ಹಾವೇರಿ: ಟೆಂಡರ್ ಅವಧಿ ಮುಗಿದರೂ ಕೇವಲ ಶೇ. 20-30ರಷ್ಟು ಕೆಲಸ ಮಾಡಿರುವುದು ನಿಮ್ಮ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಟೆಂಡರ್‌ನಲ್ಲಿ ಏಕೆ ಭಾಗವಹಿಸುತ್ತೀರಿ ಎಂದು ವಿಧಾನಸಭೆಯ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅವರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕರ್ನಾಟಕ ಜಲ ಮಂಡಳಿ, ನಗರಾಭಿವೃದ್ಧಿ ಕೋಶ, ನಗರಸಭೆ ಹಾಗೂ ಕೆಯುಐಡಿಎಫ್‌ಸಿ, ಕೆ.ಯು.ಡಬ್ಲ್ಯೂಎಸ್ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಾವೇರಿ ನಗರಕ್ಕೆ ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿ ಆದೇಶ ಪಡೆದು 3 ವರ್ಷಗಳಾದರೂ ಭೌತಿಕವಾಗಿ ಪೂರ್ಣಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಎಷ್ಟು ವರ್ಷಗಳಲ್ಲಿ ಕೆಲಸ ಮುಗಿಸುತ್ತೀರಿ? ಕೂಡಲೇ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಕೆಲಸಕ್ಕೆ ವೇಗ ನೀಡಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಅಧಿಕಾರಿಗಳಿಗೆ ಗಡುವು: ನೀರಿನ ಜಾಲತಾಣ ವ್ಯವಸ್ಥೆಯನ್ನು ಸರಿಪಡಿಸಲು ತುರ್ತಾಗಿ ಅಂದಾಜು ಪಟ್ಟಿ ಹಾಗೂ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಈ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಅಧಿಕಾರಿಗಳ ವಿರುದ್ಧ ಗರಂ: ಕಾಮಗಾರಿಗಳ ವಿವರಗಳನ್ನು ಸರಿಯಾಗಿ ನೀಡದ ಮತ್ತು ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕರು, ಕರ್ತವ್ಯ ಲೋಪ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಾಂತೇಶ ದಾನಮ್ಮನವರ, ಕೆ.ಯು.ಡಬ್ಲ್ಯೂಎಸ್ ಮುಖ್ಯ ಎಂಜಿನಿಯರ್ ಸುಭಾಷ್ ನಾಯಕ್ವಾಡ್, ತಾಂತ್ರಿಕ ಪರಿಣಿತರಾದ ಜಯರಾಮ್, ಬ್ಲೂ ವಾಟರ್ ಕನ್ಸಲ್ಟೆಂಟ್‌ನ ಪ್ರತಿನಿಧಿಗಳು, ಕಾರ್ಯನಿರ್ವಾಹಕ ಅಭಿಯಂತರರಾದ ಜಗದೀಶ್ ಹೊಸಮನಿ, ಮಧುರಾ, ನಗರಾಭಿವೃದ್ಧಿ ಇಲಾಖೆ ಹಾಗೂ ನಗರಸಭೆಯ ಸಿಬ್ಬಂದಿಗಳು ಇದ್ದರು. 10 ಕೋಟಿ ಅನುದಾನದ ಘೋಷಣೆ: ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗಿದೆ. ನಗರದ ಕುಡಿಯುವ ನೀರಿನ ಜಾಲತಾಣ ವ್ಯವಸ್ಥೆ ಸರಿಪಡಿಸಲು ಸರ್ಕಾರದಿಂದ 10 ಕೋಟಿ ರು.ಗಳ ವಿಶೇಷ ಅನುದಾನ ನೀಡಲು ಒಪ್ಪಿಗೆ ದೊರೆತಿದೆ ಎಂದು ವಿಧಾನಸಭೆ ಉಪಸಭಾಪತಿ, ಶಾಸಕ ರುದ್ರಪ್ಪ ಲಮಾಣಿ ಸಭೆಯಲ್ಲಿ ಮಾಹಿತಿ ನೀಡಿದರು.