ಮಲಪ್ರಭಾ ನದಿ ಪ್ರವಾಹ ಎದುರಿಸಲು ಪೂರ್ವ ತಯಾರಿ ಮಾಡಿಕೊಳ್ಳಿ: ಯತ್ನಟ್ಟಿ

KannadaprabhaNewsNetwork |  
Published : Jun 29, 2024, 12:37 AM IST
ಕಮತಗಿ : ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದ ಮಲಪ್ರಭಾ ನದಿಯ ಪ್ರವಾಹದ ಮುನ್ನೆಚ್ಚರಿಕೆ ಕ್ರಮದ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಅಮೀನಗಡ ಕಂದಾಯ ನೀರಿಕ್ಷಕ ಡಿ ಎಸ್ ಯತ್ನಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ಕಮತಗಿ ಸ್ಥಳೀಯ ಪಟ್ಟಣ ಪಂಚಾಯತಿ ಕಾರ್ಯಾಲಯದ ಸಭಾಭವನದಲ್ಲಿ ಬುಧವಾರ ಮಲಪ್ರಭಾ ನದಿಯ ಪ್ರವಾಹದ ನಿರ್ವಹಣೆ ಕುರಿತು ನಡೆದ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಮತಗಿ

ಮಲಪ್ರಭಾ ನದಿಯಲ್ಲಿ ನೀರಿನ ಒಳಹರಿವು ಪ್ರಾರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಜಲಾನಯನ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ. ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬಂದು ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಅಮೀನಗಡ ಕಂದಾಯ ನೀರಿಕ್ಷಕ ಡಿ.ಎಸ್. ಯತ್ನಟ್ಟಿ ಹೇಳಿದರು.

ಸ್ಥಳೀಯ ಪಟ್ಟಣ ಪಂಚಾಯತಿ ಕಾರ್ಯಾಲಯದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಲಪ್ರಭಾ ನದಿಯ ಪ್ರವಾಹದ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕಮತಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಮಲಪ್ರಭಾ ನದಿಯಿಂದ 2009 ಹಾಗೂ 2019ರಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿತ್ತು. ಈ ಬಾರಿಯೂ ಮಲಪ್ರಭಾ ನದಿಯ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಹಾರ ಕಾರ್ಯಾ ಕೈಗೊಳ್ಳಲು ಹಾಗೂ ಪೂರ್ವ ತಯಾರಿ ಕೈಗೊಂಡು ಸಮರ್ಥವಾಗಿ ನಿರ್ವಹಿಸಲು ಎಲ್ಲ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು. ಪ್ರವಾಹಕ್ಕೆ ಬಾಧಿತವಾಗುವ ಸ್ಥಳಗಳಿಗೆ ಮುಂಚಿತವಾಗಿ ಭೇಟಿ ನೀಡಿ ಸುರಕ್ಷತಾ ಕ್ರಮಗಳ ಬಗ್ಗೆ ಸ್ಥಳೀಯರಿಗೆ ತಿಳಿವಳಿಕೆ ನೀಡಬೇಕು. ಒಂದು ವೇಳೆ ಪ್ರವಾಹ ಪರಸ್ಥಿತಿ ಎದುರಾದಲ್ಲಿ ನೆರೆ ಸಂತ್ರಸ್ತರಿಗೆ ಮೂಲ ಸೌಕರ್ಯ ಒದಗಿಸುವ ಕುರಿತು ಚರ್ಚಿಸಿ ಖಾತರಿ ಪಡಿಸಿಕೊಳ್ಳಬೇಕು, ಜಾನುವಾರಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸುವುದು, ಅವಶ್ಯಕತೆ ಕಂಡು ಬಂದಲ್ಲಿ ನೆರೆಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಪಪಂ ಸದಸ್ಯರಾದ ದೇವಿಪ್ರಸಾದ ನಿಂಬಲಗುಂದಿ, ಬಸವರಾಜ ಕುಂಬಳಾವತಿ, ಚಂದು ಕುರಿ, ಗುರಲಿಂಗಪ್ಪ ಪಾಟೀಲ, ಲಕ್ಷ್ಮಣ ಮಾದರ, ಹುಚ್ಚೇಶ ಮದ್ಲಿ, ಅಮೀನಗಡ ಉಪ ತಹಸೀಲ್ದಾರ್‌ ಎಂ. ಆರ್. ಹೆಬ್ಬಳ್ಳಿ, ಪಪಂ ಮುಖ್ಯಾಧಿಕಾರಿ ಎಫ್.ಎನ್. ಹುಲ್ಲಿಕೇರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಜಯರಾಜೇಶ್ವರಿ, ಗ್ರಾಮಲೆಕ್ಕಾಧಿಕಾರಿ ಸಚಿನ ರಾಠೋಡ, ಮುಖಂಡರಾದ ತಿಮ್ಮಣ್ಣ ಹಗೆದಾಳ, ನಾಗೇಶ ಮುರಾಳ, ಮಹಾಂತೇಶ ಬಿಸನಾಳ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹೆಸ್ಕಾಂ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

PREV