ಬಿಳಿಗಿರಿ ರಂಗನಾಥಸ್ವಾಮಿ ಜಾತ್ರೆಗೆ ಸಿದ್ಧತೆ ಕೈಗೊಳ್ಳಿ

KannadaprabhaNewsNetwork |  
Published : May 04, 2025, 01:33 AM IST
ಬಿಳಿಗಿರಿರಂಗನಾಥಸ್ವಾಮಿ ದೊಡ್ಡ ಜಾತ್ರೆಗೆ ಅಗತ್ಯ ಸಿದ್ದತೆ ಕೈಗೊಳ್ಳಿ ಎ.ಆರ್. ಕೃಷ್ಣ ಮೂರ್ತಿ | Kannada Prabha

ಸಾರಾಂಶ

ಬಿಳಿಗಿರಿರಂಗನಬೆಟ್ಟದ ಪ್ರವಾಸಿಮಂದಿರದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಯಳಂದೂರು ತಾಲೂಕಿನ ಪ್ರಸಿದ್ಧ ಯಾತ್ರಾಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ (ದೊಡ್ಡಜಾತ್ರೆ) ಮೇ ೧೦ ರಂದು ನಡೆಯಲಿದ್ದು ಇದಕ್ಕಾಗಿ ಬರುವ ಭಕ್ತಾಧಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ಶಾಸಕ ಎ.ಆರ್. ಕೃಷ್ಣ ಮೂರ್ತಿ ಸೂಚಿಸಿದರು. ಶನಿವಾರ ಬಿಳಿಗಿರಿ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಥೋತ್ಸವಕ್ಕೆ ಹೆಚ್ಚು ಭಕ್ತಾಧಿಗಳು ಆಗಮಿಸುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಬಸ್‌ಗಳನ್ನು ಹೆಚ್ಚು ಸಂಖ್ಯೆಯಲ್ಲಿ ಕಲ್ಪಿಸಬೇಕು. ಬಿಳಿಗಿರಿರಂಗನಬೆಟ್ಟ ಗುಡ್ಡಗಾಡು ಅರಣ್ಯ ಪ್ರದೇಶವಾಗಿರುವುದರಿಂದ ಸುಸಜ್ಜಿತ ಬಸ್‌ಗಳನ್ನು ನಿಯೋಜಿಸಬೇಕು. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಭಕ್ತಾಧಿಗಳು ಕ್ಷೇತ್ರಕ್ಕೆ ಬರಲು ಅನುಕೂಲವಾಗುವಂತೆ ಎಲ್ಲ ಮಾರ್ಗಗಳಿಂದಲೂ ಬಸ್ಸುಗಳ ವ್ಯವಸ್ಥೆಯಾಗಬೇಕು ಎಂದರು.

ರಥೋತ್ಸವಕ್ಕೆ ಹೆಚ್ಚು ಜನ ಸೇರುವ ದೇವಾಲಯದ ಆವರಣ, ರಥದಬೀದಿ, ಕಲ್ಯಾಣಿಕೊಳ, ದಾಸೋಹ, ಪಾಕಿಂಗ್ ಮತ್ತಿತ್ತರ ಕಡೆ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಇರಬೇಕು. ಗೃಹರಕ್ಷಕದಳ ಸಿಬ್ಬಂದಿ ನಿಯೋಜಿಸಬೇಕು. ಬ್ಯಾರಿಕೇಡ್, ಏಕಮುಖ ಸಂಚಾರ ಇನ್ನಿತರ ಅಗತ್ಯ ಕ್ರಮಗಳನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕು ಎಂದರು. ರಸ್ತೆಗಳಲ್ಲಿ ಹಳ್ಳಕೊಳ್ಳಗಳಿದ್ದಲ್ಲಿ ಗ್ರಾವಲ್ ತುಂಬಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಜಾತ್ರಾ ನಿಮಿತ್ತ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿ ಸಿಬ್ಬಂದಿಗೆ ವಾಸ್ತವ್ಯಕ್ಕಾಗಿ ಕೊಠಡಿಗಳನ್ನು ಕಾಯ್ದಿರಿಸಬೇಕು. ಬ್ರಹ್ಮರಥೋತ್ಸವ ಹಿನ್ನಲೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಪ್ರತಿನಿತ್ಯ ನಡೆಯುವುದರಿಂದ ಮೇ ೧೫ರವರೆಗೂ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಇದರ ಸೂಕ್ತ ಮೇಲ್ವಿಚರಣೆಗಾಗಿ ಅಗತ್ಯ ಸಿಬ್ಬಂದಿಗಳನ್ನ ನಿಯೋಜಿಸಬೇಕು ಎಂದರು.

