ಬಿತ್ತನೆ ಕಾರ್ಯಕ್ಕೆ ತೊಂದರೆಗಳಾಗದಂತೆ ಸಿದ್ಧತೆ ಮಾಡಿಕೊಳ್ಳಿ-ಶಾಸಕ ಬಣಕಾರ

KannadaprabhaNewsNetwork |  
Published : Apr 25, 2026, 02:00 AM IST
ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಮುಂಗಾರು ಹಂಗಾಮಿನ ಸಿದ್ಧತೆ ಹಾಗೂ ಕೃಷಿ ಪರಿಕರ ಮಾರಾಟಗಾರರ ಜಾಗೃತಿ ಸಭೆಯಲ್ಲಿ ಶಾಸಕ ಯು.ಬಿ. ಬಣಕಾರ ಮಾತನಾಡಿದರು. | Kannada Prabha

ಸಾರಾಂಶ

ಮುಂಗಾರು ಹಂಗಾಮಿಗೆ ರೈತರ ಬಿತ್ತನೆ ಕಾರ್ಯಕ್ಕೆ ತೊಂದರೆಗಳಾಗದಂತೆ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರದಲ್ಲಿ ಪೂರೈಸಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚನೆ ನೀಡಿದರು.

ಹಿರೇಕೆರೂರು: ಮುಂಗಾರು ಹಂಗಾಮಿಗೆ ರೈತರ ಬಿತ್ತನೆ ಕಾರ್ಯಕ್ಕೆ ತೊಂದರೆಗಳಾಗದಂತೆ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರದಲ್ಲಿ ಪೂರೈಸಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚನೆ ನೀಡಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ಶುಕ್ರವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಸಿದ್ಧತೆ ಹಾಗೂ ಕೃಷಿ ಪರಿಕರ ಮಾರಾಟಗಾರರ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಬೀಜ ರಸಗೊಬ್ಬರ ರೈತರಿಗೆ ತೊಂದರೆಯಾಗದಂತೆ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಕೃಷಿ ಪರಿಕರ ಮಾರಾಟಗಾರರು ಕಳಪೆ ಬೀಜ ವಿತರಣೆ ಮಾಡಬಾರದು ಹಾಗೂ ಗೊಬ್ಬರವನ್ನು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು. ವ್ಯವಹಾರದ ಜೊತೆ ಮಾನವೀಯತೆ ರೂಢಿಸಿಕೊಂಡು ರೈತರ ಸೇವೆ ಮಾಡಬೇಕು ಎಂದರು.ಒಂದೇ ತರಹದ ರಸಗೊಬ್ಬರಗಳ ಬಳಕೆ ಬದಲಾಗಿ ಪರ್ಯಾಯ ಸಂಯುಕ್ತ ರಸಗೊಬ್ಬರಗಳನ್ನು ಬಳಸುವಂತೆ ರೈತರು ಒಂದೇ ತರಹದ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಿಗೆ ಮಾರುಹೋಗದೆ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಪರ್ಯಾಯ ಕೃಷಿ ಪರಿಕರಗಳನ್ನು ಉಪಯೋಗಿಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಉತ್ತಮ ಇಳುವರಿ ಪಡೆಯುವಂತೆ ರೈತರಿಗೆ ಸಲಹೆ ನೀಡಿದರು. ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ, ಕೊರಚರ ಮಾತನಾಡಿ, ಹಿರೇಕೆರೂರ, ರಟ್ಟೀಹಳ್ಳಿ ತಾಲೂಕಿಗೆ 17015 ಮೆ.ಟನ್ ಯೂರಿಯಾ, 4710.60 ಮೆ.ಟನ್ ಡಿ.ಎ.ಪಿ, 12313 ಮೆ.