ಪರೀಕ್ಷೆಗಳು ಸುಗಮವಾಗಿ ನಡೆಯಲು ಸಿದ್ಧತೆ ಮಾಡಿಕೊಳ್ಳಿ

KannadaprabhaNewsNetwork |  
Published : Mar 21, 2024, 01:00 AM IST
ಜಿಲ್ಲಾಧಿಕಾರಿ ನಿತೇಶ ಪಾಟೀಲ | Kannada Prabha

ಸಾರಾಂಶ

ಪರೀಕ್ಷಾ ಅಕ್ರಮಗಳು, ಅನಗತ್ಯ ಗೊಂದಲ, ಅನಾನುಕೂಲಗಳನ್ನು ಉಂಟಾಗದಂತೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ, ಪರೀಕ್ಷಾ ನಿಯೋಜಿತ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪರೀಕ್ಷಾ ಅಕ್ರಮಗಳು, ಅನಗತ್ಯ ಗೊಂದಲ, ಅನಾನುಕೂಲಗಳನ್ನು ಉಂಟಾಗದಂತೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ, ಪರೀಕ್ಷಾ ನಿಯೋಜಿತ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಶಿಕ್ಷಣ ಇಲಾಖೆಯ ವತಿಯಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾ.25 ರಿಂದ ಏ.6 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳನ್ನು ಯಾವುದೇ ಅಕ್ರಮ ಚಟುವಟಿಕೆಗೆ ಅವಕಾಶ ಕೊಡದೇ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಬೇಕು ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಮೊಬೈಲ್ ಫೋನ್, ಕ್ಯಾಲ್ಕುಲೇಟರ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದು ನಿಷೇಧಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಆಯಾ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮಾಡಬೇಕು ಎಂದು ಸೂಚನೆ ನೀಡಿದರು.

ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಗತ್ಯ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರು, ಅಧಿಕಾರಿ, ಸಿಬ್ಬಂದಿಯನ್ನು ಹೊರತುಪಡಿಸಿ, ಇನ್ನುಳಿದವರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದರು.

ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಸೂಚನೆಗಳನ್ನು ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿತೇಶ್ ಪಾಟೀಲ ಅವರು ನಿರ್ದೇಶನ ನೀಡಿದರು.

ಪರೀಕ್ಷಾ ಪೂರ್ವ ಹಾಗೂ ಪರೀಕ್ಷಾ ಸಮಯದಲ್ಲಿ ಪಶ್ನೆ ಪತ್ರಿಕೆ ಸೋರಿಕೆ ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಶಿಕ್ಷಕರು, ಪರೀಕ್ಷಾ ನಿಯೋಜಿತ ಸಿಬ್ಬಂದಿ ಜವಾಬ್ದಾರಿ ಹಾಗೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು ಸೂಚನೆ ನೀಡಿದರು.

ಪರೀಕ್ಷೆ ಕೇಂದ್ರಕ್ಕೆ ಸಿಸಿಟಿವಿ, ಕುಡಿಯುವ ನೀರು, ಶೌಚಾಲಯ, ಕೊಠಡಿ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಒದಗಿಸುವ ಕಾರ್ಯವೂ ವೇಗವಾಗಿ ನಡೆಯುತ್ತಿದೆ. ಸುಗಮವಾಗಿ ಪರೀಕ್ಷೆ ನಡೆಸುವಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ಮೋಹನ ಕುಮಾರ್ ಹಂಚಾಟೆ ಮಾಹಿತಿ ನೀಡಿದರು.

ಪ್ರಾಚಾರ್ಯ ಎಸ್. ಡಿ ಗಂಜಿ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ.ಆರ್.ಸಿ ಸಮನ್ವಯ ಅಧಿಕಾರಿಗಳು, ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಗಳು, ಎಸ್.ಎಸ್.ಎಲ್.ಸಿ ಕೇಂದ್ರಗಳ ಪರೀಕ್ಷಾ ಮುಖ್ಯ ಅಧೀಕ್ಷಕರು, ಸಹಾಯಕ ಅಧಿಕ್ಷಕರು ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