಂದ ರಸ್ತೆಯ ಎರಡು ಬದಿಗಳಲ್ಲಿ ಕಿಲೋಮೀಟರಗಟ್ಟಲೇ ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಯಿತು.
ಇನ್ನು ಹೆಚ್ಚುವರಿ ಜಿಲ್ಲಾಧಿಕಾರಿ 15 ದಿನಗಳ ಕಾಲಾವಕಾಶ ಕೇಳಿಕೊಂಡಿದ್ದಾರೆ. ಒಂದೊಮ್ಮೆ ದಂಟಳ್ಳಿ ಏತ ನೀರಾವರಿ ಯೋಜನೆ ಸಂಬಂಧ ಯಾವುದೇ ಪ್ರಕ್ರಿಯೆಗಳು ಪ್ರಾರಂಭವಾಗದಿದ್ದರೆ ಮತ್ತೊಮ್ಮೆ ರಸ್ತೆ ತಡೆ ನಡೆಸೋಣ ಅಲ್ಲಿಯವರೆಗೆ ಅಹೋರಾತ್ರಿ ಧರಣಿ ಮುಂದುವರಿಸೋಣ ಎಂದು ರೈತ ಮುಖಂಡರುಗಳು ತೀರ್ಮಾನ ತೆಗೆದುಕೊಂಡರು.
ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ, ಚಿಕ್ಕರಾಜ ಶೆಟ್ಟಿ, ಆನಂದಮೂರ್ತಿ ಜಗದೀಶ್ ನವೀನ್, ಉಪನಿರೀಕ್ಷಕರುಗಳಾದ ಈಶ್ವರ ರವಿ ಕರಿಬಸಪ್ಪ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಬಿಗಿ ಬಂದೋಬಸ್ ಕಲ್ಪಿಸಿದ್ದರು .