ಟನ್ ಕಾಂಪ್ಲೆಕ್ಸ್ ರಸಗೊಬ್ಬರಗಳ ಬೇಡಿಕೆ ಇದ್ದು, ಸರ್ಕಾರದಿಂದ ಬೇಡಿಕೆಗೆ ಅನುಸಾರ ರಸಗೊಬ್ಬರ ಸಂಗ್ರಹ ಮಾಡುವುದರಿಂದ ಕೃತಕ ಅಭಾವದ ವದಂತಿಗಳಿಗೆ ಒಳಗಾಗಿ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಸಂಗ್ರಹಿಸಬಾರದು ಎಂದು ಮನವಿ ಮಾಡಲಾಗಿದೆ. ರೈತರು ಒಂದೇ ಸಂಸ್ಥೆ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯ ಹಾಗೂ ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಡಿ.ಎ.ಪಿ, ಗಂಧಕ ಹಾಗೂ ಪೊಟ್ಯಾಸಿಯಂ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳನ್ನು ಸಮತೋಲಿತವಾಗಿ ಬಳಸಬಹುದಾಗಿದೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಮಾರುತಿ ಫಕ್ಕೀರಪ್ಪ ಅಂಗರಗಟ್ಟಿ ಮಾತನಾಡಿ, 2026-27ರ ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಯೂರಿಯಾ ಬಳಕೆಯನ್ನು ನಿಯಂತ್ರಿಸಲು ಕೃಷಿ ಇಲಾಖೆ ಹೊಸ ಮಾರ್ಗಸೂಚಿ ಜಾರಿಗೊಳಿಸಿದೆ. ಕೆ-ಕಿಸಾನ್ ತಂತ್ರಾಂಶದಡಿ ಗೊಬ್ಬರ ಪಡೆಯಲು ರೈತರು ಅಧಾರ್ ಹಾಗೂ ಪಹಣಿಯನ್ನು ಎಫ್‌ಐಡಿ ಗೆ ಜೋಡಣೆ ಮಾಡಿರುವುದು ಕಡ್ಡಾಯವಾಗಿದೆ. ಎಫ್‌ಐಡಿ ಹೊಂದಿರದ ರೈತರು ತಕ್ಷಣ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಕೃಷಿ ಪರಿಕರ ಮಾರಾಟಗಾರರು ಆಧಾರ್ ಪರಿಶೀಲನೆಯಿಲ್ಲದೆ ಗೊಬ್ಬರ ನೀಡಬಾರದು ಹಾಗೂ ರೈತರಿಗೆ ಬಿಲ್ ನೀಡುವುದು ಕಡ್ಡಾಯವಾಗಿದೆ. ಜೊತೆಗೆ ಅಂಗಡಿಗಳಲ್ಲಿ ದಾಸ್ತಾನು ಹಾಗೂ ಪರವಾನಗಿ ವಿವರಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಅನಧಿಕೃತವಾಗಿ ಮನೆಬಾಗಿಲಿಗೆ ಬರುವವರಿಂದ ಕೃಷಿ ಪರಿಕರಗಳನ್ನು ಖರೀದಿಸಬಾರದು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಯೂರಿಯಾ ಬಳಕೆಯಿಂದ ಮಾನವನ ಆರೋಗ್ಯ ಮಣ್ಣು ಮತ್ತು ಪರಿಸರದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳು ಮತ್ತು ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸ ಗೊಬ್ಬರಗಳ ಬಳಕೆ ಕುರಿತು ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.ಸಿಪಿಐ ಮಂಜುನಾಥ್ ಪಂಡಿತ್ ಜಾಗ್ರತ ದಳದ ಜಂಟಿ ಕೃಷಿ ನಿರ್ದೇಶಕ ಶಿವಲಿಂಗಪ್ಪ ವಿ.ಕೆ., ಕೃಷಿ ಪರಿಕರಗಳ ಮಾರಾಟಗಾರ ಸಂಘದ ಹಿರೇಕೆರೂರು ತಾಲೂಕು ಅಧ್ಯಕ್ಷ ಸಣ್ಣಗೌಡ ಪಾಟೀಲ, ರಟ್ಟಿಹಳ್ಳಿ ತಾಲೂಕು ಅಧ್ಯಕ್ಷ ಬಸವರಾಜ ಹೊಸಮನಿ, ಪಪಂ ಮಾಜಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಕೃಷಿ ಅಧಿಕಾರಿ ರಾಮನಗೌಡ ಹಾದಿಮನಿ, ನಾಗರತ್ನಾ ಕಾರಿಕಂಟಿ ಸೇರಿದಂತೆ ಕೃಷಿ ಪರಿಕರ ಮಾರಾಟಗಾರರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಬಸವ ಜಯಂತಿ ಆಚರಣೆ!