ಭಕ್ತಾದಿಗಳಿಗೆ ನೀರು ಪೂರೈಕೆ ಸಮರ್ಪಕವಾಗಿರಬೇಕು. ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ಜಾತ್ರಾ ಸಂದರ್ಭಗಳಲ್ಲಿ ಪ್ರಸ್ತುತ ಇರುವ ಎಲ್ಲಾ ಕೊಳವೆ ಬಾವಿಗಳನ್ನು ಸುಸ್ಥಿಯಲ್ಲಿಟ್ಟುಕೊಳ್ಳಬೇಕು. ತಾತ್ಕಾಲಿಕವಾಗಿ ವಾಟರ್ ಟ್ಯಾಂಕ್‌ಗಳಿಂದಲೂ ಶುದ್ದ ಕುಡಿಯುವ ನೀರು ಸರಬರಾಜು ಮಾಡಬೇಕು.

ಮೇ ೮ ರಿಂದ ೧೨ರವರೆಗೆ ಸ್ವಚ್ಛತಾ ಕಾರ್ಯಕ್ಕಾಗಿ ಅಗತ್ಯ ಸಂಖ್ಯೆಯಲ್ಲಿ ಪೌರಕಾರ್ಮಿಕ ಸಿಬ್ಬಂದಿಯನ್ನ ನಿಯೋಜನೆ ಮಾಡಬೇಕು. ಕಸ ವಿಲೇವಾರಿಗೆ ಹೆಚ್ಚುವರಿ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಭಕ್ತಾಧಿಗಳ ಆರೋಗ್ಯ ಹಿತದೃಷ್ಟಿಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆದು ವೈದ್ಯರು ಸಿಬ್ಬಂದಿಯೊಂದಿಗೆ ತುರ್ತು ವಾಹನವನ್ನೂ ಸಹ ಸನ್ನದ್ದವಾಗಿರಿಸಿ ಕೊಳ್ಳಬೇಕು. ಕುಡಿಯುವ ನೀರಿನ ಪರೀಕ್ಷೆ ಮಾಡಿಸಿ ನೀರಿನ ಶುದ್ದತೆಯ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.

ಇದೇ ಸಂದರ್ಭದಲ್ಲಿ ರಥೋತ್ಸವಕ್ಕೆ (ದೊಡ್ಡ ಜಾತ್ರೆಗೆ) ಬಿಳಿಗಿರಿರಂಗನಬೆಟ್ಟಕ್ಕೆ ದ್ವಿಚಕ್ರ ವಾಹನಗಳಲ್ಲಿ ತೆರಳುವುದನ್ನು ನಿಬಂಧಿಸಲು ನಿರ್ಧರಿಸಲಾಯಿತು. ಯಳಂದೂರು, ಚಾಮರಾಜನಗರ ತಾಲೂಕು ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಚೆಕ್‌ಪೋಸ್ಟ್ ಬಳಿ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲು ನಿರ್ಧರಿಸಲಾಯಿತು. ದ್ವಿಚಕ್ರ ವಾಹನ ನಿಲುಗಡೆ ಸ್ಥಳದಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬಿಳಿಗಿರಿರಂಗನಬೆಟ್ಟದ ಜಾತ್ರೆಗೆ ಬರಲು ಅವಕಾಶ ಮಾಡಿಕೊಡಲು ತೀರ್ಮಾನಿಸಲಾಯಿತು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರು ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ಐ.ಈ. ಬಸವರಾಜು, ಡಿವೈಎಸ್‌ಪಿ ಧಮೇಂದ್ರ, ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಮಾದೇವ, ಅರ್ಚಕ ಎ.ಎಸ್.ರವಿಕುಮಾರ್, ದೇವಾಲಯದ ಕಾರ್ಯನಿರ್ವಾಕಧಿಕಾರಿ ವೈ.ಎನ್.ಮೋಹನ್ ಕುಮಾರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕೇತಮ್ಮ, ರಾಜಣ್ಣ, ವೆಂಕಟರಾಮು, ಗ್ರಾಪಂ ಸದಸ್ಯ ಪ್ರತೀಪ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ, ಯಳಂದೂರು ತಾಪಂ ಇಒ ಉಮೇಶ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲಿಂಗರಾಜು ಸಭೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