ಚನ್ನಪಟ್ಟಣ: ಕೆಸಿಇಟಿ, ನೀಟ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ೬ನೇ ತರಗತಿಯಿಂದಲೇ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಾಲು ಪಬ್ಲಿಕ್ ಶಾಲೆಯಲ್ಲಿ ಹೈದರಾಬಾದ್‌ನ ಸಿರಿ ಅಕಾಡೆಮಿ ಸಹಯೋಗದೊಂದಿಗೆ ಸಿರಿರಾಮ್ ಫೌಂಡೇಶನ್ ತರಗತಿಗಳನ್ನು ಆರಂಭಿಸುತ್ತಿದೆ ಎಂದು ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ವಿ.ವೆಂಟಸುಬ್ಬಚೆಟ್ಟಿ ತಿಳಿಸಿದರು.
ಜುಲೈನಿಂದ ಆರಂಭ:
ಸಿರಿ ಅಕಾಡೆಮಿ ಅಧ್ಯಾಪಕರ ತಂಡ ಜುಲೈನಿಂದ ತರಗತಿಗಳು ನಡೆಸಿಕೊಡಲಿದೆ. ಇವರೊಂದಿಗೆ ಐಐಟಿ ಸೇರಿದಂತೆ ಪ್ರಸಿದ್ಧ ವಿಶ್ವವಿದ್ಯಾಲಯಗಳ ಹಳೆಯ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸಲು ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪಠ್ಯಕ್ರಮವನ್ನು ತಯಾರಿಸಲಾಗಿದೆ. ಅಧ್ಯಯನ ಸಾಮಗ್ರಿಯನ್ನು ಸಂಸ್ಥೆಯೇ ಒದಗಿಸಲಿದೆ ಎಂದು ತಿಳಿಸಿದರು.ಸಿರಿ ಅಕಾಡೆಮಿ ಸಂಸ್ಥಾಪಕ ಕೆ.ಎಸ್.ರಾವ್ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ತಾವು ಮುಂದೆ ಏನಾಗಬೇಕು ಎಂಬುದನ್ನು ೫ನೇ ತರಗತಿ ವೇಳೆಗೆ ನಿರ್ಧರಿಸಿ ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತಾರೆ. ಆದರೆ, ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ನಂತರ ಆ ಕುರಿತು ಯೋಚಿಸುತ್ತಾರೆ. ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಜತೆಗೆ ವಿದ್ಯಾರ್ಥಿಗಳಲ್ಲಿ ಒಂದು ಲಕ್ಷ್ಯ ಮೂಡಿಸುವ ನಿಟ್ಟಿನಲ್ಲಿ ತರಗತಿಗಳನ್ನು ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಆಸಕ್ತಿ ಯಾವ ಕ್ಷೇತ್ರದೆಡೆ ಇದೆ ಎಂದು ನಿರ್ಧರಿಸಲು ಅನುಕೂಲವಾಗುತ್ತದೆ ಎಂದರು.
ಬಾಲು ಪಬ್ಲಿಕ್ ಶಾಲೆಯ ಜಂಟಿ ಕಾರ್ಯದರ್ಶಿ ಬಾಲಸುಬ್ರಮಣ್ಯಂ ಮಾತನಾಡಿ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಅನುಕೂಲ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಕೋರ್ಸ್ ಆರಂಭಿಸಲಾಗುತ್ತಿದೆ. ವರ್ಷಕ್ಕೆ 8 ಸಾವಿರ ಶುಲ್ಕ ಪಡೆಯಲು ನಿರ್ಧರಿಸಿದ್ದು, ಇದು ಅಧ್ಯಯನ ಸಾಮಗ್ರಿ ಒಳಗೊಂಡಿರಲಿದೆ. ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ತಿಳಿಸಿದರು.
ಪೊಟೋ೧ಸಿಪಿಟಿ೧: ಚನ್ನಪಟ್ಟಣದಲ್ಲಿ ವೆಂಕಟಸುಬ್ಬಯ್ಯ ಚೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.