ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಸೋಮವಾರಪೇಟೆ ಬೈಪಾಸ್ ರಿಂಗ್ ರಸ್ತೆಯಲ್ಲಿ ಅಂಡರ್ ಪಾಸ್ ಹಾಗೂ ಸರ್ವೀಸ್ ರಸ್ತೆಯನ್ನು ಜರೂರಾಗಿ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೊಸದಾಗಿ ಡಿಪಿಆರ್ ಸಿದ್ಧಪಡಿಸಿ ಎಂದು ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಸೋಮವಾರಪೇಟೆ ಬೈಪಾಸ್ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಲಾರಿ, ಕಾರು ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಬಾಲಕರು ದುರ್ಮರಣಕ್ಕೀಡಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಂಗಳವಾರ ರಸ್ತೆ ಅಪಘಾತ ನಡೆದ ಸ್ಥಳಕ್ಕೇ ಭೇಟಿ ನೀಡಿ, ಅಪಘಾತ ತಡೆ ಸಂಬಂಧ ಪರ್ಯಾಯ ಕ್ರಮಕೈಗೊಳ್ಳುವುದರ ಕುರಿತು ಮಾತನಾಡಿದರು.ಸೋಮವಾರಪೇಟೆ ಬಳಿಯಿಂದ ಗುಂಡ್ಲುಪೇಟೆ, ಮೈಸೂರು ಮತ್ತು ಕೊಳ್ಳೇಗಾಲ ರಸ್ತೆಗೆ ಸೇರುವಂತೆ ಗಾಳೀಪುರ ಬಡಾವಣೆಯ ಹತ್ತಿರದಿಂದ ಹೋಗುವ ರಿಂಗ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ರಿಂಗ್ ರಸ್ತೆಯ ಪಕ್ಕದಲ್ಲಿ ಅತಿ ಹೆಚ್ಚು ಜನವಾಸವಿರುವ ಗಾಳೀಪುರ ಬಡಾವಣೆ ಇದ್ದು, ಅಲ್ಲದೇ ರಿಂಗ್ ರಸ್ತೆಯ ಪಕ್ಕದಲ್ಲಿರುವ ಕರಿವರದರಾಜಸ್ವಾಮಿ ಬೆಟ್ಟಕ್ಕೆ ವಾಯು ವಿಹಾರಕ್ಕೆ ಬರುತ್ತಿದ್ದಾರೆ. ಹಾಗೆಯೇ ನಗರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯಗಳನ್ನು ಸಾಗಿಸುವ ನಗರಸಭೆಯ ಕಸವಿಲೇವಾರಿ ವಾಹನಗಳು ಸಹ ಇದೇ ರಸ್ತೆಯಲ್ಲಿ ಹಾದುಹೋಗುತ್ತವೆ. ಈ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ನಾನು ಜಿಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಹಲವಾರು ಬಾರಿ ಒತ್ತಾಯಿಸಿದ್ದೆ ಎಂದರು.ತಕ್ಷಣದಲ್ಲಿ ಇಲ್ಲಿ ಸರ್ವಿಸ್ ರಸ್ತೆಯಾಗಬೇಕು, ಜತೆಗೆ ಅಂಡರ್ ಪಾಸ್ ನಿರ್ಮಾಣವಾಗಬೇಕು, ಜತೆಗೆ ತಡೆಗೋಡೆಯನ್ನು ನಿರ್ಮಿಸಲು ಕ್ರಮಕೈಗೊಳ್ಳಬೇಕಿದೆ. ಇವುಗಳ ನಿರ್ಮಾಣಕ್ಕೆ ಚಾಮರಾಜನಗರ ಸಂಸದ ಸುನಿಲ್ ಬೋಸ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಜತೆ ಸಭೆ ಆಯೋಜಿಸಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಿಗೆ ಯಾವ್ಯಾವ ಕೆಲಸವಾಗಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಸದಸ್ಯ ಪುಟ್ಟಸ್ವಾಮಿ, ನಗರಸಭಾ ಸದಸ್ಯ ಕಲೀಲ್ ಉಲ್ಲಾ, ಸ್ವಾಮಿ, ಮಾಜಿ ಚುಡಾ ಅಧ್ಯಕ್ಷ ಸೈಯದ್‌ರಫೀ, ಸುಹೇಲ್ ಅಲಿಖಾನ್, ಕೆಡಿಪಿ ಸದಸ್ಯ ಸಯ್ಯದ್ ಮುಸಾಯದ್, ಹರದನಹಳ್ಳಿ ಗ್ರಾಪಂ ಅಧ್ಯಕ್ಷ ಮಂಜುನಾಥ್, ಮಾದಾಪುರ ಗ್ರಾ,ಪಂ ಅಧ್ಯಕ್ಷ ರೋಪೇಶ್, ನಗರಸಭಾ ಮಾಜಿ ಸದಸ್ಯ ಹತ್ತಿಕ್‌ಅಹಮದ್, ಅಪ್ಸರ್‌ಅಹಮದ್ ಪವೀಜ್, ಇತರೆರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಜರಿದ್ದರು.9ಸಿಎಚ್ಎನ್17ಸೋಮವಾರಪೇಟೆ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಬಾಲಕರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಎನ್‌ಎಚ್ ಅಧಿಕಾರಿಗಳ ಜತೆ ಭೇಟಿ ನೀಡಿದರು.-----