2ನೇ ಹಂತದ ಪಿಯುಸಿ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಿ

KannadaprabhaNewsNetwork | Published : Apr 23, 2024 12:48 AM

ಸಾರಾಂಶ

ಜಿಲ್ಲೆಯಲ್ಲಿ 2ನೇ ಹಂತದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸಲು ಅಗತ್ಯವಿರುವ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲೆಯಲ್ಲಿ 2ನೇ ಹಂತದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸಲು ಅಗತ್ಯವಿರುವ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2ರ ಸಿದ್ಧತಾ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1270 ವಿದ್ಯಾರ್ಥಿಗಳಿಂದ ಪರೀಕ್ಷೆಗೆ ನೋಂದಣಿ:

ದ್ವಿತೀಯ ಹಂತದ ದ್ವಿತೀಯ ಪಿಯುಸಿ ಪರೀಕ್ಷೆಯು ಏಪ್ರಿಲ್ 29ರಿಂದ ಮೇ 16ರವರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಮೊದಲ ಹಂತದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ 1099 ವಿದ್ಯಾರ್ಥಿಗಳು, ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ನೋಂದಾಯಿಸಿಕೊಂಡಿರುವ 166 ಹಾಗೂ ಖಾಸಗಿಯಾಗಿ 5 ಮಂದಿ ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1270 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೊಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಪರೀಕ್ಷೆಯಲ್ಲಿ ಅಕ್ರಮಗಳಾಗದಂತೆ ಎಚ್ಚರವಹಿಸಿ:

2ನೇ ಹಂತದ ದ್ವಿತೀಯ ಪಿಯುಸಿ ಪರೀಕ್ಷೆಗಳು ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕು ಕೇಂದ್ರಗಳ ತಲಾ 1 ಪರೀಕ್ಷಾ ಕೇಂದ್ರಗಳಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 3ಪರೀಕ್ಷಾ ಕೇಂದ್ರಗಳು ಮತ್ತು 1 ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಬಗೆಯ ಪರೀಕ್ಷಾ ಅಕ್ರಮಗಳಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೈಬರ್‌, ಜೆರಾಕ್ಸ್‌ ಅಂಗಡಿ ಮುಚ್ಚುವಂತೆ ಆದೇಶ:

ಪರೀಕ್ಷಾ ಕೇಂದ್ರದ ಕೊಠಡಿಗಳಲ್ಲಿ ಹಾಗೂ ಹೊರಾಂಗಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಕಾರ್ಯಕ್ಷಮತೆ ಸುಸ್ಥಿಯಲ್ಲಿರುವುದನ್ನು ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಬೇಕು. ದುರಸ್ತಿಯಾಗಿದ್ದಲ್ಲಿ ಸಂಚಿತ ಅನುದಾನ ಬಳಸಿ ದುರಸ್ಥಿಪಡಿಸಲು ಕ್ರಮವಹಿಸಬೇಕು. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಅಲ್ಲದೆ ಪರೀಕ್ಷಾ ಕೇಂದ್ರದ 500 ಮೀಟರ್ ವ್ಯಾಪ್ತಿಯ ಜೆರಾಕ್ಸ್ ಮತ್ತು ಸೈಬರ್ ಸೆಂಟರ್‌ಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಆದೇಶ ಹೊರಡಿಸಲಾಗುವುದು ಎಂದರು.

ಮೂಲ ಸೌಕರ್ಯ ಬಗ್ಗೆ ಗಮನ ಹರಿಸಿ:

ಪರೀಕ್ಷಾ ಕೇಂದ್ರದಲ್ಲಿ ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ ಹಾಗೂ ಗಾಳಿ, ಬೆಳಕು ಇನ್ನಿತರ ಎಲ್ಲಾ ಮೂಲ ಸೌಕರ್ಯಗಳು ಉತ್ತಮ ಸ್ಥಿತಿಯಲ್ಲಿ ಇರಬೇಕು. ಪರೀಕ್ಷಾ ಕೇಂದ್ರದ ಕೊಠಡಿಗಳ ವಿವರಗಳ ಮಾರ್ಗ ನಕ್ಷೆಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಾಗಿ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕ ಮಾಡಬೇಕು. ಪರೀಕ್ಷಾ ಕಾರ್ಯನಿರತ ಎಲ್ಲಾ ಅಧಿಕಾರಿ ಸಿಬ್ಬಂದಿಯು ಪರೀಕ್ಷಾ ಮಂಡಳಿ ನೀಡುವ ಗುರುತಿನ ಚೀಟಿ ಅಥವಾ ಇಲಾಖೆ ಕಚೇರಿಯಿಂದ ಪಡೆದ ಗುರುತಿನ ಚೀಟಿಯನ್ನು ಧರಿಸಿ ಪರೀಕ್ಷಾ ಕಾರ್ಯನಿರ್ವಹಿಸಬೇಕು ಎಂದರು.

ಪ್ರಥಮ ಚಿಕಿತ್ಸಾ ಪೆಟ್ಟಿಗೆ ನಿಯೋಜಿಸಿ:

ಪರೀಕ್ಷಾ ದಿನಗಳಂದು ವಿದ್ಯುತ್ ಸಂಪರ್ಕ ಕಡಿತಗೊಳಿಸದಿರುವ ಬಗ್ಗೆ ಚೆಸ್ಕಾಂ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಸಮರ್ಪಕ ವಿದ್ಯುತ್ ವ್ಯವಸ್ಥೆಗೆ ಕ್ರಮ ವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೊಬಸ್ತ್ ಅವಶ್ಯವಾಗಿರಬೇಕು. ಮುನ್ನೆಚ್ಚರಿಕೆಯಾಗಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಇಲಾಖೆ ವತಿಯಿಂದ ಅಗತ್ಯ ಔಷಧಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸಹಿತವಾಗಿ ಶುಶ್ರೂಷಕಿ, ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

ವಿದ್ಯಾರ್ಥಿಗಳು ಗೈರಾಗದಂತೆ ನಿಗಾವಹಿಸಿ:

ಪರೀಕ್ಷಾ ಕೇಂದ್ರಕ್ಕೆ ಸಕಾಲದಲ್ಲಿ ಹಾಜರಾಗಲು ವಿದ್ಯಾರ್ಥಿಗಳಿಗೆ ಇರುವ ಸಾರಿಗೆ ವ್ಯವಸ್ಥೆಯನ್ನು ಪರಿಶೀಲಿಸಿ ಪ್ರಾಂಶುಪಾಲರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿ ನೀಡಬೇಕು. ಅನುತ್ತೀರ್ಣರಾದ ಪ್ರತಿ ಮಕ್ಕಳು ಕೂಡ ಕಡ್ಡಾಯವಾಗಿ ಪರೀಕ್ಷೆ ಬರೆಯುವಂತೆ ಪೋಷಕರ ಮನವೊಲಿಸಿ ಅನುತ್ತೀರ್ಣರಾದ ಮಕ್ಕಳು 2ನೇ ಹಂತದ ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು. ಅದರಲ್ಲೂ ಹೆಣ್ಣುಮಕ್ಕಳು ಪರೀಕ್ಷೇಗೆ ಗೈರು ಹಾಜರಾಗದಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆಯನ್ನು ಅಧಿಕಾರಿಗಳು ಜವಾಬ್ದಾರಿಯಾಗಿ ನಿಭಾಯಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.

ಎಡಿಸಿ ಗೀತಾ ಹುಡೇದ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಬಿಇಒ ಹಾಗೂ ಪರೀಕ್ಷಾ ನೋಡಲ್ ಅಧಿಕಾರಿಗಳು, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Share this article